Advertisement

ಓಯ್‌, ಡೈರಿಯಲ್ಲಿದ್ದ ಚಿತ್ರನಟಿಯರು ಯಾರು ಮಾರ್ರೆ!?

10:20 PM Feb 25, 2017 | |

“ಡೈರಿ ಡೈರಿ ಅಂತ ಎಂಥದುರೀ ನಿಮ್ಮದು? ಆ ಡೈರಿ ಬರ್ದದ್ದು ನಾನು ಗೊತ್ತುಂಟಾ? ನನ್ನ ಗಂಡ ಹೆಬ್ಬೆಟ್ಟು ಒತ್ತುವವರಿಗೆ ಎಲ್ಲಿ 
ಡೈರಿ ಬರೀಲಿಕ್ಕೆ ಬರ್ತದೆ ನಿಮ್ಮ ಕರ್ಮಕ್ಕೆ? ಮೊನ್ನೆ ಮನೆಯಲ್ಲಿ ಒಂದು ಫಂಕ್ಷನಾಯ್ತಲ್ಲ, ಅದಕ್ಕೆ ತಂದ ನಮ್ಮ ಅಂಗಡಿಯ 
ಸಾಮಾನಿನ ಪಟ್ಟಿ ಅದು ಅಲ್ವಾ. ಅದ್ರಲ್ಲಿ ಅ ಅಂದರೆ ಅಲಸಂಡೆ, ರ ಅಂದ್ರೆ ರವೆ, ಬೀ ಅಂದ್ರೆ ಬೀನ್ಸ್‌, ಕ್ಯಾ ಅಂದ್ರೆ ಕ್ಯಾಬೇಜು. ಇನ್ನು ಕೋ ಅಂದ್ರೆ ಕೋಳಿಮಾಂಸ. ಇನ್ನೂ ಸಂಕೇತಾಕ್ಷರಗಳ ವಿವರಣೆ ಬೇಕಾ ಇಷ್ಟು ಸಾಕಾ? ನಿಮ್ಮ ಕರ್ಮದಿಂದ ಇದಕ್ಕೆಲ್ಲ ಅರ್ಥ ಕಟ್ಟಿ ಏನೇನೋ ಮಾಡಿದ್ರಲ್ಲ.’ 

Advertisement

ಮೇಲುಟಿಗೆ ಕಪ್ಪು ಪೆನ್ಸಿಲಿನಿಂದ ಗೆರೆ ಬರೆದು ಮೀಸೆಯಂತೆ ಕಾಣುತ್ತದೋ ಇಲ್ಲವೋ ಎಂದು ಎರಡೆರಡು ಬಾರಿ ದರ್ಪಣ ದರ್ಶನ ಮಾಡಿಕೊಂಡು ಮಂಡೆ ಬಾಚಿ ಹಾಕಿದ ಕಪ್ಪು ಬಣ್ಣದ ಹೊಳಪು ಇನ್ನೂ ಹಾಗೆಯೇ ಉಂಟೋ ಇಲ್ಲವೋ ಎಂದು ಮಗದೊಮ್ಮೆ ಕಪ್ಪು ಕನ್ನಡಕದ ಒಳಗಿಂದ ನೋಡಿದ ಜಗಮರ್ದನ ಸಾಜೇರಿಯವರು ಪತ್ರಿಕಾಗೋಷ್ಠಿಗೆ ಹೊರಟರು. ಅದೇ ಹಳೆಯ ಅಂಬಾಸಡರ್‌ ಕಾರು. ಬಿಳಿ ಅಂಗಿ, ಬಿಳಿ ಪ್ಯಾಂಟ್‌. ಅದರಲ್ಲೊಂದಷ್ಟು ನೋಟುಗಳು. ಅದೇ ಲುಕ್ಕು ಅದೇ ಗೆಟಪ್ಪು. ಆದರೆ ಈ ಬಾರಿ ಒಂಚೂರು ಬೇಜಾರೂ ಇದೆ. ಕಾರಣ ಈ ಮೋದಿ ಮಾಡಿದ ದೊಡ್ಡ ದೊಡ್ಡ ನೋಟು ನಿಷೇಧದ ಮಂಡೆಬೆಚ್ಚದಿಂದಾಗಿ ಸಭೆಗಳಲ್ಲಿ ಕ್ವಿಝ್ ನಡೆಸಲಾಗುತ್ತಿಲ್ಲ. ಇಲ್ಲದಿದ್ದರೆ ರಾಹುಲ್‌ ಗಾಂಧಿಯ ಅಮ್ಮ ಯಾರು, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ್ಯಾರು ಎಂದು ರಸಪ್ರಶ್ನೆ ಕೇಳಿ ಹಣ ಕೊಡಬಹುದಿತ್ತು. ಈಗ ಏನಿದ್ದರೂ ಸುದ್ದಿಗೋಷ್ಠಿ ಸೀಜನ್‌. ತಮ್ಮದೇ ಪಕ್ಷದ ಸಿಎಂ, ಸಚಿವರ ಮೇಲೆ ವಾಗ್ಧಾಳಿ ಮಾಡಿದರೆ ಒಳ್ಳೆ ಮೈಲೇಜ್‌. ಈಗಂತೂ ಜಿ.ಪಂ.ನಲ್ಲಿ ವಿಪಕ್ಷದ ಡೈರಿ ಸೀಜನ್‌. ಸಿಕ್ಕಿದ್ದೇ ಸೀರುಂಡೆ ಅಂತ ಹೊರಟರು. 

“ಮಿಸ್ಟರ್‌ ಮೋದಿಯವರೆ, ನಿಮಗೆ ಮಾನ ಮರ್ಯಾದೆ ಇದೆಯಾ. ಇದ್ದರೆ ನಿಮಗೆ ಮಂಡೆ ಸಮ ಇದೆಯಾ. ಹಾಗೊಂದು ವೇಳೆ ಇದ್ದರೆ ನೀವು ರಾಜೀನಾಮೆ ನೀಡಿ ಮನೆಗೆ ಹೋಗುತ್ತಿರಲಿಲ್ಲವೇ? ಎಂದು ಜಗಮರ್ದನರು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು. ಎನಿ ಕ್ವಶ್ಚನ್‌ ಎಂದು ಅಂಗೈಯಲ್ಲಿ ಬಡಿಯುತ್ತಾ ಕೇಳಿದಾಗ ಪ್ರಶ್ನೆ ಕೇಳಲು ಪತ್ರಕರ್ತರು ಮುಂದಾದರು. ನಿಮಗೆ ವಯಸ್ಸು ಎಷ್ಟು, ನಿಮಗೆ ಮೋದಿಯ ಹೆಂಡತಿಯ ಬಗ್ಗೆ ಗೊತ್ತಿದೆಯಾ, ಇಲ್ಲ ಎಂದಾದರೆ ನೀವು ನನ್ನಲ್ಲಿ ಕ್ವಶ್ಚನ್‌ ಕೇಳಬಾರದು ಎಂದು ಪತ್ರಕರ್ತರ ಬಾಯಿ ಮುಚ್ಚಿಸಿ ಸುದ್ದಿಗೋಷ್ಠಿ ಮುಗಿಸಿದರು. ಅಸಲಿಗೆ ಡೈರಿ ಬಗ್ಗೆ ಕರೆದ ಪ್ರಸ್‌ಮೀಟ್‌ ಮೋದಿ ಟೀಕೆಯಲ್ಲಿ ಮುಕ್ತಾಯವಾಗಿತ್ತು. ಟಿವಿ, ಪತ್ರಿಕೆಗಳಲ್ಲಿ ಬ್ರೇಕಿಂಗ್‌ ನ್ಯೂಸ್‌ ಬಂತು. ಡೈರಿಗಾಗಿ ಮೋದಿ ರಾಜೀನಾಮೆಗೆ ಆಗ್ರಹ!

