Advertisement

ವಂಶಪರಂಪರೆ ಪ್ರಜಾಡಳಿತಕ್ಕೆ ಮುಕ್ಕಾಗದಿರಲಿ

07:08 AM Oct 23, 2017 | |

ರಾಜಕೀಯ ಕ್ಷೇತ್ರದಲ್ಲಿ ವಂಶಪಾರಂಪರ್ಯಕ್ಕೆ ಮಾನ್ಯತೆ ಇದೆ ಎನ್ನುವುದು ಸಹಜ. ಅದಕ್ಕೆ ನಮ್ಮ ದೇಶದಲ್ಲಿ ಹಲವು ಉದಾಹರಣೆಗಳು ಇವೆ. ಏಕೆಂದರೆ ವಂಶದ ಪ್ರಭಾವಳಿ ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಮುಂದಾದ ಎಂಜಿಆರ್‌ ಪತ್ನಿ ಜಾನಕಿ ರಾಮಚಂದ್ರನ್‌ ಮತ್ತಿತರರು ವಿಫ‌ಲ ಹೊಂದಿದ್ದಾರೆ ಎನ್ನುವುದೂ ಸತ್ಯ. ಹಾಗೆಂದು ಅದೇ ಮಾದರಿಯನ್ನು ಕೈಗಾರಿಕೆಗೆ ವಿಸ್ತರಿಸಿದರೆ ಹೇಗಾದೀತು? ಉದ್ದಿಮೆ,  ರಾಜಕೀಯಕ್ಕೂ ಅಂತರ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮತಗಳೇ ಸರ್ಕಾರವನ್ನೋ, ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ.

Advertisement

ಪಂಜಾಬಿನಲ್ಲಿ ತಂದೆ ಪ್ರಕಾಶ್‌  ಸಿಂಗ್‌ ಬಾದಲ್‌ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸುಖಬೀರ್‌ ಸಿಂಗ್‌ ಬಾದಲ್‌ ವಂಶಾಡಳಿತವನ್ನು ಬ್ರಾಂಡೆಡ್‌ ಸರಕಿಗೆ ಹೋಲಿಸಿದ್ದರು. “ಜನರಿಗೆ ಹೊಸ ಸರಕಿಗಿಂತ ಈಗಾಗಲೇ ಗೊತ್ತಿರುವ ಬ್ರಾಂಡ್‌ ಇಷ್ಟವಾಗುತ್ತದೆ’ ಎಂದಿದ್ದರು. ಇತ್ತೀಚೆಗೆ ತಮ್ಮ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರು ಹೆಚ್ಚು ಕಡಿಮೆ ಅದೇ ದಾಟಿಯಲ್ಲಿ ಭಾರತದಲ್ಲಿ ಸಿನಿಮಾ, ಉದ್ಯೋಗ, ರಾಜಕಾರಣ ಇತ್ಯಾದಿ ಎಲ್ಲ ರಂಗಗಳಲ್ಲೂ ವಂಶದ ಪ್ರಭಾವ ಇದೆ ಎಂದಿದ್ದಾರೆ. ಅವರ ಮಾತು ಸಂಪೂರ್ಣವಾಗಿ ಸುಳ್ಳಲ್ಲದಿದ್ದರೂ ಸಂಪೂರ್ಣ ಸತ್ಯವೂ ಅಲ್ಲ. ರಾಜ-ಮಹಾರಾಜರ, ಸಾಮಂತರ ಕಾಲ ಭಾರತದಲ್ಲಿ ಎಂದೋ ಮುಗಿದು ಹೋಗಿದೆ. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಏಳು ದಶಕಗಳೇ ಮುಗಿದರೂ ವಂಶ ಪ್ರಭಾವದ ಪಳೆಯುಳಿಕೆಗಳು ನಮ್ಮ ಪ್ರಜಾಪ್ರಭುತ್ವದ ಮೆರುಗನ್ನು ಮಸುಕಾಗಿಸುತ್ತಿವೆ ನಿಜ. ರಾಜಕಾರಣಿಯ ಮಗ ರಾಜಕಾರಣಿ, ಸಿನಿಮಾ ನಟನ ಮಗ ಸಿನಿಮಾ ನಟ, ಅಧಿಕಾರಿಯ ಮಗ ಅಧಿಕಾರಿ ಆಗಬಾರದೆಂದೇನೂ ಇಲ್ಲ. ಅಂಧ ಶ್ರದ್ಧೆಯಲ್ಲಿ  ಮುಳುಗಿ ಮತದಾನ ಮಾಡುವ, ಅನರ್ಹರನ್ನೂ ವಂಶದ ಆಧಾರದಲ್ಲಿ ಗೆಲ್ಲಿಸುವ ಮತದಾರನ ಮಾನಸಿಕತೆ ಪ್ರಜಾಪ್ರಭುತ್ವದ ಪಾವಿತ್ರ್ಯಕ್ಕೆ ಮೈಲಿಗೆ ಮಾಡುವಂತಹದ್ದು.  

