Advertisement

Kaup ಕೊಳಚೆ ನೀರಿಗೆ ಇಲ್ಲಿದೆ ಪರಿಹಾರ!

05:25 PM Oct 27, 2024 | Team Udayavani |

ಕಾಪು: ಕಾಪು, ಮಲ್ಲಾರು, ಉಳಿಯಾರಗೋಳಿ ಗ್ರಾಮಗಳನ್ನೊಳಗೊಂಡ ಕಾಪು ಪುರಸಭೆ ಮತ್ತು ಕಾಪು ಪೇಟೆಯ ಕೊಳಚೆ ನೀರಿನ ಸಮಸ್ಯೆ ಪರಿಹಾರಕ್ಕೆ ಯುಜಿಡಿ ಅಳವಡಿಕೆ ಮತ್ತು ಎಸ್‌ಟಿಪಿ ಘಟಕ ಸ್ಥಾಪನೆಯೇ ಸೂಕ್ತ ಪರಿಹಾರ. ಕೊಳಚೆ ನೀರು ಎಲ್ಲೆಂದರಲ್ಲಿ ಹರಿದು ನಗರದ ಸೌಂದರ್ಯಕ್ಕೆ, ಅಭಿವೃದ್ಧಿಗೆ ಮುಳ್ಳಾಗಿದೆ. ಅದರ ಜತೆಗೆ ಹತ್ತಾರು ಎಕರೆ ಕೃಷಿ ಭೂಮಿ ಬರಡಾಗಿ ಹೋಗಿದೆ, ರೋಗ ರುಜಿನಗಳಿಗೆ ಕಾರಣವಾಗಿದೆ. ಹೀಗೆ ಕಾಪುವಿನ ಪ್ರಗತಿಗೆ ಅಡ್ಡಿಯಾಗಿರುವ ಕೊಳಚೆಯನ್ನು ಕೇವಲ 30-40 ಸೆಂಟ್ಸ್‌ ಜಾಗದಲ್ಲಿ ಎಸ್‌ಟಿಪಿ ಸ್ಥಾಪಿಸಿ ನಿರ್ವಹಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಇದರಿಂದ ನಾಗರಿಕರಿಗೂ ಯಾವುದೇ ರೀತಿಯ ತೊಂದರೆ ಇಲ್ಲ.

Advertisement

ಅತ್ಯಾಧುನಿಕ ತಂತ್ರಜ್ಞಾನ ಲಭ್ಯ
ಕೊಳಚೆ ನೀರಿನ ನಿರ್ವಹಣೆ ಘಟಕ ಎಂದರೆ ದುರ್ನಾತ ಬೀರುತ್ತದೆ, ಎಕರೆಗಟ್ಟಲೆ ಜಾಗ ಬೇಕು, ಪರಿಸರಕ್ಕೆ ಹಾನಿ ಎಂಬ ಕಲ್ಪನೆಗಳಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ಮಾದರಿಯ ಸಂಪೂರ್ಣ ವೈಜ್ಞಾನಿಕ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಅವಕಾಶಗಳಿವೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಅನುದಾನವೂ ಲಭ್ಯವಾಗಲಿದೆ. ಇದರ ಸ್ಥಾಪನೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು, ಜನರಿಂದಲೂ ಸಹಕಾರ ಬೇಕಾಗಿದೆ.

ಕೊಲ್ಲೂರು, ಕಾರ್ಕಳ ಮಾಡೆಲ್‌
ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ಪುರಸಭೆ ಮತ್ತು ಕೊಲ್ಲೂರು ಪಟ್ಟಣದಲ್ಲಿರುವ ಎಸ್‌ಟಿಪಿ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಕೊಲ್ಲೂರಿನಲ್ಲಿ ಪೇಟೆಯ ಸರಹದ್ದಿನೊಳಗೆ ಇದನ್ನು ಸ್ಥಾಪಿಸಲಾಗಿದ್ದು, ಇದರಿಂದ ಜನರ ಬಹುತೇಕ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿದೆ. ಹೀಗಾಗಿ ಕಾಪುವಿಗೆ ಈ ಮಾದರಿಗಳನ್ನು ಆಯ್ಕೆ ಮಾಡಬಹುದು ಎಂದು ಎನ್ನುವುದು ಕೊಲ್ಲೂರು ಮತ್ತು ಕಾರ್ಕಳದ ಎಸ್‌ಟಿಪಿ ಘಟಕವನ್ನು ವೀಕ್ಷಿಸಿ ಬಂದವರ ಅಭಿಪ್ರಾಯ.

ಕಾಪುವಿನಲ್ಲಿ ಎಷ್ಟು ಜಾಗ ಬೇಕು?
ಕಾಪುವಿನಂತಹ ಸಣ್ಣ ಪೇಟೆಗೆ 10 ಸಾವಿರ ಲೀಟರ್‌ ಸಾಮರ್ಥ್ಯದ ಸೀವೇಜ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌ (ಎಸ್‌ಟಿಪಿ) ಸಾಕಾಗುತ್ತದೆ. ಇದು ಕಾಪು ಪೇಟೆ ಮತ್ತು ಸುತ್ತಲಿನ ಹೊಟೇಲ್‌, ಕಟ್ಟಡ, ವಸತಿ ಸಂಕೀರ್ಣ ಸಹಿತ ಎಲ್ಲೆಡೆ ದಿನನಿತ್ಯ ಸಂಗ್ರಹವಾಗುವ ಕೊಳಚೆ ನೀರಿನ ಸಮಸ್ಯೆಯನ್ನು ನಿರ್ವಹಿಸಲಿದೆ. ನೂತನವಾದ ಎಸ್‌.ಬಿ.ಆರ್‌. ಟೆಕ್ನಾಲಜಿ ಅಳವಡಿಸಿದ ಘಟಕ ನಿರ್ಮಾಣಕ್ಕೆ ಅಂದಾಜು 30-40 ಸೆಂಟ್ಸ್‌ ಜಾಗ ಬೇಕಾಗಬಹುದು. ಆದರೆ ಘಟಕ ಸ್ಥಾಪನೆಗೆ ಮುನ್ನ ಭೂಗತ ಒಳಚರಂಡಿ ನಿರ್ಮಾಣ ಅಗತ್ಯ. ಕಾಪುವಿನಲ್ಲಿ ಈಗ ಸೂಕ್ತವಾದ ತ್ಯಾಜ್ಯ ಪೈಪ್‌ಲೈನ್‌ ಅಳವಡಿಕೆ ಆಗಿಲ್ಲ.

