Advertisement

3,500 ಕೋಟಿ ಮೌಲ್ಯದ ಹೆರಾಯ್ನ ವಶ

06:00 AM Jul 31, 2017 | Team Udayavani |

ಮುಂಬಯಿ/ಅಹ್ಮದಾಬಾದ್‌: ಗುಜರಾತ್‌ನ ಕರಾವಳಿಯಾಚೆ ಭಾರತೀಯ ಕರಾವಳಿ ರಕ್ಷಣಾ ಪಡೆ ರವಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 1,500 ಕೆ.ಜಿ. ಹೆರಾಯ್ನ ವಶ ಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಅದರ ಮೌಲ್ಯ 3,500 ಕೋಟಿ ರೂ.!

Advertisement

ಇಷ್ಟೊಂದು ಪ್ರಮಾಣದ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದು ಇದೇ ಮೊದಲು ಎನ್ನ ಲಾಗಿದೆ. ಪ್ರಕರಣ ಸಂಬಂಧ 8 ಮಂದಿ ಭಾರ ತೀಯರನ್ನು ಬಂಧಿಸಲಾಗಿದೆ. ಇರಾನ್‌ನಿಂದ ಹೊರಟಿತ್ತು ಎನ್ನಲಾಗಿರುವ ಎಂ.ವಿ. ಹೆನ್ರಿ ಎಂಬ ವಾಣಿಜ್ಯಿಕ ನೌಕೆ ಗುಜರಾತ್‌ನ ಅಂಗ್ಲಾಂಗ್‌ ಬಂದರಿಗೆ ಆಗಮಿಸಬೇಕಿತ್ತು. ಸದ್ಯ ಈ ನೌಕೆ ಪೋರ್‌ಬಂದರ್‌ನಲ್ಲಿ ಇದೆ.
ಖಚಿತ ಸುಳಿವಿನ ಆಧಾರದಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆ, ಇಂಟೆಲಿಜೆನ್ಸ್‌ ಬ್ಯೂರೋ, ಕಸ್ಟಮ್ಸ್‌, ನೌಕಾ ಪಡೆ, ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ಜಂಟಿಯಾಗಿ ಕಾರ್ಯಾ ಚರಣೆ ನಡೆಸಿದ್ದವು. ಪನಾಮಾದಲ್ಲಿ ಈ ನೌಕೆ ನೋಂದಣಿಯಾಗಿದೆ.

ನೌಕೆ ಮುಳುಗಿಸುವ ಇರಾದೆ
ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಅಂಗ್ಲಾಂಗ್‌ ಬಂದರು ಸಮೀಪಕ್ಕೆ ಆಗಮಿಸುತ್ತಿರುವಂತೆಯೇ ಸಿಕ್ಕಿಬಿದ್ದಿದ್ದೇ ಆದಲ್ಲಿ ನೌಕೆಯನ್ನು ಮುಳುಗಿಸಲು ಸಿಬಂದಿ ಯೋಜನೆ ರೂಪಿಸಿದ್ದರು ಎಂದು ಗೊತ್ತಾಗಿದೆ. ನೌಕೆಯಲ್ಲಿದ್ದ ಸಿಬಂದಿ ಮತ್ತು ಟೆಹರಾನ್‌ನಲ್ಲಿರುವ ಅದಕ್ಕೆ ಸಂಬಂಧಿಸಿದವರ ಜತೆಗೆ ನಡೆದ ಸಂಭಾಷಣೆಯ ಛೇದನದ ವೇಳೆ ಈ ಅಂಶ ಬಯಲಾಗಿದೆ. ಜು. 27ರಿಂದಲೇ ಇಂಥದ್ದೊಂದು ನೌಕೆ ಬರಲಿದೆ ಎಂಬ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದ್ದರಿಂದ ಹಡಗು, ವಿಮಾನ ಮೂಲಕ ಗಸ್ತು ಬಿಗಿಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next