Advertisement

ಹೆಪಟೈಟಿಸ್‌- ಮಕ್ಕಳ ಸಾಂಕ್ರಾಮಿಕ ಕಾಯಿಲೆ; ಗಮನಿಸಬೇಕಾದ ಲಕ್ಷಣಗಳೇನು?

02:09 PM Aug 14, 2022 | Team Udayavani |

ಹೆಪಟೈಟಿಸ್‌ ಅಥವಾ ಹಳದಿ ಕಾಮಾಲೆ ಎಂದರೆ ಪಿತ್ತಜನಕಾಂಗ ಅಥವಾ ಯಕೃತ್ತಿನ ಉರಿಯೂತ. ಇದು ಸೋಂಕು ಮತ್ತು ಸೋಂಕೇತರ ಎರಡೂ ವಿಧವಾದ ಹಲವು ಕಾರಣಗಳಿಂದ ಉಂಟಾಗುತ್ತದೆ. ಸೋಂಕೇತರ ಅಂದರೆ ಒಬ್ಬರಿಂದ ಒಬ್ಬರಿಗೆ ಪ್ರಸಾರವಾಗದ ಕಾರಣಗಳಲ್ಲಿ ಕೆಲವು ಔಷಧಗಳು, ವಿಷಾಂಶಗಳು ಸೇರಿವೆ. ಕೆಲವು ಸಂದರ್ಭಗಳಲ್ಲಿ ಪಿತ್ತಜನಕಾಂಗದ ಜೀವಕೋಶಗಳ ವಿರುದ್ಧ ದೇಹದ ರೋಗ ನಿರೋಧಕ ಕಣಗಳು ದಾಳಿ ನಡೆಸುವ ‘ಆಟೋಇಮ್ಯೂನ್‌’ ಪ್ರತಿಕ್ರಿಯೆಯಿಂದಾಗಿಯೂ ಹೆಪಟೈಟಿಸ್‌ ಉಂಟಾಗುತ್ತದೆ.

