ಕುಂದಾಪುರ: ಹೆಮ್ಮಾಡಿಯ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಿಂದ ಶುಕ್ರವಾರ ರಾತ್ರಿ ಕದ್ದೊಯ್ದ ಹಣವನ್ನು ಕಳ್ಳನು ಅಲ್ಲಿಯೇ ಸಮೀಪದ ಶಾಲೆಯೊಂದರಲ್ಲಿ ಇಟ್ಟು ಹೋಗಿದ್ದು, ಅದು ಸೋಮವಾರ ಸಂಜೆ ಪತ್ತೆಯಾಗಿದೆ.
ಸೋಮವಾರವೇ ದೇವಸ್ಥಾನದಲ್ಲಿ ಪ್ರತಿ ಹುಣ್ಣಿಮೆ ದಿನ ನಡೆಯುವ ಸತ್ಯನಾರಾಯಣ ಪೂಜೆ ನಡೆದಿದ್ದು, ಕಳವಾದುದರಲ್ಲಿ ಸ್ವಲ್ಪ ಹಣ ಈ ದಿನವೇ ಸಿಕ್ಕಿರುವುದು ವಿಶೇಷ.
ಶುಕ್ರವಾರ ಮಧ್ಯರಾತ್ರಿ ದೇಗುಲದ ಬಾಗಿಲು ಮುರಿದು ನುಗ್ಗಿದ್ದ ಕಳ್ಳ ಹುಂಡಿಯಲ್ಲಿದ್ದ ಹಣ, ಅರ್ಚಕರ ಕೊಠಡಿಯಲ್ಲಿದ್ದ ರಶೀದಿ ಹಣವನ್ನು ಒಯ್ದಿರುವ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಮೀಪದ ಮೂರು ಮನೆಗಳಿಂದಲೂ ಚಿಲ್ಲರೆ ಹಣವನ್ನು ಕದ್ದಿದ್ದ.
ದೇವಸ್ಥಾನಕ್ಕಿಂತ ತುಸು ದೂರದಲ್ಲಿರುವ ಹೆಮ್ಮಾಡಿಯ ಸರಕಾರಿ ಹಿ.ಪ್ರಾ. ಶಾಲೆಯ ಜಗಲಿಯಲ್ಲಿ ಹಸುರು ಚೀಲ ಇದ್ದುದನ್ನು ಶನಿವಾರವೇ ಶಿಕ್ಷಕರು ಗಮನಿಸಿದ್ದರು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸೋಮವಾರವೂ ಅದೇ ಸ್ಥಳದಲ್ಲಿದ್ದ ಆ ಚೀಲವನ್ನು ಗಮನಿಸಿದ ವಿದ್ಯಾರ್ಥಿಗಳು ಬಿಡಿಸಿ ನೋಡಿದಾಗ ಅದರಲ್ಲಿ ಹಣ ಪತ್ತೆಯಾಗಿದೆ.
ಕೂಡಲೇ ಮುಖ್ಯೋಪಾಧ್ಯಾಯರು ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದು, ಬಳಿಕ ದೇವಸ್ಥಾನದ ವತಿಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕುಂದಾಪುರ ಅಪರಾಧ ವಿಭಾಗದ ಪಿಎಸ್‌ಐ ಪುಷ್ಪಾ ಹಾಗೂ ಸಿಬಂದಿ ಸ್ಥಳಕ್ಕಾಗಮಿಸಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋರ್ಟ್ ಸುಪರ್ದಿಯಲ್ಲಿ ಆ ಹಣ ದೇಗುಲಕ್ಕೆ ಹಸ್ತಾಂತರವಾಗಲಿದೆ.
ಎಷ್ಟು ಹಣ ಕಳ್ಳತನ ? ಇಟ್ಟಿರುವುದೆಷ್ಟು?
ಕಳ್ಳನು ಒಟ್ಟು 45 ಸಾ.ರೂ. ಕಳವು ಮಾಡಿದ್ದ. ಈಗ ಚೀಲದಲ್ಲಿ ಸಿಕ್ಕಿದ್ದು 3,035 ರೂ. ಮಾತ್ರ. ಆತ ಉಳಿದ ಹಣವನ್ನು ಕೂಡ ಪಶ್ಚಾತ್ತಾಪದಿಂದ ಬೇರೆಲ್ಲಿಯಾದರೂ ಇಟ್ಟಿರಬಹುದೇ ಅನ್ನುವ ಅನುಮಾನ ಈಗ ಮೂಡಿದೆ.