Advertisement

ಬಾಗಲಕೋಟೆ ಜಿಲ್ಲೆಯಾದ್ಯಂತ ಹೈ ಅಲರ್ಟ್

09:46 AM Aug 18, 2019 | sudhir |

ಬಾಗಲಕೋಟೆ : ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯಬಹುದು ಎಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲೂ ಪೊಲೀಸರು ಹೈ ಅಲರ್ಟ್ ನಲ್ಲಿದ್ದು, ಜಿಲ್ಲೆಯ ವಿವಿಧೆಡೆ ಬಿಗಿ ಭದ್ರತೆ  ಒದಗಿಸಲಾಗಿದೆ.

Advertisement

ದೇಶದ 2ನೇ ಅತಿದೊಡ್ಡ ಜಲಾಯಶ ಎಂಬ ಖ್ಯಾತಿ ಪಡೆದ ಆಲಮಟ್ಟಿ ಜಲಾಶಯದ ಒಟ್ಟು 26 ಕ್ರಸ್ಟಗೇಟ್‌ಗಳಲ್ಲಿ 12 ಗೇಟ್‌ಗಳು ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಗೆ ಬಂದರೆ, ಇನ್ನುಳಿದ 14 ಗೇಟ್‌ಗಳು ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಹೀಗಾಗಿ ಎರಡೂ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆಲಮಟ್ಟಿ ಡ್ಯಾಂಗೆ ಭದ್ರತೆ ಬಿಗಿಗೊಳಿಸಿದ್ದಾರೆ.

ಎಲ್ಲೆಡೆ ಹೈ ಅಲರ್ಟ್ :
ಜಿಲ್ಲೆಯ ಪಾರಂಪರಿಕ ತಾಣಗಳಾದ ಬಾದಾಮಿ, ಮೇಣಬಸದಿ, ಮಹಾಕೂಟ, ಪಟ್ಟದಕಲ್ಲ, ಕೂಡಲಸಂಗಮ, ಐಹೊಳೆ ಸೇರಿದಂತೆ ಪ್ರವಾಸಿ ತಾಣಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಪ್ರವಾಹದಿಂದ ಪಟ್ಟದಕಲ್ಲ ಮತ್ತು ಐಹೊಳೆಯ ಪ್ರಾಚೀನ ಸ್ಮಾರಕಗಳು ನೀರಿನಲ್ಲಿ ನಿಂತು, ರಾಡಿಮಯವಾಗಿದ್ದು, ಸ್ವಚ್ಛತೆ  ಕಾರ್ಯವೂ ಭಾರತೀಯ ಪುರಾತತ್ವ ಇಲಾಖೆ ಕೈಗೊಂಡಿದೆ.

ಇನ್ನು ಬಾದಾಮಿ, ಗುಳೇದಗುಡ್ಡ, ಬಾಗಲಕೋಟೆ, ಸೀತಿಮನಿ ಆರ್‌ಎಸ್,  ಮುಗಳೊಳ್ಳಿ , ಕಡ್ಲಿಮಟ್ಟಿ ರೈಲ್ವೆ ನಿಲ್ದಾಣಗಳಲ್ಲೂ ಪ್ರತಿ ಗಂಟೆಗೊಮ್ಮೆ ತಪಾಸಣೆ ನಡೆಯುತ್ತಿದೆ. ರೈಲ್ವೆ ಮತ್ತು ಬಸ್ ನಿಲ್ದಾಣಗಳಿಗೆ ಬರುವ ವಾಹನ, ಹೊರ ಹೋಗುವ ವಾಹನ ಹಾಗೂ ಅಪರಿಚಿತ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರನ್ನು ವಿಚಾರಿಸಲಾಗುತ್ತಿದೆ.

ನೆರೆಯಲ್ಲೂ ಹೆಚ್ಚುವರಿ ಜವಾಬ್ದಾರಿ :
ಕಳೆದ ಆ. 1ರಿಂದ ಜಿಲ್ಲೆಯಾದ್ಯಂತ ಪ್ರವಾಹ ಬಂದಿದ್ದು, 1 ಸಾವಿರಕ್ಕೂ ಹೆಚ್ಚು ಪೊಲೀಸರು ಪ್ರವಾಹ ಪರಿಸ್ಥಿತಿ ನಿಭಾಯಿಸಲು ನಿಯೋಜನೆಗೊಂಡಿದ್ದರು. ಈಗಲೂ ಮುಧೋಳ, ಜಮಖಂಡಿ ಹಾಗೂ ಹುನಗುಂದ, ಅರ್ಧ ಬಾಗಲಕೋಟೆ ತಾಲೂಕಿನಲ್ಲಿ ಪರಿಹಾರ ಕೇಂದ್ರ, ಹಳೆಯ ಮನೆಗಳಿಗೆ ಜನರು ಹೋಗದಂತೆ ಎಚ್ಚರಿಕೆ ವಹಿಸುವ ಕೆಲಸದಲ್ಲಿ ಪೊಲೀಸರಿದ್ದಾರೆ. ಈ ಜವಾಬ್ದಾರಿಯ ಜತೆಗೆ ಕೇಂದ್ರ ಗುಪ್ತಚರ ಇಲಾಖೆ, ಭಯೋತ್ಪಾದಕ ದಾಳಿ ಕುರಿತು ಮುನ್ನೆಚ್ಚರಿಕೆ ನೀಡಿದ್ದರಿಂದ ಪೊಲೀಸರು ಹೆಚ್ಚುವರಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next