ಜಿ.ಪಂ. ಸಭೆಗೆ ಹೋಗಿ ಕುಳಿತರೆ ಮಹಿಳಾ ಸದಸ್ಯೆಯರೆಲ್ಲ ಭಾರೀ ದೊಡ್ಡ ಪ್ರತಿಭಟನೆಯನ್ನೇ ಆರಂಭಿಸಿದ್ದರು. ಎಲ್ಲರದ್ದೂ ಒಂದೇ ಬೊಬ್ಬೆ. ಎಷ್ಟು ಅಂದ್ರೆ, ಮನೆಯಲ್ಲಿ ಗಂಡನೆ ಮೇಲೆ ಹಾಕೂದಕ್ಕಿಂತಲೂ ಜಾಸ್ತಿಯೇ ಬೊಬ್ಬೆ ಹಾಕುತ್ತಿದ್ದರು. ಇವರು ಅಧ್ಯಕ್ಷ ಕುರ್ಚಿ ಮೇಲೆ ಕೂರುವುದಕ್ಕೆ ತೀರ ಅದಕ್ಷರು. ಕೂತರೇನು, ನಿಂತರೇನು ಯಾವುದಕ್ಕೂ ಪ್ರಯೋಜನ ಇಲ್ಲ. ಅವರು ಕೆಳಗಿಳಿಯೋ ತನಕ ನಾವು ಪಂಚಾಯಿತಿ ಮೀಟಿಂಗ್‌ ಬಹಿಷ್ಕರಿಸ್ತೇವೆ ಎಂದು ಅವರದು ಹಠ ಕಂಡಾಪಟ್ಟೆ. ಅಯ್ಯೋ ಮಾರ್ರೆ,     ಹೀಗೆ ಪಟ್ಟು ಹಿಡಿಯೋದಕ್ಕೇ ಕಾರಣ ಬೇಡವಾ? “ಅಧ್ಯಕ್ಷರು ಬರೆದಿರೋ ಡೈರೀಲಿ ತುಂಬ ಲೆಕ್ಕಗಳಿವೆ. ಅದೆಲ್ಲವೂ ಸಿನಿಮಾ ತಾರೆಯರಿಗೆ ಕೊಟ್ಟಿರೋ ಹಣದ ವಿಷಯ ಅಂತ ನಮಗೆ ಖಂಡಿತಕ್ಕೆ ಗೊತ್ತಾಗಿದೆ. ನಮುª ಪವಿತ್ರವಾದ ಪಕ್ಷ. ಒಬ್ಬ ಅಧ್ಯಕ್ಷ ಹೀಗೆ ಯಾರ್ಯಾರಿಗೋ ಹಣ ಪೀಕುವುದನ್ನು ಖಂಡಿತ ಸಹಿಸೋದಿಲ್ಲ. ಇದರ ಬಗೆಗೆ ಕೂಲಂಕರ್ಕಶ ತನಿಖೆ ಆಗಬೇಕು. ಊರಿನ ಅಭಿವೃದ್ಧಿಗೆ ಬಂದಿರುವ ಹಣದ ದುರುಪಯೋಗ. ಆ ದುಡ್ಡನ್ನು ಮರಳಿ ತಂದು ಖಜಾನೆಗೆ ತುಂಬುವವರೆಗೂ ನಾವು ಧರಣಿ ಕೈದು ಮಾಡುವುದಿಲ್ಲ. ಅಲ್ಲದೆ ಸ್ತ್ರೀಯರನ್ನು ದೇವರೆಂದೇ ಪೂಜಿಸುವ ಈ ನಾಡಿನಲ್ಲಿ ಕೈಹಿಡಿದ ಧರ್ಮಪತ್ನಿಗೆ ಒಬ್ಬ ಗಂಡ ವಂಚನೆ ಮಾಡಿದರೆ ಇಡೀ ಸ್ತ್ರೀ ಕುಲವೇ ಒಂದಾಗಿ ಪ್ರತಿಭಟಿಸುತ್ತದೆ’ ಎಂದು ಮಹಿಳಾಮಣಿಗಳ ಮುಖಂಡಳೊಬ್ಬಳು ಚಂಡಿ ಹಿಡಿದು ಹೇಳಿದಳು.