ಎಸ್‌ಟಿಪಿಯಿಂದ ಆಗುವ ಪ್ರಯೋಜನ
-ಪುರಸಭೆ ವ್ಯಾಪ್ತಿಯ ಕೊಳಚೆ ನೀರಿನ ಸಮಸ್ಯೆ ಸಂಪೂರ್ಣ ನಿವಾರಣೆ.
-ನಗರ ಸ್ವತ್ಛತೆ, ಉಸಿರಾಟಕ್ಕೆ ಶುದ್ಧ ಗಾಳಿ ಲಭಿಸುತ್ತದೆ. ರೋಗ ಭೀತಿ ದೂರ.
-ಹೊಸ ಉದ್ದಿಮೆ, ಅತ್ಯಾಧುನಿಕ ಹೊಟೇಲ್‌, ಕಟ್ಟಡಗಳ ಆಗಮನಕ್ಕೆ ಪೂರಕ.
-ಕಾಪು ಪಟ್ಟಣ ಮತ್ತು ಪುರಸಭೆಯ ಅಭಿವೃದ್ಧಿಗೂ ಇದರಿಂದ ಅನುಕೂಲ.

Advertisement

ಎಸ್‌ಟಿಪಿಗೆ ಯಾವ ಜಾಗ ಸೂಕ್ತ?
ಕಾಪು ಪುರಸಭೆ ವ್ಯಾಪ್ತಿಯ ನಾಲ್ಕು ಸ್ಥಳಗಳನ್ನು ಯುಜಿಡಿ ಮತ್ತು ಎಸ್‌ಟಿಪಿ ಘಟಕಕ್ಕಾಗಿ ಗುರುತಿಸಲಾಗಿತ್ತು. ಇದರಲ್ಲಿ ಕಾಪು ಗ್ರಂಥಾಲಯದ ಬಳಿಯ ಜಾಗ ಇಕ್ಕಟ್ಟಾಗಿದ್ದು, ಘನ ತ್ಯಾಜ್ಯ ನಿರ್ವಹಣಾ ಘಟಕದ ಬಳಿ ಎಸ್‌ಟಿಪಿ ಮಾಡಿದರೆ ಮತ್ತೆ ಹೆದ್ದಾರಿಯನ್ನು ಅಗೆದು ಪೈಪ್‌ಲೈನ್‌ ಅಳವಡಿಸಬೇಕಾಗುತ್ತದೆ. ಪಾಂಗಾಳ ಸೇತುವೆ ಬಳಿ ಅಥವಾ ಮಲ್ಲಾರು ಬ್ರಿಡ್ಜ್ ಬಳಿಯ ಜಾಗವೇ ಎಸ್‌ಟಿಪಿ ಘಟಕ ನಿರ್ಮಾಣಕ್ಕೆ ಸೂಕ್ತ ಎನ್ನುವುದು ಹೆಚ್ಚಿನವರ ಅಭಿಪ್ರಾಯ. ಈ ಎರಡೂ ಪ್ರದೇಶಗಳು ಪೇಟೆಯಿಂದ ಹೊರಗೆ ಮತ್ತು ಹೊಳೆ ಪಕ್ಕದಲ್ಲಿ ಇರುವುದರಿಂದ ಹಲವು ರೀತಿಯ ಅನುಕೂಲತೆಗಳೂ ಆಗಲಿವೆ.

ಶುದ್ಧಗೊಂಡ ನೀರು ಮರು ಬಳಕೆ
ಎಸ್‌ಟಿಪಿ ಮೂಲಕ ಶುದ್ಧಗೊಂಡ ನೀರು ಮರುಬಳಕೆಗೆ ಯೋಗ್ಯವಾಗಿರುತ್ತದೆ. ಇದನ್ನು ಗಿಡ-ಮರಗಳಿಗೆ, ತೋಟಗಾರಿಕೆ ಮತ್ತು ಗಾರ್ಡನ್‌ಗಳಿಗೆ, ಹೆದ್ದಾರಿ ನಡುವೆ ವಿಭಜಕದಲ್ಲಿ ನೆಡಲಾಗಿರುವ ಗಿಡಗಳಿಗೆ ಹಾಗೂ ಕೈಗಾರಿಕೆಗಳಿಗೆ ಬಳಸಿಕೊಳ್ಳಬಹುದು. ಹೊಟೇಲ್‌ಗ‌ಳಲ್ಲಿ ಸ್ವಂತ ಎಸ್‌ಟಿಪಿ ಮಾಡಿಕೊಂಡರೆ ಶುದ್ಧೀಕರಿಸಲಾಗುವ ನೀರನ್ನು ಟಾಯ್ಲೆಟ್‌ಗಳಿಗೆ ಮರು ಬಳಸಬಹುದು.

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next