ಚಹಾ ಮನಸ್ಸನ್ನು ಆಹ್ಲಾದಗೊಳಿಸುವ ಶಕ್ತಿಯನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಪೇಯ.
ಶ್ರಮಿಕ ವರ್ಗದವರ ಸುಸ್ತು ನಿವಾರಕ, ಬುದ್ಧಿಗೆ ಚುರುಕು ಮುಟ್ಟಿಸುವ ಚೈತನ್ಯವರ್ಧಕ, ಹರಟೆಯಲ್ಲಿ ಜೊತೆಯಾಗುವ ಬೈಟೂ ಸ್ನೇಹಿತ.
ಇದು ನಾರ್ಮಲ್ ಚಹಾದ ಕಥೆಯಾದರೆ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಈ ಚಹಾ ನಾನಾ ಅವತಾರಗಳನ್ನು ತಾಳುವ ಸಾಮರ್ಥ್ಯವನ್ನು ಹೊಂದಿದೆ. ಬ್ಲ್ಯಾಕ್ ಟೀ, ಹನಿ ಟೀ, ಹರ್ಬಲ್ ಟೀ.. ಹೀಗೆ ಚಹಾದ ವಿಶ್ವರೂಪ ದರ್ಶನವೇ ನಮಗಾಗುತ್ತದೆ.
ಹೇಗೂ ಈಗ ಚಹಾ ಸಮಯ. ನಾವೊಂದು ನಿಮಗೆ ವಿಶಿಷ್ಟ ಚಹಾದ ಪರಿಚಯನ್ನು ಮಾಡಿಕೊಡುತ್ತಿದ್ದೇವೆ. ಅದನ್ನು ತಯಾರಿಸುವ ವಿಧಾನವೂ ಇಲ್ಲಿದೆ. ಯಾವುದಕ್ಕೂ ಒಮ್ಮೆ ಟ್ರೈಮಾಡಿ ನೋಡಿ.
Related Articles
ಕರಿಬೇವಿನ ಸೊಪ್ಪು, ತುಳಸಿ, ಎಣ್ಣೆ ಹುಲ್ಲು (ನಿಂಬೆ ಹುಲ್ಲು) ಇವುಗಳ ಸುವಾಸನೆ ಮಿಳಿತವಾಗಿರುವ ಹರ್ಬಲ್ ಚಹಾ ತಯಾರಿಸುವ ವಿಧಾನ ಇಲ್ಲಿದೆ.
ಈ ಚಹಾ ತಯಾರಿಸಲು ಇವೆಲ್ಲವನ್ನೂ ಜೊತೆಗಿರಿಸಿಕೊಳ್ಳಬೇಕು:
– 2 ಇಂಚಿನ ಎಣ್ಣೆ ಹುಲ್ಲಿನ ದಂಟು (ಇದರ ಬದಲಿಗೆ ನೀವು ಕರಿಬೇವಿನ ಸೊಪ್ಪು, ತುಳಸಿಯನ್ನೂ ಸಹ ಬಳಸಬಹುದು).
– ಎರಡು ದಾಲ್ಚಿನ್ನಿ ಕಡ್ಡಿಗಳು ಬೇಕು.
– ಆರು ಏಲಕ್ಕಿ ಬೀಜಗಳಿರಬೆಕು.
– ½ ಇಂಚು ಶುಂಠಿಯ ತುಂಡೂ ಜೊತೆಗಿರಲಿ.
– ಇನ್ನು ಮುಖ್ಯವಾಗಿ ಬೇಕಾಗುವುದು 2 ಲೋಟ ನೀರು.
ಇಷ್ಟೆಲ್ಲಾ ಸಾಮಾಗ್ರಿಗಳನ್ನು ಜೋಡಿಸಿಕೊಂಡ ಬಳಿಕ ಈಗ ಚಹಾ ಸಿದ್ಧಪಡಿಸೋಣ ಬನ್ನಿ:
ನೀರನ್ನು ಚೆನ್ನಾಗಿ ಕುದಿಯಲು ಬಿಡಿ. ಈ ನಡುವೆ ಎಣ್ಣೆ ಹುಲ್ಲು, ದಾಲ್ಚಿನ್ನಿ ಚೆಕ್ಕೆ ಮತ್ತು ಏಲಕ್ಕಿ ಕಾಳು ಹಾಗೂ ಶುಂಠಿಯನ್ನು ಚೆನ್ನಾಗಿ ಜಜ್ಜಿ.
ಈಗ ನೀರು ಕುದಿಯುತ್ತಿರುವಂತೆಯೇ ಇವನ್ನೆಲ್ಲಾ ಅದಕ್ಕೆ ಹಾಕಿಬಿಡಿ. ಬಳಿಕ ಚಮಚದ ಸಹಾಯದಿಂದ ಚೆನ್ನಾಗಿ ಕಲಸಿ ಮತ್ತು 3 ನಿಮಿಷ ಹಾಗೆಯೇ ಬಿಡಿ. ಅವುಗಳು ಚೆನ್ನಾಗಿ ಮಿಕ್ಸ್ ಆಗುತ್ತವೆ.
ಬಳಿಕ ಇದನ್ನು ಸೋಸಿ, ಇನ್ನು ನೀವು ಸಿಹಿ ಚಹಾ ಕುಡಿಯುವ ಅಭ್ಯಾಸದವರಾಗಿದ್ದರೆ ಒಂದು ಸ್ವಲ್ಪ ಬೆಲ್ಲವನ್ನು ಸೇರಿಸಿ.
ಈಗ ಸವಿಯಿರಿ ಈ ಹರ್ಬಲ್ ಚಹಾದ ಸವಿಯನ್ನು!