ಜಿಎಸ್‌ಟಿ ಜಾರಿಯಲ್ಲಿ ಎದುರಾಗುತ್ತಿರುವ ಪ್ರಾರಂಭದ ತೊಡಕುಗಳಿಂದ ಮತ್ತು ಜಿಡಿಪಿ ದರದಲ್ಲಿ ಕೊಂಚ ಇಳಿಮುಖದಂತಹ ವಿದ್ಯಮಾನಗಳಿಂದ ಕೇಂದ್ರ ಸರ್ಕಾರದ ಜನಪ್ರಿಯತೆ ಕುಸಿದಿದೆ ಎನ್ನುವ ವರದಿಗಳು ಮುಳುಗುತ್ತಿದ್ದ ಪ್ರತಿಪಕ್ಷಗಳಿಗೆ ಆಕ್ಸಿಜನ್‌ ಒದಗಿಸಿವೆ. ಕಾಂಗ್ರೆಸ್‌ ತನ್ನ ಉಪಾಧ್ಯಕ್ಷರನ್ನು ಶತಾಯಗತಾಯ ಪರ್ಯಾಯ ನಾಯಕರನ್ನಾಗಿ ನಿಲ್ಲಿಸುವ ನೀಲನಕ್ಷೆ ಸಿದ್ಧಪಡಿಸುತ್ತಿದೆ. ಒಂದು ರಾಜಕೀಯ ಪಕ್ಷವಾಗಿ ಹಾಗೆ ಮಾಡುವ ಎಲ್ಲ ಸ್ವಾತಂತ್ರ್ಯವೂ ಅದಕ್ಕಿದೆ. ಸಂಸದೀಯ ಪ್ರಜಾತಂತ್ರದಲ್ಲಿ ಪ್ರಬಲ ವಿರೋಧ ಪಕ್ಷದ ಅಸ್ತಿತ್ವ ಇರುವುದು ಒಳ್ಳೆಯದೇ. ಅವರನ್ನು ವಿದೇಶಗಳಿಗೆ ಕರೆದೊಯ್ದು ಸಭೆ-ಸಂವಾದಗಳ ಮೂಲಕ ವರ್ಚಸ್ಸಿಗೆ ಸಾಣೆ ಹಾಕುವ ಪ್ರಯತ್ನವೂ ನಡೆದಿದೆ. ಆದರೆ ಎಂದಿನಂತೆ ಅವರು ದೇಶದಲ್ಲಿ ವಂಶಾಡಳಿತಕ್ಕೆ ಕುರಿತಂತೆ ಮತ್ತೂಂದು ವಿವಾದಾಸ್ಪದ ಮಾತನಾಡಿ ತಮ್ಮ ಅಪರಿಪಕ್ವತೆಯನ್ನು ಪ್ರದರ್ಶಿಸಿದ್ದಾರೆ. ಎಂದರೆ ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವೆಂಬ ಹಿರಿಮೆ-ಗರಿಮೆಗಳಿಂದ ಹೆಮ್ಮೆ ಪಡುತ್ತಿದ್ದ ನಮ್ಮ ಗಣತಂತ್ರ ವಂಶಾಡಳಿತದ ಕೈಗೊಂಬೆಯೇ?

