ಬೆಂಗಳೂರು: ಸತ್ತವರನ್ನು ತಂದು ನಿಲ್ಲಿಸುತ್ತೀರಿ, ಉತ್ಸವಗಳನ್ನು ಮಾಡುತ್ತೀರಿ. ಆದರೆ ಬಡ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಮನಸ್ಸು ಇಲ್ಲವೆಂದರೆ ಸರಕಾರಕ್ಕೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ…
ಸರಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ ವಿತರಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲನೆ ಮಾಡದ ರಾಜ್ಯ ಸರಕಾರವನ್ನು ರಾಜ್ಯ ಹೈಕೋರ್ಟ್ ತೀಕ್ಷ್ಣ ವಾಗಿ ತರಾಟೆಗೆ ತೆಗೆದುಕೊಂಡದ್ದು ಹೀಗೆ.
ಸರಕಾರಿ ಶಾಲಾ ಮಕ್ಕಳಿಗೆ ಎರಡು ಜತೆ ಸಮವಸ್ತ್ರ, ಒಂದು ಜತೆ ಶೂ ಹಾಗೂ 2 ಜತೆ ಸಾಕ್ಸ್ ನೀಡುವಂತೆ 2019ರ ಆ. 26ರಂದು ಹೈಕೋರ್ಟ್ ನೀಡಿರುವ ಆದೇಶ ವನ್ನು ಸಮರ್ಪಕವಾಗಿ ಪಾಲಿಸಿಲ್ಲ ಎಂದು ಮೂಲ ಅರ್ಜಿದಾರ ಕೊಪ್ಪಳ ಜಿಲ್ಲೆಯ 8 ವರ್ಷದ ಮಾ| ಮಂಜುನಾಥ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ| ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ 2019ರ ಆ. 26ರಂದು ನೀಡಿದ್ದ ಆದೇಶ ವನ್ನು ಪೂರ್ಣಪ್ರಮಾಣದಲ್ಲಿ ಪಾಲನೆ ಮಾಡುವಲ್ಲಿ ಸರಕಾರ ವಿಫಲವಾಗಿರುವುದನ್ನು ಗಮನಿಸಿದ ನ್ಯಾ| ಬಿ. ವೀರಪ್ಪ ಸರಕಾರದ ಧೋರಣೆಯನ್ನು ಕಟುಮಾತುಗಳಲ್ಲಿ ಟೀಕಿಸಿದರು.
ಸಾಂವಿಧಾನಿಕ ಬದ್ಧತೆ ನೆರವೇರಿಸಿ ಯಾವ್ಯಾವುದಕ್ಕೋ ಕೋಟ್ಯಂತರ ರೂ. ಖರ್ಚು ಮಾಡ ಲಾಗುತ್ತದೆ. ಆದರೆ ಮಕ್ಕಳಿಗೆ ಸಮವಸ್ತ್ರ ಕೊಡಲು ಆಗುವುದಿಲ್ಲ. ಪ್ರತಿಮೆ, ಪುತ್ಥಳಿ ಸ್ಥಾಪನೆಯ ಮೂಲಕ ಸತ್ತವರನ್ನು ತಂದು ನಿಲ್ಲಿಸುತ್ತೀರಿ, ಉತ್ಸವಗಳನ್ನು ಮಾಡು ತ್ತೀರಿ. ಆದರೆ ಮಕ್ಕಳಿಗೆ ಬಟ್ಟೆ ಕೊಡಲು ಆಗುವುದಿಲ್ಲ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೂಂದಿಲ್ಲ. ಸರಕಾರ ತನ್ನ ಸಾಂವಿಧಾನಿಕ ಹೊಣೆ ಗಾರಿಕೆ ನಿಭಾಯಿಸಲಿ. ಇಲ್ಲದಿದ್ದರೆ ಅಂತಹವರು ಹುದ್ದೆ ಗಳಿಗೆ ಬರಬಾರದು. ನ್ಯಾಯಾಲಯದ ಆದೇಶ ಪಾಲಿಸಲು ಆಗುವುದಿಲ್ಲ ಎಂದರೆ ಅಂತಹ ಅಧಿಕಾರಿಗಳು ಹುದ್ದೆ ಯಲ್ಲಿ ಮುಂದುವರಿಯಲು ಅನರ್ಹರು. ಹೈಕೋರ್ಟ್ ಆದೇಶವನ್ನು ಮೇಲಿನ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದಾದರೂ ಅಫಿದಾವಿತ್ ಸಲ್ಲಿಸಿ ಎಂದು ನ್ಯಾಯಪೀಠ ಚಾಟಿ ಬೀಸಿತು.
