Advertisement

ಹಿಡಕಲ್‌ನಲ್ಲಿ ಅರಳಲಿದೆ ಬೃಂದಾ”ವನ’

04:46 PM Jun 29, 2020 | Suhan S |

ಬೆಳಗಾವಿ: ಗಡಿ ಜಿಲ್ಲೆಯ ಪ್ರಮುಖ ಆಕರ್ಷಣೆ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿಗೆ ಆಧಾರವಾಗಿರುವ ಹಿಡಕಲ್‌ ಜಲಾಶಯ ಪರಿಸರ ಮೈಸೂರಿನ ಬೃಂದಾವನ ಮಾದರಿಯಲ್ಲಿ ಕಂಗೊಳಿಸಬಹುದೇ?

Advertisement

ಜಲಸಂಪನ್ಮೂಲ ಸಚಿವರು ಸ್ವತಃ ಬೆಳಗಾವಿ ಜಿಲ್ಲೆಯವರೇ ಆಗಿರುವುದರಿಂದ ಸಹಜವಾಗಿಯೇ ಬಹಳ ವರ್ಷಗಳ ಈ ಬೇಡಿಕೆಗೆ ಮತ್ತೆ ಜೀವ ಬಂದಿದೆ. ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಮೂರು ವರ್ಷಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರೇ ಹಿಡಕಲ್‌ ಜಲಾಶಯ ಆವರಣವನ್ನು ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವದು. ಇದಕ್ಕಾಗಿ ಜಲಸಂಪನ್ಮೂಲ ಸಚಿವರ ಮೇಲೆ ಒತ್ತಡ ತರುತ್ತೇವೆ ಎಂದು ಹೇಳಿದ್ದರು. ಈಗ ಸ್ವತಃ ರಮೇಶ ಜಾರಕಿಹೊಳಿ ಅವರೇ ಈ ಮಹತ್ವದ ಜಲಸಂಪನ್ಮೂಲ ಖಾತೆ ನಿರ್ವಹಿಸುತ್ತಿರುವುದರಿಂದ ಹಿಡಕಲ್‌ ಜಲಾಶಯ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿ ಹೊಂದಲಿದೆ ಎಂಬ ಬೇಡಿಕೆಗೆ ಹೊಸ ಜೀವ ಕೊಟ್ಟಿದೆ. ಕನಸು ನನಸಾಗುವ ನಿರೀಕ್ಷೆ ಮೂಡಿಸಿದೆ.

ಹಿಡಕಲ್‌ ಜಲಾಶಯ ಎದುರು ಸುಮಾರು 400 ಎಕರೆ ಪ್ರದೇಶದಲ್ಲಿ ಆಕರ್ಷಕ ಮತ್ತು ಉತ್ಕೃಷ್ಟ ಉದ್ಯಾನವನವನ್ನು ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ. ಈ ಕುರಿತು ಹಲವಾರು ಸುತ್ತಿನ ಸಭೆಗಳು ಸಹ ನಡೆದಿವೆ. ಇದಲ್ಲದೆ ಹಿಡಕಲ್‌ ಜಲಾಶಯ ಆವರಣದಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಪ್ರತಿಮೆಯನ್ನು ಸ್ಥಾಪಿಸುವುದಲ್ಲದೆ ಇಲ್ಲಿಯ ಗ್ರಾಮಸ್ಥರ ಮನವಿಯ ಮೇರೆಗೆ 2 ಕೋಟಿ ರೂ. ವೆಚ್ಚದಲ್ಲಿ ಸಭಾಭವನವನ್ನು ನಿರ್ಮಿಸಲು ಸಹ ಉದ್ದೇಶಿಸಲಾಗಿದೆ. ಆದರೆ ಸರಕಾರದ ಹಾಗೂ ಹಿಂದಿನ ಜಲಸಂಪನ್ಮೂಲ ಸಚಿವರ ಇಚ್ಛಾಶಕ್ತಿಯ ಕೊರತೆಯಿಂದ ಇದು ಕಾರ್ಯರೂಪಕ್ಕೆ ಬಂದಿಲ್ಲ .

ಈಗ ರಮೇಶ ಜಾರಕಿಹೊಳಿ ತವರು ಜಿಲ್ಲೆಯ ಜೊತೆಗೆ ಜಲಸಂಪನ್ಮೂಲ ಖಾತೆ ಹೊಂದಿರುವುದರಿಂದ ಸಹಜವಾಗಿಯೇ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಮೇಲಾಗಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರು ಇಲ್ಲಿ ಮೈಸೂರಿನ ಕೆಆರ್‌ಎಸ್‌ ಮಾದರಿಯ ಉದ್ಯಾನವನ ನಿರ್ಮಾಣ ಆಗಬೇಕು ಎಂದು ಬಹಳ ಮುತುವರ್ಜಿ ವಹಿಸಿರುವದರಿಂದ ಈ ಸರಕಾರದ ಅವಧಿಯಲ್ಲಿ ಇದಕ್ಕೊಂದು ಸ್ಪಷ್ಟರೂಪ ಸಿಗಬಹುದು ಎಂಬ ಆಸೆ ಮೂಡಿದೆ.