ಈಗ ಮಾತ್ರ ಅಧ್ಯಕ್ಷನಿಗೆ ಕುರ್ಚಿ ಗಡಗಡ. ಯಾವ ಸಿನಿಮಾ ನಟಿಗೂ ಒಂದು ನಯಾಪೈಸೆ ವಿತರಣೆಯಾಗಿಲ್ಲ. ಯಾವ ಡೈರಿ ಲೆಕ್ಕ ನೋಡಿ ಹೀಗೆ ಹೇಳ್ತಿದ್ದಾರೆ ಅನ್ನುವುದು ಗೊತ್ತಾಗ್ತ ಇಲ್ಲ. “ಏನ್ರೀ, ಪಡಪೋಶಿ ರಾಜಕಾರಣ ಮಾಡಬೇಡಿ. ಡೋಂಗಿ ಹೇಳ್ಳೋದು ನಿಮ್ಮ ಪಕ್ಷದ ಹುಟ್ಟುಗುಣ. ಯಾವ ನಟಿಗೆ ನಾನು ದುಡ್ಡು ಕೊಟ್ಟಿದ್ದೇನೆ ಹೇಳಿ’ ಎಂದು ಅವನು ಜೋರಾಗಿಯೇ ಕೇಳಿದ. ಅಷ್ಟರಲ್ಲಿ ಟೀವಿ ವಾಹಿನಿಗಳ ಕ್ಯಾಮರಾ ಹಿಡಿದವರು ಕಂಬಳದ ಕೋಣ ಓಡಿಸುವವರ ಹಾಗೆ ಓಡೋಡಿ ಬಂದರು. ಅಧ್ಯಕ್ಷನ ಮುಖದಿಂದ ಇಳಿಯುತ್ತಿರುವ ಬೆವರಿನ ಧಾರೆಯ ಹನಿಹನಿಗಳೂ ಚಿತ್ರೀಕರಣವಾದವು. ಎಲ್ಲ ವಾಹಿನಿಗಳಲ್ಲೂ ಡೈರಿ ಬಹಿರಂಗದ ಬಗೆಗೆ ಸುದ್ದಿ 
ಸ್ಫೋಟ. “ಅಧ್ಯಕ್ಷನ ಗೋಲ್‌ಮಾಲ್‌. ಅಭಿವೃದ್ಧಿಯ ಹಣ ಸಿನಿಮಾ ತಾರೆಯರ ಪಾಲು. ಯಾರು ಆ ನಟಿಯರು ನೋಡಿ, ಒಂದು ಪುಟ್ಟ ಬ್ರೇಕಿನ ಬಳಿಕ’ ಎಂದು ಅರ್ಧ ಗಂಟೆಯ ಹೊತ್ತು ಬ್ರೇಕ್‌ ಒತ್ತುತ್ತಲೇ ಇದ್ದರು. ಕಡೆಗೂ ಡೈರಿಯ ಪುಟಗಳನ್ನು ಬಿಡಿಸುವ ಲಕ್ಷಣವೇ ಕಾಣಿಸಲಿಲ್ಲ. ಕೆಲಸವಿಲ್ಲದೆ ಮನೆಯಲ್ಲಿ ಕುಳಿತು ನೊಣ ಹೊಡೆಯುತ್ತಿದ್ದ ವಿಶ್ಲೇಷಕರು ಒಬ್ಬೊಬ್ಬರಾಗಿ ಬಂದರು.

Advertisement

ವಕೀಲ ಸಂಕಟಪ್ಪನವರು, “ಇದು ಅತ್ಯಂತ ಭ್ರಷ್ಟಾಚಾರದ ಪ್ರಕರಣ. ಡೈರಿಯ ವಿಷಯಗಳು ಬಹಿರಂಗವಾದ ತತ್‌ಕ್ಷಣ ಅಧ್ಯಕ್ಷರನ್ನು ಬಂಧಿಸಬೇಕು. ಈ ಕೇಸಿನಲ್ಲಿ ಜಾಮೀನು ಸಿಗುವುದಿಲ್ಲ. ಅಪರಾಧ ಸಾಬೀತಾದರೆ ಹತ್ತು ವರ್ಷ ಶಿಕ್ಷೆ, ಅದರೊಟ್ಟಿಗೆ ಜುಲ್ಮಾನೆಯೂ ಆಗುತ್ತದೆ’ ಎಂದು ವಾದ ಮಂಡಿಸಿದರು. ಪಕ್ಷದ ಹಳೆಯ ಹುಲಿಯೊಬ್ಬರು, “ಇದು ಅತ್ಯಂತ ಹೇಯ ಪ್ರಕರಣ. ಈ ಪಕ್ಷದವರಿಗೆ ಭ್ರಷ್ಟಾಚಾರ ಮಾಡುವುದು ನೀರು ಕುಡಿದಷ್ಟೇ ಸಲೀಸು. ಇವರು ಅಧಿಕಾರದಿಂದ ಆಚೆ ಅಟ್ಟಬೇಕು. ಹಣ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ, ಇವರು ಅಧಿಕಾರ ತ್ಯಾಗ ಮಾಡುವವರೆಗೂ ನಾವು ವಿರಮಿಸುವುದಿಲ್ಲ. ಯಾವ ನಟಿಗೆ ಎಷ್ಟು ಕೊಟ್ಟಿದೆ ಎಂಬುದನ್ನು ಸಾಬೀತುಪಡಿಸುತ್ತೇವೆ. ಮುಂದಿನ ಸಲ ನಾವೇ ಕುರ್ಚಿ ಏರುತ್ತೇವೆ’ ಎಂದು ಕೋಳಿಕಟ್ಟದ ಹಾಗೆ ಕಂಬಾಯಿ ಎತ್ತಿ ಕಟ್ಟಿ ಮುಂಡಾಸು ಕೊಡವಿದರು. 