Advertisement

ಮಕ್ಕಳಲ್ಲಿ ಹೆಪಟೈಟಿಸ್‌ಗೆ ಸಾಮಾನ್ಯ ಕಾರಣಗಳು

ನಮ್ಮ ಪಿತ್ತಜನಕಾಂಗದ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಉಂಟುಮಾಡಬಲ್ಲ ಹಲವಾರು ವೈರಸ್‌ ಗಳಿವೆ. ಇದೇ ಕಾರಣದಿಂದ ಇವುಗಳನ್ನು ಒಟ್ಟಾಗಿ ಹೆಪಟೈಟಿಸ್‌ ವೈರಸ್‌ಗಳು ಅಥವಾ ಹೆಪಟೋಟ್ರೋಪಿಕ್‌ ವೈರಸ್‌ಗಳು ಎಂದು ಕರೆಯಲಾಗುತ್ತದೆ. ಹೆಪಟೈಟಿಸ್‌ ವೈರಸ್‌ ಎ, ಬಿ, ಸಿ, ಡಿ ಅಥವಾ ಡೆಲ್ಟಾ ಮತ್ತು ಇ ಎಂದು ಇವುಗಳನ್ನು ಹೆಸರಿಸಲಾಗಿದೆ. ಮಕ್ಕಳಲ್ಲಿ ಹೆಪಟೈಟಿಸ್‌ ಉಂಟಾಗುವುದಕ್ಕೆ ಸಾಮಾನ್ಯ ಕಾರಣ ಹೆಪಟೈಟಿಸ್‌ ಎ ವೈರಸ್‌. ಆದರೆ ಹೆಪಟೈಟಿಸ್‌ ಎ ವೈರಸ್‌ ವಿರುದ್ಧ ಲಸಿಕೆಗಳು ವ್ಯಾಪಕವಾಗಿ ಲಭ್ಯವಿದ್ದು, ಮಕ್ಕಳಲ್ಲಿ ಹೆಪಟೈಟಿಸ್‌ ಎ ಸೋಂಕು ಕ್ರಮೇಣ ಕಡಿಮೆಯಾಗುತ್ತಿದೆ. ಹೆಪಟೈಟಿಸ್‌ಗೆ ಕಾರಣವಾಗುವ, ಅಪರೂಪದ ವೈರಸ್‌ಗಳೆಂದರೆ ಎಚ್‌ಎಸ್‌ವಿ, ಸಿಎಂವಿ, ಇಬಿವಿ ಇತ್ಯಾದಿ. ಇತ್ತೀಚೆಗಿನ ದಿನಗಳಲ್ಲಿ ಕೋವಿಡ್‌ ಗೆ ತುತ್ತಾದ ಬಳಿಕ ಹೆಪಟೈಟಿಸ್‌ ಸೋಂಕಿಗೀಡಾಗುವ ಪ್ರಕರಣಗಳು ಹೆಚ್ಚುತ್ತಿವೆ. ಕಾಮನ್‌ ಅಡೆನೊವೈರಸ್‌ ನಿಂದಾಗಿ ಹಠಾತ್‌ ಹೆಪಟೈಟಿಸ್‌ ಕಾಣಿಸಿಕೊಳ್ಳುವುದು ಜಾಗತಿಕವಾಗಿ ಅಲ್ಲಲ್ಲಿ ಒಂದು ಹಾವಳಿ ಎಂಬಂತೆ ವರದಿಯಾಗುತ್ತಿದೆ. ಮಕ್ಕಳಲ್ಲಿ ಹೆಪಟೈಟಿಸ್‌ ಉಂಟುಮಾಡುವ, ಒಬ್ಬರಿಂದ ಒಬ್ಬರಿಗೆ ಪ್ರಸಾರವಾಗದ ಕಾರಣಗಳಲ್ಲಿ ವಿಲ್ಸನ್ಸ್‌ ಕಾಯಿಲೆ, ಪಿತ್ತಜನಕಾಂಗದ ಅಟೊಇಮ್ಯೂನ್‌ ಕಾಯಿಲೆಗಳು ಸೇರಿವೆ.

ಮಕ್ಕಳಲ್ಲಿ ಹಠಾತ್‌ ಹೆಪಟೈಟಿಸ್‌ನ ಲಕ್ಷಣಗಳು

ಪ್ರಾಥಮಿಕ ಹಂತಗಳಲ್ಲಿ ಲಕ್ಷಣಗಳು ಕ್ಷುಲ್ಲಕ ಮತ್ತು ಅನಿರ್ದಿಷ್ಟವಾಗಿರುತ್ತವೆ, ಇದರಿಂದಾಗಿ ರೋಗಪತ್ತೆ ಕಷ್ಟಸಾಧ್ಯವಾಗುತ್ತದೆ. ಹೆಪಟೈಟಿಸ್‌ ಸೋಂಕಿನ ಪ್ರಾಥಮಿಕ ಲಕ್ಷಣಗಳೆಂದರೆ:

Advertisement

ಹಸಿವು ಕಡಿಮೆಯಾಗುವುದು, ಲಘು ಜ್ವರ, ದಣಿವು, ದೇಹಾಲಸ್ಯ, ಸ್ನಾಯು ಮತ್ತು ಹೊಟ್ಟೆಯಲ್ಲಿ ನೋವು, ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಇತ್ಯಾದಿ. ರೋಗ ಬಲಿಯುತ್ತಿದ್ದಂತೆ ಮಕ್ಕಳಲ್ಲಿ ಕಾಮಾಲೆಯ ಲಕ್ಷಣಗಳು, ಗಾಢ ವರ್ಣದ ಮೂತ್ರವಿಸರ್ಜನೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಹಠಾತ್‌ ಹೆಪಟೈಟಿಸ್‌ ಪಿತ್ತಜನಕಾಂಗದ ಹಠಾತ್‌ ವೈಫ‌ಲ್ಯವಾಗಿಯೂ ಉಲ್ಬಣಿಸಬಹುದಾಗಿದೆ.