ಯಶಸ್ಸಿಗೆ ವಂಶವೊಂದೇ ಕಾರಕವಲ್ಲ
ಕಾಂಗ್ರೆಸ್‌ ನಾಯಕತ್ವ ತಮಗೆ ವಂಶಪಾರಂಪರ್ಯವಾಗಿ ಒಲಿದಿದ್ದನ್ನು ಸಮರ್ಥಿಸುವ ಭರದಲ್ಲಿ ರಾಹುಲ್‌ ಗಾಂಧಿಯವರಾಡಿದ ಮಾತುಗಳು ದೇಶದ ಜನತೆಯ ಬುದ್ಧಿಮತ್ತೆಯನ್ನು ತಮಾಷೆ ಮಾಡಿದಂತಾಗಿದೆ. ಇದು ಹಲವರ ಕೆಂಗಣ್ಣಿಗೂ ಕಾರಣವಾಗಿದೆ. ಬಿಜೆಪಿ ನಾಯಕರೋರ್ವರು ಅವರದ್ದು ವಿಫ‌ಲ ವಂಶ ಎಂದರೆ, ನಟ ರಿಷಿ ಕಪೂರ್‌ ಈ ಕುರಿತು ರಾಹುಲ್‌ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿ¨ªಾರೆ. ರಾಜಕಾರಣ, ಸಿನಿಮಾ, ಉದ್ಯಮ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಸ್ವಂತ ಪ್ರತಿಭೆಯಿಲ್ಲದೇ ಯಶಸ್ಸು ಪಡೆಯುವುದು ಸಾಧ್ಯವೇ? ಎಲ್ಲ ಜನರನ್ನು ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ. ಗಾಂಧಿ ಕುಟುಂಬದಲ್ಲಿ ಜನಿಸಿದ್ದರಿಂದ ಅವರಿಗೆ ಹಲವು ಅಂಶಗಳು ಸಹಾಯಕವಾಗಬಲ್ಲದು ಎನ್ನುವುದನ್ನು ಬಿಟ್ಟರೆ ಜನಮನ್ನಣೆಯಿಲ್ಲದೇ ಅವರು ಅಧಿಕಾರಕ್ಕೇರುವುದು ಸಾಧ್ಯವಿಲ್ಲ. 

ಪೋಷಕರ ವರ್ಚಸ್ಸಿನಿಂದ ಅನೇಕರು ರಾಜಕಾರಣಕ್ಕೆ ಬಂದಿದ್ದಾರೆ ನಿಜ. ಲಾಲು ಪ್ರಸಾದರ ಪುತ್ರನಲ್ಲದಿದ್ದರೆ ಅವರ ಅನನುಭವಿ ಪುತ್ರ ಉಪಮುಖ್ಯಮಂತ್ರಿಯಾಗುತ್ತಿರಲಿಲ್ಲ. ಲಾಲು ಪತ್ನಿಯಲ್ಲದಿದ್ದರೆ ರಾಬ್ಡಿ ದೇವಿ ಬಿಹಾರದ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಚೌಧರಿ ಅಜಿತ್‌ ಸಿಂಗ್‌, ನವೀನ್‌ ಪಟ್ನಾಯಕ್‌, ಒಮರ್‌ ಅಬ್ದುಲ್ಲಾ, ಅಖೀಲೇಶ್‌ ಯಾದವ್‌, ಸುಖಬೀರ್‌ ಸಿಂಗ್‌ ಬಾದಲ್, ಕುಮಾರಸ್ವಾಮಿ ಮುಂತಾದವರು ತಮ್ಮ ತಮ್ಮ ಪ್ರದೇಶಗಳಲ್ಲಿ ತಂದೆಯ ವರ್ಚಸ್ಸಿನ ಬಲದಲ್ಲೇ ರಾಜಕಾರಣಕ್ಕೆ ಎಂಟ್ರಿ ಪಡೆದವರು. ವಿಧಾನ ಸಭೆ ಮತ್ತು ಲೋಕಸಭೆಯ ಹಾಲಿ ಸದಸ್ಯರು ಮೃತಪಟ್ಟಾಗ ಅವರ ಹತ್ತಿರದ ಸಂಬಂಧಿಕರೇ ನಮ್ಮ ರಾಜಕೀಯ ಪಕ್ಷಗಳ ಮೊದಲ ಪಸಂದಾಗಿರುತ್ತದೆ. ಹೀಗೆ ಎಂಟ್ರಿ ಪಡೆದವರೆಲ್ಲ ರಾಜಕಾರಣದಲ್ಲಿ ನೆಲೆ ಕಾಣುತ್ತಾರೆನ್ನುವ ಹಾಗಿಲ್ಲ. ಅಜಿತ್‌ ಸಿಂಗ್‌, ಎನ್‌ಟಿಆರ್‌ ಅವರ ವಿಧವೆ ಲಕ್ಷ್ಮೀಪಾರ್ವತಿ, ಎಂಜಿಆರ್‌ ಪತ್ನಿ ಜಾನಕಿ ರಾಮಚಂದ್ರನ್‌ ಅವರಂತಹ ಅನೇಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ವಿಫ‌ಲರಾದರು.