Related Articles
ರಕ್ತ-ಚರ್ಮ ತಿನ್ನುವುದು ಬಾಕಿ
ಸಂವಿಧಾನದ ಕಲಂ 21 (ಎ), 24, ಆರ್‌ಟಿಇ ಕಾಯ್ದೆಯ ಸೆಕ್ಷನ್ 3ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿವರವಾದ ಆದೇಶ ನೀಡಿದೆ. ಅದನ್ನು ಪಾಲಿಸುವ ಭರವಸೆಯನ್ನು ಸರಕಾರ ತಾನೇ ಕೊಟ್ಟಿದೆ. 2019-20 ಮತ್ತು 2020-21ನೇ ಸಾಲಿನಲ್ಲಿ ಸರಕಾರಿ ಶಾಲೆಯ ಮಕ್ಕಳಿಗೆ 2 ಜತೆ ಸಮವಸ್ತ್ರ, 1 ಜತೆ ಶೂ ಮತ್ತು 2 ಜತೆ ಸಾಕ್ಸ್ ಒದಗಿಸಲು ಅಗತ್ಯ ಹಣವನ್ನು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿ ಜಂಟಿ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಸರಕಾರ ಅಫಿದಾವಿತ್ ಹಾಕಿದೆ. ಆದರೂ ಆದೇಶ ಪಾಲನೆ ಮಾಡಿಲ್ಲ. ಮಕ್ಕಳು ಸಮವಸ್ತ್ರ ಬೇಕು ಎಂದು ಅರ್ಜಿ ಹಾಕಬೇಕು, ಆಗಲೂ ಆಗಲಿಲ್ಲ ಎಂದು ನ್ಯಾಯಾಂಗ ನಿಂದನೆ ಅರ್ಜಿ ಹಾಕಬೇಕು. ಇದ್ಯಾವ ವ್ಯವಸ್ಥೆ? ಮಕ್ಕಳ ರಕ್ತ-ಚರ್ಮ ತಿನ್ನುವುದೊಂದೇ ಬಾಕಿ ಎಂದು ಕಿಡಿಕಾರಿದ ನ್ಯಾಯಪೀಠ, ಎರಡು ವಾರಗಳಲ್ಲಿ ಸಮಗ್ರ ಅಫಿದಾವಿತ್ ಹಾಕಬೇಕು, ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿ ಮೇಲೆ ಆರೋಪ ಹೊರಿಸಲಾಗುವುದು ಎಂದು ಹೇಳಿ ವಿಚಾರಣೆಯನ್ನು 2 ವಾರಗಳ ಅನಂತರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.
ಮಾನವೀಯತೆ ಇಲ್ಲದಿದ್ದರೆ…
ಅಧಿಕಾರದ ಕುರ್ಚಿಗಳಲ್ಲಿ ಕುಳಿತವರಿಗೆ ಮಾನವೀಯತೆ ಇಲ್ಲದಿದ್ದರೆ ಹೀಗೆಯೇ ಆಗುತ್ತದೆ. ಅಧಿಕಾರಸ್ಥರ ಮಕ್ಕಳು ಕಾನ್ವೆಂಟ್ ಶಾಲೆಗಳಿಗೆ ಕಾರಿನಲ್ಲಿ ಹೋಗಿ ಬರುತ್ತಾರೆ. ಸರಕಾರಿ ಶಾಲೆಗಳ ಬಡ ಮಕ್ಕಳ ಬಗ್ಗೆ ಅವರಿಗೆ ಕನಿಕರ-ಕಾಳಜಿ ಇರುವುದಿಲ್ಲ. ಮಕ್ಕಳ ಶಿಕ್ಷಣ, ಆಹಾರ, ಭವಿಷ್ಯದ ಜತೆ ಈ ರೀತಿ ಚೆಲ್ಲಾಟ ಆಡುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.
ಸಮವಸ್ತ್ರಕ್ಕೆ ಬಟ್ಟೆಯನ್ನು ಸರಕಾರ ಕೊಡುತ್ತದೆ. ಅದನ್ನು ಹೊಲಿಸಿಕೊಳ್ಳಲು ಹಣವನ್ನು ಪೋಷಕರು ಕೊಡಬೇಕೆಂದರೆ ಇದ್ಯಾವ ನ್ಯಾಯ? ಕೊಡುವುದಿದ್ದರೆ ಎಲ್ಲವನ್ನೂ ಕೊಡಬೇಕು. ಇಲ್ಲದಿದ್ದರೆ ಇಲ್ಲ ಎಂದು ಹೇಳಬೇಕು. ಮಕ್ಕಳ ಬಗ್ಗೆ ಈ ತಾರತಮ್ಯ ಅಸಹ ನೀಯ. ಮಕ್ಕಳ ಮನಸ್ಸು ಒಮ್ಮೆ ಘಾಸಿಗೊಂಡರೆ ಜೀವನ ಪರ್ಯಂತ ಅದರ ಪರಿಣಾಮವನ್ನು ಎದುರಿಸುತ್ತಾರೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.