ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದಿಸಿದ ಆರೋಪ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ತಡೆ ನೀಡಿರುವ ಮಧ್ಯಾಂತರ ಆದೇಶವನ್ನು ಹೈಕೋರ್ಟ್ ಎ.6ರ ವರೆಗೆ ವಿಸ್ತರಿಸಿದೆ.
ಸಿಬಿಐ ತನಿಖೆಗೆ ತಡೆ ಕೋರಿ ಹಾಗೂ ಸಿಬಿಐ ತನಿಖೆಗೆ ಅನುಮತಿ ನೀಡಿದ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಈ ವೇಳೆ ಡಿಕೆಶಿ ಪರ ಹಿರಿಯ ವಕೀಲ ಸಿ.ಎಚ್. ಜಾಧವ್, ಸಿಬಿಐ ತನಿಖೆಗೆ ನೀಡಿರುವ ಮಧ್ಯಾಂತರ ತಡೆಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು. ಇದೇ ವೇಳೆ ಸಿಬಿಐ ತನಿಖೆಗೆ ಅನುಮತಿ ನೀಡಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಇನ್ನೊಂದು ಅರ್ಜಿಯನ್ನು ಎ.6ಕ್ಕೆ ವಿಚಾರಣೆಗೆ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ನೀಡಿರುವ ಮಧ್ಯಾಂತರ ತಡೆಯನ್ನು ಎ.6ರವರೆಗೆ ವಿಸ್ತರಿಸಲಾಗಿದೆ.
ಇದಕ್ಕೂ ಮೊದಲು ಸಿಬಿಐ ತನಿಖೆಗೆ ಅನುಮತಿ ನೀಡಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರ ದಲ್ಲಿ ಪ್ರಾಸಿಕ್ಯೂಶನ್ ನಿಧಾನಗತಿ ಅನುಸರಿಸುತ್ತಿರುವುದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಸಿಬಿಐ ಪರ ಪಿ. ಪ್ರಸನ್ನಕುಮಾರ್ ಹಾಜರಿದ್ದರು.