Advertisement

ರಾಜಕಾರಣ ಉದ್ಯಮವಲ್ಲ !
ಅಭಿಷೇಕ್‌ ಬಚ್ಚನ್‌, ರಾಜ್‌ ಕಪೂರ್‌ ಪರಿವಾರದವರು, ಕರ್ನಾಟಕದಲ್ಲಿ ವರ ನಟ ರಾಜ್‌ ಕುಮಾರ್‌ ಅವರ ಮಕ್ಕಳು ತಮ್ಮ ತಂದೆಯ ಕಾರಣದಿಂದಾಗಿ ಸಿನಿಮಾ ಜಗತ್ತಿನಲ್ಲಿ ಯಶಸ್ಸು ಕಂಡಿರಬಹುದು. ಏನಿದ್ದರೂ ಅದು ಉತ್ತಮ ಪ್ರಾರಂಭಕ್ಕೆ ಸಹಾಯಕವಾಗಬಲ್ಲದಷ್ಟೇ. ಅದಕ್ಕಾಗಿ ಅವರು ಸಾಕಷ್ಟು ವೃತ್ತಿಪರ ತರಬೇತಿಗಳನ್ನು ಪಡೆದಿದ್ದಾರೆ ಮತ್ತು ಸಾಕಷ್ಟು ಪೂರ್ವ ತಯಾರಿಯನ್ನು ನಡೆಸಿರುತ್ತಾರೆನ್ನುವುದು ಮರೆಯಬಾರದು. ಇನ್ನು ಉದ್ಯೋಗ ಜಗತ್ತಿನಲ್ಲಿ ಕಾನೂನುಬದ್ಧವಾಗಿ ಹೆತ್ತವರ ಉದ್ಯಮಗಳ ಸ್ವಾಮ್ಯ ಮಕ್ಕಳಿಗೆ ಬರುವುದರಿಂದ ಅಲ್ಲಿ ವಂಶವಾದ ಆಶ್ಚರ್ಯಕರವೇನಲ್ಲ ಮತ್ತು ಆಪತ್ತಿಜನಕವೂ ಅಲ್ಲ. ಅದನ್ನು ಪ್ರಜಾಪ್ರಭುತ್ವ ಪದ್ಧತಿಯ ಶಾಸನ ವ್ಯವಸ್ಥೆಯ ವಂಶವಾದದ ಜತೆ ತುಲನೆ ಮಾಡುವುದು ಸರಿಯಲ್ಲ. ಟಾಟಾ, ಅಂಬಾನಿ, ಬಿರ್ಲಾ, ಬಜಾಜ್‌ ಮುಂತಾದ ಉದ್ಯಮಿಗಳು ತಾವು ಶ್ರಮ ಪಟ್ಟು ಸ್ಥಾಪಿಸಿದ ಉದ್ಯಮಗಳ ಒಡೆತನವನ್ನು ಸ್ವಾಭಾವಿಕವಾಗಿಯೇ ತಮ್ಮ ಕುಟುಂಬಸ್ಥರಿಗೆ ವಹಿಸುವರಲ್ಲದೇ ಬೇರೆಯವರಿಗೆ ನೀಡಬೇಕೆಂದು ಹೇಗೆ ಅಪೇಕ್ಷಿಸಲು ಸಾಧ್ಯ?

