●
ಎನ್. ನಂಜುಂಡೇಗೌಡ
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧೆಗಿಳಿದ ನಂತರ ಹೇಮಾವತಿ ನೀರಿನ ಹರಿವಿನ ವಿಷಯ ಚರ್ಚೆಗೆ ಬಂದಿದೆ. ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ದೇವೇಗೌಡರು ಅಡ್ಡಿ ಮಾಡಿದ್ದರು. ರೇವಣ್ಣ ಅವರು ತುಮಕೂರು ಜಿಲ್ಲೆಗೆ ನೀರು ಹರಿಯಲು ಬಿಡುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಆದರೆ ಹೇಮಾವತಿ ಯೋಜನೆಯಲ್ಲಿ ತುಮಕೂರು ಜಿಲ್ಲೆಯೇ ಬಹುದೊಡ್ಡ ಫಲಾನುಭವಿ. ನೀರಿನ ಬಳಕೆ, ನೀರಾವರಿ ವಿಸ್ತೀರ್ಣದಲ್ಲಿ ತುಮಕೂರು ಮೊದಲ ಸ್ಥಾನದಲ್ಲಿದ್ದರೆ, ಹಾಸನ ಜಿಲ್ಲೆ 3ನೇ ಸ್ಥಾನದಲ್ಲಿದೆ. ತುಮಕೂರು ಜಿಲ್ಲೆಗೆ ಹೇಮಾವತಿ ಎಡದಂಡೆ ನಾಲೆಯಲ್ಲಿ ಹರಿದ ನೀರಿನ ಅಂಕಿ ಅಂಶಗಳು ದೇವೇಗೌಡರ ಮೇಲಿನ ಆರೋಪಗಳನ್ನು ನಿರಾಕರಿಸುವಂತಿವೆ.
1979ರಲ್ಲಿ ಜಲಾಶಯ ನಿರ್ಮಾಣ: ಹಾಸನ ತಾಲೂಕಿನ ಗೊರೂರು ಬಳಿ ಹೇಮಾವತಿ ಜಲಾಶಯ ನಿರ್ಮಾಣಕ್ಕೆ 1968 ರಲ್ಲಿ ಸರ್ಕಾರದ: ಮಂಜೂರಾತಿ ಸಿಕ್ಕಿತು. ಅಂದು ಅದರ ಅಂದಾಜು ಮೊತ್ತ 16.30 ಕೋಟಿ ರೂ. ಆದರೆ ಜಲಾಶಯದ ನಿರ್ಮಾಣ ಪೂರ್ಣಗೊಂಡ 1979ರ ವೇಳೆಗೆ ನಿರ್ಮಾಣವೆಚ್ಚ 588 ಕೋಟಿ ರೂ.ಗೆ ಪರಿಷ್ಕೃತವಾಯಿತು. ನಾಲೆಗಳ ನಿರ್ಮಾಣ ವೆಚ್ಚ ಸೇರಿ 2007 ರ ವೇಳೆಗೆ ಹೇಮಾವತಿ ಯೋಜನೆಗೆ ಸರ್ಕಾರ 2,272 ಕೋಟಿ ರೂ.ವೆಚ್ಚ ಮಾಡಿತ್ತು. 1980ರಿಂದ ಜಲಾಶಯದಲ್ಲಿ ನೀರು ಸಂಗ್ರಹ ಆರಂಭವಾಯಿತು. ಆದರೂ 37.10 ಟಿಎಂಸಿ ನೀರು ಸಂಗ್ರಹ ಸಾಮರ್ಥಯದ ಜಲಾಶಯದಲ್ಲಿ 23 ರಿಂದ 35 ಟಿಎಂಸಿ ನೀರು ಸಂಗ್ರಹವಾಗುತ್ತಿತ್ತು. ಜಲಾ ಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದದ್ದು 1988ರಲ್ಲಿ. ಜಲಾಶಯದ ಸಂಗ್ರಹ ಸಾಮರ್ಥಯ 37.10 ಟಿಎಂಸಿ ಆದರೂ ಉತ್ತಮ ಮಳೆಯಾದ ವರ್ಷದಲ್ಲಿ ಗರಿಷ್ಠ 85 ಟಿಎಂಸಿ ವರೆಗೂ ನೀರು ಬಳಕೆಯಾಗಿದೆ.
