Advertisement

15000 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ : ದಂಪತಿಗಳಿಬ್ಬರ ಬಂಧನ

07:09 PM Sep 21, 2021 | Team Udayavani |

ಅಹಮದಾಬಾದ್‌ : ಅಫ್ಘಾನಿಸ್ತಾನ್‍ದಿಂದ ಅಕ್ರಮವಾಗಿ ಭಾರತಕ್ಕೆ ಆಮದು ಆಗಿದ್ದ ಸುಮಾರು 15,000 ಕೋಟಿ ರೂ. ಮೌಲ್ಯದ ಮಾದಕ ವಸ್ತು ಹೆರಾಯಿನ್‍ನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ಆಂಧ್ರಪ್ರದೇಶದ ದಂಪತಿ ಹಾಗೂ ಇಬ್ಬರು ಅಫ್ಗನ್ನರನ್ನು ಬಂಧನ ಮಾಡಿದೆ. ಗುಜರಾತ್‌ನ ಕಛ್‌ ಜಿಲ್ಲೆಯ ಮುಂದ್ರಾ ಬಂದರಿನಲ್ಲಿದ್ದ ಹೆರಾಯಿನ್‍ನ್ನು ವಶಕ್ಕೆ ಪಡೆಯಲಾಗಿದೆ.

Advertisement

‘ವಿಜಯವಾಡದ ಮೆ. ಆಶಿ ಟ್ರೇಡಿಂಗ್ ಕಂಪನಿಯು ಅರೆ ಸಂಸ್ಕರಿತ ಟಾಲ್ಕ್‌ ಕಲ್ಲುಗಳೆಂದು ಘೋಷಿಸಿದ್ದ ವಸ್ತುಗಳನ್ನು ಅಫ್ಗಾನಿಸ್ತಾನದಿಂದ ಆಮದು ಮಾಡಿಕೊಂಡಿತ್ತು. ಅದು ಇರಾನ್‌ ಬಂಡಾರ್‌ ಅಬ್ಬಾಸ್ ಬಂದರ್ ಮೂಲಕ ಗುಜರಾತ್‌ನ ಮುಂದ್ರಾ ಬಂದರಿಗೆ ತಲುಪಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ಬಂದರಿಗೆ ಬಂದಿದ್ದ 40 ಟನ್‌ಗಳ ಎರಡು ಕಂಟೇನರ್‌ಗಳನ್ನು ಪರೀಕ್ಷಿಸಿದರು. ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ನೇತೃತ್ವದಲ್ಲಿ ಕಂಟೇನರ್‌ಗಳ ಒಳಗಿದ್ದ ವಸ್ತುಗಳ ಪರೀಕ್ಷೆ ನಡೆಸಲಾಯಿತು. ನಂತರ ತಜ್ಞರು, ಇದರಲ್ಲಿರುವುದು ಹೆರಾಯಿನ್ ಎಂದು ದೃಢಪಡಿಸಿದರು.

ಇದೇ ರೀತಿ ಅಹಮದಾಬಾದ್‌, ದೆಹಲಿ, ಚೆನ್ನೈ ಮತ್ತು ಗುಜರಾತ್‌ನ ಗಾಂಧಿಧಾಮ ಮತ್ತು ಮಾಂಡವಿಯಲ್ಲೂ ತಪಾಸಣೆ ಕೈಗೊಳ್ಳಲಾಗಿದೆ ಎಂದು ಡಿಆರ್‌ಐ ಪ್ರಕಟಣೆಯಲ್ಲಿ ತಿಳಿಸಿದೆ. ವಿಜಯವಾಡ ಮೂಲದ ಆಶಿ ಟ್ರೇಡಿಂಗ್ ಕಂಪನಿ ಗೋವಿಂದರಾಜು ಮತ್ತು ಪತ್ನಿ ವೈಶಾಲಿ ಅವರಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಪತಿ–ಪತ್ನಿ ಇಬ್ಬರೂ ಚೆನ್ನೈ ಮೂಲದವರು. ಅವರು ವಿಜಯವಾಡದಲ್ಲಿ ‘ರಫ್ತು – ಆಮದು ಕಂಪನಿಯನ್ನು ನೋಂದಣಿ ಮಾಡಿಸಿದ್ದಾರೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ಈ ಇಬ್ಬರನ್ನು ಡಿಆರ್‌ಐ ಬಂಧಿಸಿದ್ದು, ಅವರನ್ನು ಭುಜ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಇಬ್ಬರನ್ನು ವಿಚಾರಣೆಗಾಗಿ ಹತ್ತು ದಿನಗಳ ಕಾಲ ಡಿಆರ್‌ಐ ವಶಕ್ಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next