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪಕ್ಷವೆಂದು ಗರ್ವ ಪಟ್ಟುಕೊಳ್ಳುತ್ತಿರುವ ಪಕ್ಷ ಅಳಿವಿನಂಚಿಗೆ ತಲುಪಿದೆ. ಸಂಸದೀಯ ಪ್ರಜಾಪ್ರಭುತ್ವ ಸತ್ವಯುತವಾಗಿ ಬೆಳೆಯಬೇಕಾದರೆ ಆಡಳಿತ ಪಕ್ಷದಷ್ಟೇ ಪ್ರತಿಪಕ್ಷಗಳ ಪಾತ್ರವೂ ಇದೆ. ಕಾಂಗ್ರೆಸ್ಸಿನಲ್ಲಿ ಉತ್ತಮ ನೇತೃತ್ವದ ಕೊರತೆ ಇಲ್ಲ. ಹಲವಾರು ಪ್ರತಿಭಾವಂತ ನಾಯಕರಿದ್ದಾರೆ. ವಂಶರಾಜಕಾರಣದಿಂದ ಹೊರಗೆ ಬಂದರೆ ತಾನೇ ಅವರ ಪ್ರತಿಭೆಗಳಿಗೆ ಅವಕಾಶ ದೊರಕುವುದು? ವಂಶಾಡಳಿತದ ವಿರುದ್ದ ರೋಸಿ ಹೋಗಿ ತಾನೆ ಶರದ್‌ ಪವಾರ್‌, ಮಮತಾ ಬ್ಯಾನರ್ಜಿಯಂತಹವರು ಕಾಂಗ್ರೆಸ್ಸಿನಿಂದ ಹೊರನಡೆದಿದ್ದು. ಭಟ್ಟಂಗಿಗಳಿಂದ ತುಂಬಿರುವ ವಂಶ ಪ್ರಭಾವವಿರುವ ಪ್ರಾದೇಶಿಕ ಪಕ್ಷಗಳಲ್ಲೆಲ್ಲ ತತ್ವ, ಸಿದ್ಧಾಂತಗಳಿಗೆ ಕಿಂಚಿತ್ತೂ ಬೆಲೆಯಿಲ್ಲ. ಒನ್‌ ಮ್ಯಾನ್‌ ಶೋ ಎಂಬಂತೆ ಒಂದು ವ್ಯಕ್ತಿಯ ಸುತ್ತ ಕೇಂದ್ರಿತವಾಗಿರುವ ಪಕ್ಷಗಳ ಭವಿಷ್ಯ ನಾಯಕನ ವರ್ಚಸ್ಸು ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಅದರ ಅಸ್ತಿತ್ವ ಇರುತ್ತದೆ. 

ವಂಶಾಧಾರಿತ ಊಳಿಗಮಾನ್ಯ ಪದ್ದತಿಯ ರಾಜಕಾರಣ ಕೊನೆಯಾಗಲೇಬೇಕಾಗಿದೆ. ವಂಶಾಡಳಿತದ ಸಮರ್ಥನೆಯೆಂದರೆ ಪ್ರಜಾಪ್ರಭುತ್ವದ ಸಮಾಪ್ತಿಯಷ್ಟೆ. ಪಕ್ಷದ ಅನುಭವಿ ನಾಯಕರು ತಮಗಿಂತ ಕಿರಿಯ ಅನನುಭವಿಯನ್ನು ಸರ್ವೋಚ್ಚ ನಾಯಕನನ್ನಾಗಿ ಒಪ್ಪಿಕೊಳ್ಳಬೇಕೆನ್ನುವುದು ಸಮರ್ಥನೀಯವಲ್ಲ. ಅದರಲ್ಲೂ ಜನಮನ ಗೆಲ್ಲಲಾಗದ ನಾಯಕನನ್ನು ಒಪ್ಪಿಕೊಳ್ಳಬೇಕೆನ್ನುವುದು ಅಸಂಭವವೇ ಸರಿ. ಒಮ್ಮೆ ಅಧ್ಯಕ್ಷೀಯ ಚುನಾವಣೆಯ ನಾಯಕತ್ವ ವಹಿಸಿಕೊಂಡು ಸೋಲುಂಡವರಿಗೆ ಅಮೆರಿಕದಲ್ಲಿ ಪುನಃ ಮುಂದಿನ ಚುನಾವಣೆಯಲ್ಲೂ ನಾಯಕತ್ವ ನೀಡಿದ ಉದಾಹರಣೆಗಳಿಲ್ಲ. 2009ರಲ್ಲಿ ಆಡ್ವಾಣಿಯವರ ನಾಯಕತ್ವದಲ್ಲಿ ಯಶಸ್ಸು ಕಾಣದಾಗ 2014ರಲ್ಲಿ ಬಿಜೆಪಿ ತನ್ನ ನಾಯಕತ್ವವನ್ನು ಬದಲಿಸಿಕೊಂಡಿತು. 