“ಇವ್ರೇನು ಸಾಚಾಗಳಾ? ಇವರು ತಿಂದದ್ದಕ್ಕೆ ಲೆಕ್ಕ ಇದೆಯಾ? ಇವ್ರದೊಂದು ಸಿಡಿ ಸಂಭಾಷಣೆಗೆ ಈಗ ಮಾರುಕಟ್ಟೇಲಿ ಎಷ್ಟು ಬೇಡಿಕೆ ಇದೆ ಗೊತ್ತಾ? ಅದ್ರಲ್ಲಿರೋ ಸಂಭಾಷಣೇನ ಕೇಳಿಸ್ತೇವೆ. ಜನ ಉತ್ತರ ಕೊಡ್ತಾರೆ, ನಾವಲ್ಲ. ಭ್ರಷ್ಟರು ಇವರು. ಮಂಗ ಮೊಸರನ್ನ ತಿಂದು ಆಡಿನ ಬಾಯಿಗೆ ಒರೆಸಿದಂತೆೆ ಮಾತಾಡ್ತಾರೆ, ಇವರದ್ದೊಂದು’ ಎಂದು ಇನ್ನೊಂದು ಪಕ್ಷದವರು ಕೈಕೈ ಮಿಲಾಯಿಸುವ ಹಂತಕ್ಕೆ ಬಂದರು.

ಟಿವಿಯಲ್ಲಿ ವರದಿಗಾರನಿಗೆ ಕರೆ ಮಾಡಿ ಡೈರಿಯ ಪುಟಗಳಲ್ಲಿ ಏನಿದೆ, ಅದು ಬಿಡುಗಡೆಯಾಗ್ತಿದೆಯಾ? ವಿಚಾರಿಸಿದರು. ಆಮೇಲೆ ಅರ್ಧ ಗಂಟೆ ಡೈರಿಯ ನಿಗೂಢ ಪುಟಗಳ ಅನಾವರಣ. ಇದು ನಮ್ಮ ವಾಹಿನಿಗೆ ಮಾತ್ರ ಲಭ್ಯ ಎಂದು ಗಿರಕಿ ಹೊಡೆಯುತ್ತ ಇದ್ದರು. ಇನ್ನೇನು ರೋಚಕ ಮಾಹಿತಿಗಳು, ಅದರೊಂದಿಗೆ ಅನಾವರಣಗೊಂಡ ನಟಿಯರು ಕಾಣಿಸ್ತಾರೆ ಅಂದುಕೊಂಡರೆ ಮತ್ತೆ ಮತ್ತೆ ಬರುತ್ತ ಇದ್ದದ್ದು ಅದೇ ಹೊರತು ಬೇರೆ ಇನ್ನೇನಿಲ್ಲ. ಹೀಗೇ ಟೈಮು ಅರ್ಧ, ಮುಕ್ಕಾಲು ಗಂಟೆ ಕಳೆದೇ ಹೋಯ್ತು.. ಹೋದ್ರೆ ಹೋಗ್ಲಿ ಬಿಡಿ ನೋಡುವಾ.. ಅಂತ ಬೇರೆ ವಾಹಿನಿಗೆ ರಿಮೋಟು ಬಟನು ಒತ್ತಿದರೆ, ಉಂಟಲ್ಲ ಅಲ್ಲೂ ಇದೇ ಕಥೆ ಮಾರಾಯೆ. 