ಆರೋಪ ತಪ್ಪಿಲ್ಲ: ಯೋಜನೆ ಪೂರ್ಣಗೊಂಡು ತುಮಕೂರು ಜಿಲ್ಲೆಗೆ ನೀರು ಹರಿವು ಆರಂಭವಾದಂದಿ ದನಿಂದಲೂ ತುಮಕೂರು ಜಿಲ್ಲೆಗೆ ನೀರಿನ ಕೊರತೆ ಯಾಗುತ್ತಿದೆ ಎಂಬ ಆರೋಪ ತಪ್ಪಿಲ್ಲ. ಹೇಮಾವತಿ ಯೋಜನೆಯ ಫಲಾನುಭವಿ ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯ 3,14,000 ಎಕರೆ, ಮಂಡ್ಯ ಜಿಲ್ಲೆಯ 2,27,920 ಎಕರೆ, ಹಾಸನ ಜಿಲ್ಲೆಯ 1,07,480 ಎಕರೆ, ಮೈಸೂರು ಜಿಲ್ಲೆಯ 5,600 ಎಕರೆಗೆ ನೀರಾವರಿ ಕಲ್ಪಿಸುವ ಉದ್ದೇಶವಿದೆ. ಅಂದರೆ ತುಮಕೂರು ಜಿಲ್ಲೆ ಹೇಮಾವತಿ ಯೋಜನೆಯ ಬಹುದೊಡ್ಡ ಫಲಾನುಭವಿ ಜಿಲ್ಲೆ.
ಹೇಮಾವತಿ ಎಡದಂಡೆ ನಾಲೆ: ತುಮಕೂರು ಮತ್ತು ಮಂಡ್ಯ ಜಿಲ್ಲೆಗೆ ನೀರು ಹರಿಸುವ ಹೇಮಾವತಿ ಎಡದಂಡೆ ನಾಲೆ (ಎ.ಜಿ.ರಾಮಚಂದ್ರರಾವ್ ನಾಲೆ) ಹೇಮಾವತಿ ಯೋಜನೆಯ ಬಹುದೊಡ್ಡ ನಾಲೆ. ಇನ್ನು ಮೂರು ನಾಲೆಗಳು ಹಾಸನ ಜಿಲ್ಲೆಯ ಅರಕಲಗೂಡು, ಹೊಳೆನರಸೀಪುರ ತಾಲೂಕಿಗೆ ನೀರು ಹರಿಸುತ್ತವೆ. ಹೇಮಾವತಿ ಎಡದಂಡೆ ನಾಲೆ ಚನ್ನರಾಯಪಟ್ಟಣ ತಾಲೂಕು ವಡ್ಡರಹಳ್ಳಿ ಬಳಿ ಎರಡು ವಿಭಾಗವಾಗಿ ಒಂದು ನಾಲೆ ಬಾಗೂರು – ನವಿಲೆ ಸುರಂಗದ ಮೂಲಕ ( ಸುಬ್ರಹ್ಮಣ್ಯ ನಾಲೆ) ತುಮಕೂರು ಜಿಲ್ಲೆಗೆ ನೀರು ಹರಿದರೆ, ಮತ್ತೂಂದು ನಾಲೆಯಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲದ ಕಡೆಗೆ ( ಟಿ.