ಚಿಕಿತ್ಸೆ ಮತ್ತು ಪ್ರತಿಬಂಧಾತ್ಮಕ ಕ್ರಮಗಳು

ಹಠಾತ್‌ ಹೆಪಟೈಟಿಸ್‌ಗೆ ಅನುಸರಿಸುವ ಚಿಕಿತ್ಸಾ ಕ್ರಮಗಳು ಪ್ರಧಾನವಾಗಿ ರೋಗ ಲಕ್ಷಣಗಳನ್ನು ಕಡಿಮೆ ಮಾಡುವುದು ಮತ್ತು ಪಿತ್ತಜನಕಾಂಗವನ್ನು ರಕ್ಷಿಸುವ ಉದ್ದೇಶದವಾಗಿರುತ್ತವೆ. ಕೆಲವೊಮ್ಮೆ ಲಭ್ಯವಿದ್ದಲ್ಲಿ ಹೆಪಟೈಟಿಸ್‌ಗೆ ಕಾರಣವನ್ನು ಚಿಕಿತ್ಸೆಗೆ ಗುರಿಪಡಿಸಲಾಗುತ್ತದೆ.

ಹಠಾತ್‌ ಹೆಪಟೈಟಿಸ್‌ ಪ್ರಸಾರವಾಗುವ ಪ್ರಧಾನ ಮಾಧ್ಯಮ ಮಲಿನ ನೀರು ಮತ್ತು ಆಹಾರ. ಹೀಗಾಗಿ ನೈರ್ಮಲ್ಯ ಕ್ರಮಗಳನ್ನು ಅನುಸರಿಸುವ ಮೂಲಕ ವೈರಸ್‌ ಪ್ರಸರಣವನ್ನು ತಡೆಯಬಹುದು. ಹೆಪಟೈಟಿಸ್‌ ಎ ಮತ್ತು ಬಿ ವೈರಸ್‌ಗಳ ವಿರುದ್ಧ ಈಗ ಲಸಿಕೆಗಳು ಲಭ್ಯವಿದ್ದು, ಇವುಗಳನ್ನು ಮಕ್ಕಳಿಗೆ ಕೊಡಿಸುವ ಮೂಲಕ ಪ್ರಸರಣವನ್ನು ತಡೆಯಬಹುದು.

ರೋಗ ಪತ್ತೆ

ಹಠಾತ್‌ ಹೆಪಟೈಟಿಸ್‌ ಕಾಯಿಲೆಯನ್ನು ರಕ್ತಪರೀಕ್ಷೆ ಮತ್ತು ಅಲ್ಟ್ರಾಸೌಂಡ್‌ ಪರೀಕ್ಷೆಗಳ ಮೂಲಕ ವೈದ್ಯಕೀಯ ಚಿತ್ರಣವನ್ನು ಪಡೆದು ಪತ್ತೆ ಮಾಡಲಾಗುತ್ತದೆ. ರಕ್ತಪರೀಕ್ಷೆಯಂತಹ ವಿಧಾನಗಳಿಂದ ರೋಗಪತ್ತೆಯಾಗದ ಸನ್ನಿವೇಶಗಳು ಮತ್ತು ಕಾಯಿಲೆ ವೇಗವಾಗಿ ಉಲ್ಬಣಿಸುವ ಅಪರೂಪದ ಸಂದರ್ಭಗಳಲ್ಲಿ ಪಿತ್ತಜನಕಾಂಗದ ಬಯಾಪ್ಸಿ ನಡೆಸಬೇಕಾಗಬಹುದು.

-ಡಾ| ಅನುರಾಗ್‌ ಶೆಟ್ಟಿ, ಮೆಡಿಕಲ್‌ ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next