ಅಂತೂ ಕುತೂಹಲಕ್ಕೆ ತೆರೆಬೀಳುವ ಸನ್ನಿವೇಶ ಹತ್ತಿರವಾಯಿತು. ಡೈರಿಯ ಪುಟಗಳು ಪರದೆಯ ಮೇಲೆ ಬರತೊಡಗಿದವು. ಅ-12, ರ- 28, ತಾ-78, ಕೋ- 67, ಲೀ- 90, ಬೀ-34, ಕ್ಯಾ-90 ಹೀಗೆ ಸಂಕೇತಾಕ್ಷರದಲ್ಲಿ ಹಂಚಿದ ಹಣದ ವಿವರಗಳು ಅದರಲ್ಲಿದ್ದವು.

ಇಷ್ಟು ಸಿಕ್ಕಿದ್ದೇ ತಡ, ವಾಹಿನಿಗಳು ವಿಶ್ಲೇಷಣೆ ಆರಂಭಿಸಿದವು. ಅ ಎಂದರೆ ಅನುಪಮಾ ಎಂಬ ನಟಿಗೆ 12 ಲಕ್ಷ, ರ ಎಂದರೆ ರವಿತೇಜಾಗೆ 28 ಲಕ್ಷ, ಕೋ ಎಂದರೆ ಕೋಮಲಾಳಿಗೆ 67 ಲಕ್ಷ, ಬೀ ಎಂದರೆ ಬೀನಾಳಿಗೆ 34 ಲಕ್ಷ, ಕ್ಯಾ ಎಂದರೆ ಕ್ಯಾಥರೀನ್‌ ಎಂಬ ತಾರೆಗೆ 90 ಲಕ್ಷ -ಹೀಗೆ ಲೆಕ್ಕ ಹಾಕಬಹುದು. ಇನ್ನಷ್ಟು ಸಂಕೇತಾಕ್ಷರಗಳಿವೆ. ಇದನ್ನೂ ನಾವು ಮುಂದೆ ವಿಶ್ಲೇಷಿಸಲಿಕ್ಕಿದ್ದೇವೆ ಎನ್ನುತ್ತ ಅಭಿವೃದ್ಧಿಗಾಗಿ ಬಂದ ಕೋಟಿ ಕೋಟಿ ಹಣ ಸಿನಿಮಾ ತಾರೆಯರಿಗೆ ಹಂಚಿದ ಭ್ರಷ್ಟ ಅಧ್ಯಕ್ಷರ ಪತನವಾಗಬೇಕು ಎಂದು ವಾಹಿನಿಗಳು ಭರದಿಂದ ವಿಶ್ಲೇಷಣೆ ಆರಂಭಿಸಿದವು.

ಇಷ್ಟಾಗುವಾಗ ಅಧ್ಯಕ್ಷನಿಗೆ ಹೆಂಡತಿಯ ಕಾಲ್‌ ಬಂತು. “ಅವಾಗಿಂದ ಟಿವಿ ನೋಡ್ತಿದ್ದೇನೆ. ಎಂಥ ಕರ್ಮವಾ ನಿಮ್ಮದು. ಅಲ್ಲಿರುವ ಟಿವಿಯವನಿಗೆ ಕೊಡಿ ಫೋನು’ ಎಂತ ಜಬರಿಸಿದಳು. ಫೋನ್‌ ವರದಿಗಾರ ಕೈ ಮುಟ್ಟಿದ್ದೇ ತಡ, ಮಂಗಳಾರತಿ ಶುರು. “ಡೈರಿ ಡೈರಿ ಅಂತ ಎಂಥದುರೀ ನಿಮ್ಮದು? ಆ ಡೈರಿ ಬರ್ದದ್ದು ನಾನು ಗೊತ್ತುಂಟಾ? ನನ್ನ ಗಂಡ ಹೆಬ್ಬೆಟ್ಟು ಒತ್ತುವವರಿಗೆ ಎಲ್ಲಿ ಡೈರಿ ಬರೀಲಿಕ್ಕೆ ಬರ್ತದೆ ನಿಮ್ಮ ಕರ್ಮಕ್ಕೆ? 

