ಬೆಂಗಳೂರು: ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಮತ್ತು ಐಟಿ ದಾಳಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದನ್ನು ಖಂಡಿಸಿ ನಡೆದ ಪ್ರತ್ಯೇಕ ಬಂದ್ ಹಾಗೂ ಪ್ರತಿಭಟನೆಗಳಿಂದ ರಾಜ್ಯದಲ್ಲಿ ಉಂಟಾದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ-ಪಾಸ್ತಿ ನಷ್ಟದ ಪ್ರಮಾಣ ಅಂದಾಜಿಸಲು ಇಬ್ಬರು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು “ಕ್ಲೇಮು ಕಮೀಷನರ್’ ಆಗಿ ನೇಮಕ ಮಾಡಿ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ.
ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿ 2018ರಲ್ಲಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹಾಗೂ ಇತರರು ಕರೆ ನೀಡಿದ್ದ ಕರ್ನಾಟಕ ಬಂದ್ ವಿರೋಧಿಸಿ ಶ್ರದ್ಧಾ ಪೋಷಕರ ಸಂಘ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿದೇಶನಾಲಯ ಬಂಧಿಸಿದ್ದನ್ನು ಖಂಡಿಸಿ 2019ರಲ್ಲಿ ರಾಮನಗರ, ಕನಕಪುರ ತಾಲೂಕಿನಲ್ಲಿ ನಡೆದ ಬಂದ್-ಪ್ರತಿಭಟನೆ ಆಕ್ಷೇಪಿಸಿ ರವಿಕುಮಾರ್ ಕಂಚನಹಳ್ಳಿ ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಅದರಂತೆ, ಮಹದಾಯಿ ನ್ಯಾಯಾಧೀಕರಣದ ತೀರ್ಪು ಖಂಡಿಸಿ 2018ರ ಜ.25, ಫೆ.4 ಮತ್ತು ಏ.12ರಂದು ಕರ್ನಾಟಕ ಬಂದ್ ನಡೆಸಲಾಗಿದೆ. ಈ ವೇಳೆ ಉಂಟಾದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಪ್ರಮಾಣ ಅಂದಾಜಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಮಹ್ಮದ್ ಗೌಸ್ ಎಂ. ಪಟೇಲ್ ಅವರನ್ನು ಮತ್ತು ಐಟಿ ದಾಳಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದ್ದನ್ನು ಖಂಡಿಸಿ 2019ರ ಫೆ.4ರಿಂದ 11ರವರೆಗೆ ರಾಮನಗರ ಜಿಲ್ಲೆಯ ಕನಕಪುರ, ಚನ್ನಪಟ್ಟಣ ಸೇರಿದಂತೆ ವಿವಿಧ ಕಡೆ ನಡೆದ ಬಂದ್ ಮತ್ತು ಪ್ರತಿಭಟನೆ ವೇಳೆ ಉಂಟಾದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಅಂದಾಜು ಮಾಡಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ.ಆರ್. ಬೆನಕನಹಳ್ಳಿ ಅವರನ್ನು ಕ್ಲೇಮು ಕಮಿಷರ್‌ಗಳನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಸಿಬ್ಬಂದಿ ನೇಮಿಸಲು 3 ತಿಂಗಳ ಗಡುವು: ಈ ಆದೇಶದ ಪ್ರತಿ ಹೈಕೋರ್ಟ್ ವೆಬ್ ಸೈಟ್‌ನಲ್ಲಿ ಲಭ್ಯವಾದ ದಿನದಿಂದ ಮೂರು ತಿಂಗಳೊಳಗೆ ಕ್ಲೇಮು ಕಮೀಷನರ್ ಹಾಗೂ ಅವರಿಗೆ ಒದಗಿಸುವ ಸಿಬ್ಬಂದಿ ವರ್ಗವನ್ನು ನೇಮಿಸಿ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಅದಾದ ಆರು ತಿಂಗಳಲ್ಲಿ ಕ್ಲೇಮು ಕಮೀಷನರ್‌ಗೆ ಸುಸಜ್ಜಿತ ಕಚೇರಿ, ಕಾರು, ಚಾಲಕ ಮತ್ತು ಪೀಠೊಪಕರಣ ಸೇರಿದಂತೆ ಎಲ್ಲಾ ಮೂಲ ಸೌಕರ್ಯ ಒದಗಿಸಬೇಕು. ಇನ್ನೂ ಸರ್ಕಾರ ಒದಗಿಸಿರುವ ಮೌಲ್ಯ ಮಾಪಕರ ಪಟ್ಟಿಯಲ್ಲಿ ಯಾರನ್ನು ತಮ್ಮ ಸಲಹೆಗಾರರಾಗಿ ನಿಯೋಜಿಸಬೇಕು ಎಂಬುದನ್ನು ಕ್ಲೇಮು ಕಮೀಷನರ್ ನಿರ್ಧರಿಸಬೇಕು. ಅವರು ಕಾಲ ಕಾಲಕ್ಕೆ ಸೂಚಿಸಿದ ಮೌಲ್ಯ ಮಾಪಕರನ್ನು ಸಲಹಾಗಾರರನ್ನಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.