ಮರಿಯಪ್ಪ ನಾಲೆ) ನೀರು ಹರಿಯುತ್ತದೆ. ತುಮಕೂರು ಜಿಲ್ಲೆಗೆ 24ರಿಂದ 25 ಟಿಎಂಸಿ ನೀರು ವಾರ್ಷಿಕವಾಗಿ ನಿಗದಿಯಾಗಿದೆ. ಹೇಮಾವತಿ ಜಲಾ ಶಯ ಭರ್ತಿಯಾದ ವರ್ಷದಲ್ಲಿ ತುಮಕೂರು ಜಿಲ್ಲೆಗೆ ನಿಗದಿಯಾದ ಪೂರ್ಣ ಪ್ರಮಾಣದ ನೀರು ಹರಿಯುತ್ತದೆ. ಆದರೆ ಎಡದಂಡೆ ನಾಲೆಯ ನೀರು ಹರಿವಿನ ಸಾಮರ್ಥಯ 4000 ಕ್ಯೂಸೆಕ್‌ೆ ಇದ್ದಾಗ ಮಾತ್ರ ತುಮಕೂರು ಜಿಲ್ಲೆಗೆ 25 ಟಿಎಂಸಿ ನೀರು ಹರಿಸಲು ಸಾಧ್ಯ. 2018 ರ ವರೆಗೆ ನಾಲೆಯ ನೀರು ಹರಿವಿನ ಗರಿಷ್ಠ ಸಾಮರ್ಥಯ 3,100 ಕ್ಯೂಸೆಕ್ ಇತ್ತು. ಹಾಗಾಗಿ ಆ ವರ್ಷಗಳಲ್ಲಿ ಕನಿಷ್ಠ 11.54 ಟಿಎಂಸಿ ಗಳಿಂದ ಗರಿಷ್ಠ 21.09 ಟಿಎಂಸಿವರೆಗೆ ನೀರು ಹರಿದಿದೆ.
ನಾಲೆ ಆಧುನೀಕರಣ: 2016 -17ನೇ ಸಾಲಿನಲ್ಲಿ ಎಡದಂಡೆ ನಾಲೆಯ 0 – 75 ಕಿ.ಮೀ. ವರೆಗೆ 562 ಕೋಟಿ ರೂ. ವೆಚ್ಚದಲ್ಲಿ ನಾಲೆಯನ್ನು ಅಗಲಗೊಳಿಸಿ ಹೊಸದಾಗಿ ಕಾಂಕ್ರೀಟ್ ಲೈನಿಂಗ್ ಮಾಡಿದ ನಂತರ ನಾಲೆಯಲ್ಲಿ 4000 ಕ್ಯೂಸೆಕ್‌ವರೆಗೂ ನೀರು ಹರಿ ಯುತ್ತಿದೆ. ಆದರ ಪರಿಣಾಮವಾಗಿ ತುಮಕೂರು ಜಿಲ್ಲೆಗೆ 2018 -19 ನೇ ಸಾಲಿನಲ್ಲಿ 25.92 ಟಿಎಂಸಿ ನೀರು ಹರಿದಿದೆ ಎಂದು ಹೇಮಾವತಿ ಯೋಜನೆ ಎಂಜಿನಿಯರ್‌ಗಳು ಅಂಕಿ ಅಂಶಗಳನ್ನು ನೀಡಿದ್ದಾರೆ.
ತುಮಕೂರಿನಲ್ಲಿ ವ್ಯತ್ಯಯ: ತುಮಕೂರು ಜಿಲ್ಲೆಗೆ ಹರಿದ ನೀರು ಆ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಹಂಚಿಕೆಯಾಗುವಾಗ ವ್ಯತ್ಯಾಸವಾಗುತ್ತಿದೆ. ನೀರು ಹರಿಯುವ ಪ್ರಾರಂಭದ ತಾಲೂಕುಗಳಾದ ತಿಪಟೂರು, ತುರುವೇಕೆರೆ, ಚಿಕ್ಕ ನಾಯಕನಹಳ್ಳಿ, ಗುಬ್ಬಿ ತಾಲೂಕುಗಳಲ್ಲಿ ಹೆಚ್ಚು ನೀರು ಬಳಕೆಯಾಗಿ ಶಿರಾ ತಾಲೂಕಿನಲ್ಲಿ ನಾಲೆಯ ಕೊನೆಯ ಭಾಗಕ್ಕೆ ನೀರು ಹರಿಯುತ್ತಿಲ್ಲ ಎಂಬ ಕೂಗು ಪ್ರತಿ ವರ್ಷವೂ ಕೇಳಿ ಬರುತ್ತಿದೆ.