ರಾಜಕೀಯ ಪಕ್ಷಗಳು ಉದ್ಯಮಗಳಲ್ಲ. ಇತಿಹಾಸದಲ್ಲಿ ರಾಜ ಪ್ರಭುತ್ವ, ಶ್ರೀಮಂತ ಪ್ರಭುತ್ವ, ಪ್ರತ್ಯಕ್ಷ ಪ್ರಜಾಪ್ರಭುತ್ವ, ಸೈನಿಕ ಶಾಸನದಂತಹ ಅನೇಕ ಶಾಸನ ವ್ಯವಸ್ಥೆಗಳ ನಿರಂತರ ಪ್ರಯೋಗ ನಡೆದಿದೆ. ನಾವು ಒಪ್ಪಿಕೊಂಡಿರುವ ಅಪ್ರತ್ಯಕ್ಷ ಪ್ರಜಾಪ್ರಭುತ್ವ  ಹೆಚ್ಚು ಸಮಂಜಸ ಎನ್ನುವ ಮಾನ್ಯತೆ ಪಡೆದಿದೆ. ಚಾಯ್‌ ವಾಲಾ ಎಂಬ ಕಾಂಗ್ರೆಸ್ಸಿಗರ ಹೀಯಾಳಿಕೆಯ ಅಸ್ತ್ರವನ್ನೇ ಬ್ರಹ್ಮಾಸ್ತ್ರವಾಗಿಸಿ ಬಿಟ್ಟ ಎನ್‌ಡಿಎ ಹೊಡೆತ ತಿಂದ ಕಾಂಗ್ರೆಸ್ಸಿಗರು ಇನ್ನೂ ಪಾಠ ಕಲಿತಿಲ್ಲ. ಅಮೆರಿಕದಂತಹ ಪುರಾತನ ಪ್ರಜಾಪ್ರಭುತ್ವದಲ್ಲೂ ಅಧ್ಯಕ್ಷರ ಮಕ್ಕಳು ಅಧ್ಯಕ್ಷರಾದ ಉದಾಹರಣೆಗಳಿವೆಯಾದರೂ ಭಾರತದಲ್ಲಿದ್ದಂತೆ ತಾಯಿಯ ಅನಂತರ ಮಗ, ತಂದೆಯಅನಂತರ ಅವರ ಮಕ್ಕಳು ಎನ್ನುವ ಸ್ಥಿತಿ ಇಲ್ಲ. ಕಳೆದ ವರ್ಷವಷ್ಟೆ ಮುಗಿದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಲ್‌ ಕ್ಲಿಂಟನ್‌ ಪತ್ನಿ ಸೋಲನುಭವಿಸಬೇಕಾಯಿತು. ಕಾಂಗ್ರೆಸ್‌ ಮತ್ತಿತರ ಪ್ರಾದೇಶಿಕ ಪಕ್ಷಗಳಲ್ಲಿದ್ದಂತಹ ಸ್ಥಿತಿ ಅಮೆರಿಕದಲ್ಲಿಲ್ಲ. ಕಾಂಗ್ರೆಸ್‌ ಬದಲಾಗಲಿ, ಪರ್ಯಾಯ ರಾಜಕೀಯ ವ್ಯವಸ್ಥೆಯ ಕೇಂದ್ರಬಿಂದುವಾಗಲಿ, ರಚನಾತ್ಮಕ ಪ್ರತಿಪಕ್ಷದ‌ ಭೂಮಿಕೆ ನಿಭಾಯಿಸಿ ಜನಮನ ಗೆಲ್ಲಲಿ.

ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next