ಮೊನ್ನೆ ಮನೆಯಲ್ಲಿ ಒಂದು ಫಂಕ್ಷನಾಯ್ತಲ್ಲ, ಅದಕ್ಕೆ ತಂದ ನಮ್ಮ ಅಂಗಡಿಯ ಸಾಮಾನಿನ ಪಟ್ಟಿ ಅದು ಅಲ್ವಾ. ಅದ್ರಲ್ಲಿ ಅ ಅಂದರೆ ಅಲಸಂಡೆ, ರ ಅಂದ್ರೆ ರವೆ, ಬೀ ಅಂದ್ರೆ ಬೀನ್ಸ್‌, ಕ್ಯಾ ಅಂದ್ರೆ ಕ್ಯಾಬೇಜು. ಇನ್ನು ಕೋ ಅಂದ್ರೆ ಕೋಳಿಮಾಂಸ. ಇನ್ನೂ ಸಂಕೇತಾಕ್ಷರಗಳ ವಿವರಣೆ ಬೇಕಾ ಇಷ್ಟು ಸಾಕಾ? 

ನಿಮ್ಮ ಕರ್ಮದಿಂದ ಇದಕ್ಕೆಲ್ಲ ಅರ್ಥ ಕಟ್ಟಿ ಏನೇನೋ ಮಾಡಿದ್ರಲ್ಲ. ನನ್ನ ಗಂಡ ಧರ್ಮರಾಯನಂತಹ ಮನುಷ್ಯ. ಬೇರೆ ಹೆಂಗಸ್ರನ್ನು ಕಣ್ಣೆತ್ತಿ ನೋಡಿದವರಲ್ಲ. ಇಷ್ಟಕ್ಕೂ ಕೀ ನನ್ನ ಸೊಂಟದಲ್ಲಿರುವಾಗ ಅವರ ಹತ್ರ ಅಷ್ಟು ಹಣ ಎಲ್ಲಿಂದ ಬರಬೇಕು, ಪಾಪ! ನಿಮ್ಮ ಕರ್ಮವೇ’ ಎಂದು ಅಷ್ಟೂ ವಿಭಕ್ತಿ ಪ್ರತ್ಯಯ ಸೇರಿಸಿ ಡೈರಿಯ ಪುಟಗಳಿಗೆ ಫೈನಲ್‌ ವಿಶ್ಲೇಷಣೆ ಮಾಡಿ ಬಿಟ್ಟಳು.

ಅಧ್ಯಕ್ಷರ ಮನೆಯಿಂದಲೇ ಡೈರಿ ವಿವರ ಸಿಗುತ್ತದೆ ಅಂತ ಬ್ರೇಕಿಂಗ್‌ ಬಾಟಮ್‌ ಲೈನ್‌ ಹಾಕಿ ಇದಿಷ್ಟನ್ನು ನೇರ ಪ್ರಸಾರಕ್ಕೆ ಬಿಟ್ಟಾಗಿತ್ತು. ಅರ್ಧಕ್ಕೆ ನಿಲ್ಲಿಸ್ಲಿಕ್ಕಾಗ್ತದಾ! ಅಧ್ಯಕ್ಷರ ಹೆಂಡತಿಯ ಜೋರು ಪ್ರಸಾರ ಆದದ್ದೇ ತಡ, ವಾಹಿನಿಯಲ್ಲಿ ಸೇರಿಕೊಂಡವರು ಜಾಗ ಖಾಲಿ ಮಾಡಿದರು. ಎದುರು ಪಕ್ಷದವರು “ಸೀಡಿ ಸೀಡಿ’ ಅಂತ ಕೂಗುತ್ತಲೇ ಇದ್ದರೂ ವಾಹಿನಿಯ ಒಳಗೆ ಪಂಚೆ ಎತ್ತಿಕಟ್ಟಿ ಅಂಗಿ ಕೈ ಮಡಚಿದ್ದ ಪುಢಾರಿಗಳು ಹೆಗಲಿಗೆ ಕೈ ಹಾಕಿಕೊಂಡು ಹೊರ ಬರುವ ದೃಶ್ಯ ಕಾಣಿಸಿತು. ನೋಡುತ್ತಾ ನೋಡುತ್ತಾ ಸ್ಟುಡಿಯೋದಲ್ಲಿ ಕುಳಿತು ಬೆಕ್ಕಸ ಬೆರಗಾಗಿದ್ದ ಆನ್‌ಲೈನ್‌ ಎಡಿಟರ್‌ಗೆ ಅದನ್ನು ಎಡಿಟ್‌ ಮಾಡುವುದಕ್ಕೂ ಮರೆತುಹೋಗಿತ್ತು!  

ಲಕ್ಷ್ಮೀ ಮಚ್ಚಿನ 

Advertisement

Udayavani is now on Telegram. Click here to join our channel and stay updated with the latest news.

Next