ಹಿಡಕಲ್‌ ಜಲಾಶಯದ ಎರಡೂ ಬದಿಗೆ ಸುಮಾರು 400 ಎಕರೆ ಪ್ರದೇಶದಲ್ಲಿ ಉದ್ಯಾನವನ ನಿರ್ಮಾಣ ಮಾಡಲು ಯೋಜನೆ ಸಿದ್ಧಪಡಿಸಿ ಈ ಹಿಂದೆಯೇ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಯಡಿ ಲೇಸರ್‌ ಪಾರ್ಕ್‌, ಬೋಟಿಂಗ್‌, ಬೊಟಾನಿಕಲ್‌ ಗಾರ್ಡ್ನ್‌ ಮಾಡುವ ಉದ್ದೇಶವಿದೆ. ಕೆಆರ್‌ಎಸ್‌ ಹಾಗೂ ಆಲಮಟ್ಟಿ ಮಾದರಿಯಲ್ಲಿ ಇದನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಬಹುದು ಎಂಬುದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಹೇಳಿಕೆ. ಜಲಾಶಯದ ಸುತ್ತ ಮುತ್ತ ಉದ್ಯಾನವನ ಸಿದ್ಧವಾದರೆ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರಲಿದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿದರೆ ಪ್ರವಾಸೋದ್ಯಮದ ಅಭಿವೃದ್ಧಿಯ ಜೊತೆಗೆ ಸಣ್ಣ ಪುಟ್ಟ ವ್ಯಾಪಾರಸ್ಥರ ಆದಾಯವನ್ನೂ ಹೆಚ್ಚಿಸಬಹುದಾಗಿದೆ.

Advertisement

ಸರಕಾರದ ಬಳಿ ಈಗಾಗಲೇ ಯೋಜನೆಯ ಎಲ್ಲ ವಿವರ ಇದೆ. ಆದರೆ ಈಗ ಕೋವಿಡ್ ವೈರಸ್‌ ಸಂಕಷ್ಟ ಇರುವುದರಿಂದ ಯೋಜನೆಗೆ ಹಣ ಬಿಡುಗಡೆ ಮಾಡುವಲ್ಲಿ ಸರಕಾರ ಹಿಂದೇಟು ಹಾಕಬಹುದು. ಹಾಗಾದಲ್ಲಿ ಮಾತ್ರ ಹಿಡಕಲ್‌ ಜಲಾಶಯ ಆವರಣ ಕೆಆರ್‌ಎಸ್‌ ಮಾದರಿಯಲ್ಲಿ ಕಂಗೊಳಿಸಲು ಇನ್ನು ಕೆಲ ತಿಂಗಳು ಕಾಯಬೇಕು ಎಂಬ ಅಭಿಪ್ರಾಯ ಅಧಿಕಾರ ಹಿಡಿಯಲು ಪ್ರತಿಜ್ಞಾವಿಧಿ ಕಾರ್ಯಕ್ರಮ ನಾಂದಿವ್ಯಕ್ತವಾಗಿದೆ.

ಹಿಡಕಲ್‌ ಜಲಾಶಯದ ಮುಂಭಾಗದಲ್ಲಿ ನದಿಯ ಎರಡೂ ಬದಿಗೆ ತಲಾ 200 ಎಕರೆ ಪ್ರದೇಶದಲ್ಲಿ ಕೆಆರ್‌ಎಸ್‌ ಮಾದರಿಯಲ್ಲಿ ಉದ್ಯಾನವನ ಮಾಡಬೇಕು ಎಂದು ಯೋಜನೆ ರೂಪಿಸಲಾಗಿದೆ. ಈ ಹಿಂದೆ ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡುವ ಉದ್ದೇಶ ಇತ್ತು. ಆದರೆ ಆಗಲಿಲ್ಲ. ಈಗ ಕೋವಿಡ್ ಸಮಸ್ಯೆ ಇರುವುದರಿಂದ ಸರಕಾರದಿಂದ ಹಣ ಬಿಡುಗಡೆಗೆ ಅಡ್ಡಿಯಾಗಿದೆ. – ಉಮೇಶ ಕತ್ತಿ, ಶಾಸಕರು, ಹುಕ್ಕೇರಿ.

ಹಿಡಕಲ್‌ ಜಲಾಶಯದ ಪರಿಸರದಲ್ಲಿ ಮೈಸೂರು ಬೃಂದಾವನ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಲು ಈಗಾಗಲೆ 118 ಕೋಟಿ ರೂಪಾಯಿ ಯೋಜನೆ ರೂಪಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಮೈಸೂರು ಬೃಂದಾವನ ಹಾಗೂ ಆಲಮಟ್ಟಿ ಮಾದರಿಯಲ್ಲಿ ಇದನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಯೋಜನೆ ಇದೆ. –ಎಸ್‌.ಎಂ. ಮಾಡಿವಾಲೆ, ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್‌

 

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next