Advertisement

ಹೆಮ್ಮಾಡಿ: ಅಂಗವಿಕಲರ ಚಿಕಿತ್ಸಾ ಕೊಠಡಿ ಅವ್ಯವಸ್ಥೆ ಆಗರ

10:18 AM May 10, 2022 | Team Udayavani |

ಹೆಮ್ಮಾಡಿ: ಇಲ್ಲಿನ ಸರಕಾರಿ ಹಿ.ಪ್ರಾ. ಶಾಲೆಯ ಹಳೆಯ ಕಟ್ಟಡದಲ್ಲಿ ತಿಂಗಳಿಗೆ 3 ಬಾರಿ ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರ ಸಿಬಂದಿಯಿಂದ ನಡೆಯುವ ಚಿಕಿತ್ಸಾ ಶಿಬಿರದ ಕೊಠಡಿ ಅವ್ಯವಸ್ಥೆಯ ಆಗರವಾಗಿದೆ. ಕೊಠಡಿಗೆ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲ. ನೀರಿನ ಸೌಕರ್ಯವೂ ಇಲ್ಲ. ಇನ್ನೂ ಕನಿಷ್ಠ ಶೌಚಾಲಯವೂ ಇಲ್ಲ.

Advertisement

ಕುಂದಾಪುರ, ಬ್ರಹ್ಮಾವರ, ಕಾರ್ಕಳ ಸೇರಿದಂತೆ ಉಡುಪಿ ಜಿಲ್ಲೆಯ ಎಲ್ಲ ಶೈಕ್ಷಣಿಕ ವಲಯದಲ್ಲಿ ತಿಂಗಳಿಗೆ 3 ಬಾರಿ ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರ ಸಿಬಂದಿಯಿಂದ ಚಿಕಿತ್ಸಾ ಶಿಬಿರ ನಡೆಯುತ್ತದೆ. ಅದೇ ರೀತಿ ಬೈಂದೂರು ವಲಯದ ಹೆಮ್ಮಾಡಿಯಲ್ಲಿ ಇಲ್ಲಿನ ಶಾಲೆಯ ಹಳೆಯ ಕಟ್ಟಡದಲ್ಲಿ ತಿಂಗಳಿಗೆ 3 ಶನಿವಾರ ಶಿಬಿರ ನಡೆಯುತ್ತದೆ.

ಈ ಚಿಕಿತ್ಸಾ ಶಿಬಿರದಲ್ಲಿ ಪುನರ್ವಸತಿ ಕೇಂದ್ರದ ಫಿಸಿಯೋಥೆರಪಿಸ್ಟ್‌, ಕ್ಲಿನಿಕಲ್‌ ಸೈಕಾಲಜಿಸ್ಟ್‌, ಅಡಿಯೋಲಜಿಸ್ಟ್‌/ ಸ್ಪೀಚ್‌ ಥೆರಪಿಸ್ಟ್‌ ಭಾಗವಹಿಸುತ್ತಾರೆ. ಈ ಭಾಗದ ಸುತ್ತಮುತ್ತಲಿನ ಗ್ರಾಮದ ವಿಕಲ ಚೇತನರು, ವೃದ್ಧರು ಸೇರಿದಂತೆ ಶಿಬಿರಕ್ಕೆ ಹತ್ತಾರು ಮಂದಿ ಆಗಮಿಸುತ್ತಾರೆ.

ಸಿಬಂದಿ, ರೋಗಿಗಳಿಗೆ ಸಂಕಷ್ಟ

ಆದರೆ ಈ ಕೊಠಡಿಗೆ ವಿದ್ಯುತ್‌ ಸಂಪರ್ಕವನ್ನೇ ಕಲ್ಪಿಸಿಲ್ಲ. ಹಾಗಾಗಿ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲ. ಈಗ ಬೇಸೆಗೆಯೂ ಆಗಿರುವುದರಿಂದ ಫ್ಯಾನ್‌ ಇಲ್ಲದೆ, ಸೆಕೆಗೆ ಒಳಗೆ ಕುಳಿತುಕೊಳ್ಳುವುದೇ ಕಷ್ಟಕರವಾಗಿದೆ. ಎಲ್ಲ ಕಿಟಕಿಗಳ ಬಾಗಿಲು ಸಹ ತೆಗೆಯಲು ಆಗದಷ್ಟು ನಾದುರಸ್ತಿಯಲ್ಲಿದೆ. ಇನ್ನು ಇಲ್ಲಿ ಶೌಚಾಲಯವಿಲ್ಲದೆ ಮಹಿಳಾ ಸಿಬಂದಿಯ ಗೋಳು ಹೇಳತೀರದಾಗಿದೆ. ನೀರಿನ ವ್ಯವಸ್ಥೆಯೂ ಇಲ್ಲ. ಸ್ಥಳೀಯ ಗ್ರಾ.ಪಂ. ಕನಿಷ್ಠ ಮೂಲ ಸೌಕರ್ಯವನ್ನು ಸಹ ಕಲ್ಪಿಸಿ ಕೊಡದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Advertisement

ಅನಾರೋಗ್ಯ ಭೀತಿ

ಸ್ವಚ್ಛ ಮಾಡದೇ ಕೊಠಡಿಯು ಅಸ್ತವ್ಯಸ್ತವಾಗಿದೆ. ಇಲ್ಲಿಗೆ ಬಂದು ಹೋಗುವ ರೋಗಿಗಳು ಹಾಗೂ ಸಿಬಂದಿಗೆ ಮೈಯೆಲ್ಲ ತುರಿಕೆ ಶುರುವಾಗುತ್ತದೆ. ಚಿಕಿತ್ಸೆ ಕೊಡಲು ಬರುವ ನಮಗೆ ಅನಾರೋಗ್ಯ ಭೀತಿ ಕಾಡುತ್ತಿದೆ. ಸಂಬಂಧಪಟ್ಟವರು ಈ ಕೊಠಡಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಿ ಎನ್ನುವುದಾಗಿ ಇಲ್ಲಿನ ಶಿಬಿರಕ್ಕೆ ಆಗಮಿಸುವ ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರದ ಸಿಬಂದಿ ಮನವಿ ಮಾಡಿಕೊಂಡಿದ್ದಾರೆ.

ಕ್ರಮಕೈಗೊಳ್ಳಲಾಗುವುದು

ವಿಕಲಚೇತನ ಪುನರ್ವಸತಿ ಕೇಂದ್ರ ಸಿಬಂದಿಯಿಂದ ನಡೆಯುವ ಚಿಕಿತ್ಸಾ ಶಿಬಿರದ ಕೊಠಡಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಈಗಾಗಲೇ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ನೀರಿನ ಸಂಪರ್ಕ ಸದ್ಯಕ್ಕೆ ಕಷ್ಟ. ಹೊಸತಾಗಿ ಪೈಪ್‌ ಲೈನ್‌ ಆಗಬೇಕಿದೆ. ಇದು ಶಿಕ್ಷಣ ಇಲಾಖೆ ಅಧೀನದ ಕೊಠಡಿಯಾಗಿದ್ದು, ಅವರಿಂದ ನಮಗೆ ಯಾವುದೇ ರೀತಿಯ ಸಹಕಾರ ಸಿಗುತ್ತಿಲ್ಲ. -ಯು. ಸತ್ಯನಾರಾಯಣ ರಾವ್‌, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷರು

ಪ್ರಶಾಂತ್‌ ಪಾದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next