ಹೆಮ್ಮಾಡಿ: ಬಿಸಿಲಿನ ಬೇಗೆ ಈ ಬಾರಿ ಹಿಂದಿನ ವರ್ಷಗಳಿಗಿಂತ ಹೆಚ್ಚುತ್ತಿದ್ದು, ಇದರಿಂದ ಎಲ್ಲೆಡೆಯ ನೀರಿನ ಮೂಲಗಳು ಬತ್ತಿ ಹೋಗುತ್ತಿದ್ದು, ಕೆಲವೆಡೆಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಅದರಲ್ಲೂ ಮುಖ್ಯವಾಗಿ ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗ ಮನೆಗಳಿಗೆ 3 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಹೆಮ್ಮಾಡಿ ಭಾಗದಲ್ಲಿ ನೀರಿನ ಸಮಸ್ಯೆ ಗಂಭೀರಗೊಳ್ಳುವ ಆತಂಕವಿದೆ.
ಜಲ ಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಈಗಿರುವ 3 ದಿನಕ್ಕೊಮ್ಮೆ ಮನೆ- ಮನೆಗಳಿಗೆ ನೀರು ಪೂರೈಸಲು ಸಹ ಗ್ರಾ.ಪಂ. ಹರಸಾಹಸ ಪಡುತ್ತಿದೆ. ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಎಲ್ಲ 4 ವಾರ್ಡ್ ಗಳಲ್ಲೂ ನೀರಿನ ಸಮಸ್ಯೆ ಆರಂಭವಾಗಿದೆ.
ಎಲ್ಲೆಲ್ಲ ಸಮಸ್ಯೆ
ಮುಖ್ಯವಾಗಿ ಸಂತೋಷನಗರ, ಕನ್ನಡ ಕುದ್ರು, ಬುಗುರಿಕಡು, ಕಟ್ಟು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಹೆಮ್ಮಾಡಿ ಗ್ರಾ.ಪಂ. ಕಚೇರಿ ಇರುವ ಸುತ್ತಮುತ್ತಲಿನ ಭಾಗದಲ್ಲಿ ಮಾತ್ರ ನೀರಿನ ಸಮಸ್ಯೆ ಈಗಿಲ್ಲ. ಗ್ರಾಮದಲ್ಲಿ ಒಟ್ಟಾರೆ 960 -970 ಮನೆಗಳಿದ್ದು, ಈ ಪೈಕಿ 280 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕವಿದೆ. ಉಳಿದ ಮನೆಗಳಲ್ಲಿ ಸ್ವಂತ ಬಾವಿಯಿದೆ. ಆದರೆ ಈಗಲೇ ಕೆಲವು ಬಾವಿಗಳು ಬತ್ತಿ ಹೋಗಿದ್ದು, ಇನ್ನು ಕೆಲ ಬಾವಿಗಳಲ್ಲಿ ನೀರು ತಳಮಟ್ಟಕ್ಕೆ ಇಳಿದಿದೆ.
ಈಗಿರುವುದು ಒಂದು ಬಾವಿ ಮಾತ್ರ
ಪಂಚಾಯತ್‌ನಿಂದ ಒಂದು ಬೋರ್‌ವೆಲ್, ಎರಡು ಬಾವಿಗಳನ್ನು ಕೊರೆಯಿಸಲಾಗಿದ್ದು, ಈ ಪೈಕಿ ಬೋರ್ ವೆಲ್‌ನ ಪಂಪ್ ಹಾಳಾಗಿದೆ. ಇನ್ನು ಒಂದು ಬಾವಿಯ ನೀರು ಆಳಕ್ಕಿಳಿದಿದೆ. ಅದನ್ನು ಆಳ ಮಾಡಿ, ರಿಂಗ್ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಈಗಿರುವುದು ಒಂದು ಬಾವಿಯ ನೀರು ಮಾತ್ರ.
Related Articles
ಮೂರು ದಿನಕ್ಕೊಮ್ಮೆ ನೀರು
ಪಂಚಾಯತ್‌ನಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಬಾರಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಬಾವಿಗಳಲ್ಲಿಯೂ ನೀರು ಇಳಿಕೆಯಾಗಿದೆ. ಜಲಜೀವನ್ ಮಿಷನ್ ಕಾಮಗಾರಿ ನಡೆಯುತ್ತಿದೆ. ಮುಂದಿನ ವರ್ಷದಿಂದ ವಾರಾಹಿ ನೀರಿನ ಪ್ರಯೋಜನ ಗ್ರಾಮಕ್ಕೆ ಸಿಗಲಿದೆ. ಈ ಬಾರಿ ಮಾತ್ರ ಸ್ವಲ್ಪ ಮಟ್ಟಿಗೆ ಕಷ್ಟವಾಗಲಿದೆ ಎನ್ನುವುದಾಗಿ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಯು. ಸತ್ಯನಾರಾಯಣ ರಾವ್ ತಿಳಿಸುತ್ತಾರೆ.
ಹೆಮ್ಮಾಡಿ ಗ್ರಾ.ಪಂ. ವಿವರ
ಒಟ್ಟು ಮನೆಗಳು 960-970
ನೀರಿನ ಸಂಪರ್ಕದ
ಮನೆ 280
ಸ್ವಂತ ಬಾವಿ 350 ಕ್ಕೂ ಮಿಕ್ಕಿ
ಜನಸಂಖ್ಯೆ 5 ಸಾವಿರಕ್ಕೂ ಮಿಕ್ಕಿ
ಗರಿಷ್ಠ ಪ್ರಯತ್ನ
ಪಂಚಾಯತ್‌ನಿಂದ ಎಲ್ಲರಿಗೂ ಕುಡಿಯುವ ನೀರು ಪೂರೈಕೆಗೆ ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ನೀರಿನ ಮೂಲಗಳಲ್ಲಿಯೇ ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ವ್ಯತ್ಯಯವಾಗುತ್ತಿದೆ. ಬಾವಿ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಜಲಸಿರಿ ಯೋಜನೆಯವರಿಗೆ ಮನವಿ
ಸಲ್ಲಿಸಿದ್ದೇವೆ. ತಾಲೂಕು ಆಡಳಿತಕ್ಕೂ ಮನವಿ ಸಲ್ಲಿಸಲಾಗಿದೆ.
-ಸುಧಾಕರ ದೇವಾಡಿಗ ಕಟ್ಟು,
ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷರು