ಕುಷ್ಟಗಿ:ಭಾರತೀಯ ಸಂಸ್ಕೃತಿ ಆದಿ- ಆನಂತವಾಗಿದ್ದು ಅನಾದಿ ಕಾಲದಿಂದಲೂ ಸಾಧು ಸಂತರ ರಕ್ಷಣೆಯಲ್ಲಿದೆ. ನಮ್ಮ ದೇಶ ಋಷಿ ಮುನಿಗಳ ದೇಶವಾಗಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಸನಾತನ ಸಂಸ್ಕೃತಿ, ಆದ್ಯಾತ್ಮಿಕ ಧ್ವಜ ವಿಶ್ವಮಟ್ಟದಲ್ಲಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಕುಷ್ಟಗಿ ತಾಲೂಕಿನ ಶಾಖಾಪೂರ ಸೀಮಾದ (ವಜ್ರಬಂಡಿ ರಸ್ತೆ) ಶ್ರೀ ಅಮರನಾಥೇಶ್ವರ ಮಹಾದೇವಮಠ ನಾಗಾಸಾಧು ಆಶ್ರಮ (ಜುನಾ ಅಖಾಡ) ದಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ ಲೋಕಾರ್ಪಣೆ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ವಸುದೈವಕುಟುಂಬಕಂ’ ಎಂಬ ಭಾವನೆಗೆ ಭಾರತೀಯ ಸಂಸ್ಕೃತಿಗೆ ಪ್ರೇರಣೆಯಾಗಿದೆ. ಸಹದೈವ ವಿಶ್ವ ಬಂಧು ವಿಶ್ವ ಕಲ್ಯಾಣ, ಸಾಮಾಜಿಕ ಸಾಮರಸ್ಯ ಸಮಾನತೆ ಬದುಕಿಗೆ ಪ್ರೇರಣೆಯಾಗಿದೆ ಎಂದರು.
ಧರ್ಮ ಹಾಗೂ ಆಧ್ಯಾತ್ಮದ ಜ್ಞಾನ ಪ್ರಸಾರದಿಂದ ದೇಶದಲ್ಲಿ ಶಾಶ್ವತ ಶಾಂತಿಯ ಪ್ರೇರಣದಾಯಕವಾಗಿದ್ದು, ಈ ಭಾಗದಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ ನಿರ್ಮಾಣದಿಂದ ಈ ಪ್ರದೇಶ ಪುಣ್ಯಭೂಮಿಯಾಗಲಿದ್ದು ಮನಸ್ಸಿಗೆ ಪ್ರಸನ್ನತೆ ಸಿಗಲಿದೆ ಎಂದರು.
Related Articles
ಅಮರನಾಥೇಶ್ವರ ಮಠ ಮಹಾದೇವ ಮಂದಿರದ ಮಹಾಂತ ಸಹದೇವನಂದ ಗಿರೀಜಿ ಅವರು ಹೇಳಿದಂತೆ ಇಲ್ಲಿನ ಅಮರನಾಥ ಮಂದಿರ ಉಜ್ಯನಿ ಮಹಾಕಾಲ ಮಂದಿರ ಮಾದರಿಯಲ್ಲಿ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ನನ್ನ ಜಿಲ್ಲೆ ಉಜ್ಜಯನಿ ಜಿಲ್ಲೆ ಆಗಿದ್ದು, ಮಹಾಕಾಲ ನಗರದಿಂದ ಬಂದಿರುವೆ. ಮಹಾಕಾಲನ ಆಶೀರ್ವಾದ ದೇಶವಾಸಿಗಳಿಗೆ ಸಿಗುತ್ತಿದೆ ಎಂದರು.
ಉತ್ತರಖಂಡದ ಅನಂತ ವಿಭೂಷಿತ ಮಹಾಮಂಡಳೇಶ್ವರ ಶ್ರೀ ಸ್ವಾಮೀ ದೇವಾನಂದ ಗಿರಿ ಮಹಾರಾಜ ಮಾತನಾಡಿ ಅಂಜನಾದ್ರಿ ಪರ್ವತ ಶ್ರೇಣಿಯಲ್ಲಿ ಭಗವಾನ ಹನುಮಾನ ಜನಿಸಿದ್ದು ಇದೇ ಪ್ರದೇಶದಲ್ಲಿ ಪಂಚಮುಖಿ ಆಂಜನೇಯ ದೇವಸ್ಥಾನ ಯುಗಾದಿ ಹಬ್ಬದ ಹೊಸ ವರ್ಷದಲ್ಲಿ ನಿರ್ಮಾಣವಾಗಿದೆ. ಈ ಭವ್ಯ ಮಂದಿರ ಧರ್ಮ ಜಾಗೃತಿಗೆ ಪ್ರಭಾವಿತವಾಗಲಿ ಎಂದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಸಂತರಾದ ಅಷ್ಟಕುಶಾಲ ಮಹಾಂತ ರಾಹುಲ್ ಗಿರಿ ಮಹಾರಾಜ, ಮಹಾಂತ ರಣಾಪತಿ ಶ್ರೀ ಗೋಚಂದಗಿರಿ ಮಹಾರಾಜ, ಬೃಂದಾವನ ಸಾದ್ವಿ ಶ್ರೀ ಲಕ್ಷ್ಮೀ ಪುರಿ ಮಾತಾಜಿ, ಯೋಗೀರಾಜ ಅಭಿಷೇಕ ಮಹಾರಾಜ್ ಸ್ವಾಮೀಜಿ ಭಾಗವಹಿಸಿದ್ದರು. ಅಮರನಾಥೇಶ್ವರ ಮಠ ಮಹಾದೇವ ಮಂದಿರದ ಮಹಾಂತ ಸಹದೇವನಂದ ಗಿರೀಜಿ ಅಧ್ಯಕ್ಷತೆವಹಿಸಿದ್ದರು.