Advertisement

ಅತ್ತ ಚುನಾವಣೆ ಅಬ್ಬರ, ಇತ್ತ ಅನ್ನದಾತನ ಕಣ್ಣೀರು

02:52 PM Apr 20, 2023 | Team Udayavani |

ಕೆ.ಆರ್‌.ಪೇಟೆ: ಅತ್ತ ಕ್ಷೇತ್ರಾದ್ಯಂತ ರಾಜಕಾರಣಿಗಳು ಮತಬೇಟೆಯಲ್ಲಿದ್ದರೆ, ಇತ್ತ ಹೇಮಾವತಿ ಮುಖ್ಯ ನಾಲೆಯಲ್ಲಿ ನೀರು ಹರಿಯದೆ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ.

Advertisement

ಸಂಕಷ್ಟ: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾದ ಪರಿಣಾಮ ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿತ್ತು. ಇನ್ನು ತಾಲೂಕಿನ ರೈತರು ಬೇಸಿಗೆಯಲ್ಲಿ ಹೇಮೆಯ ನೀರಿನಿಂದ ಕೆರೆ ಕಟ್ಟೆಗಳು ತುಂಬಿ ತಮ್ಮ ಜಮೀನಿಗಳಿಗೆ ನೀರು ಹರಿಯುವ ಸಂಭ್ರಮದಲ್ಲಿದ್ದರು. ಆದರೆ, ಹೇಮಾವತಿ ಎಡದಂಡೆ ನಾಲೆಯಲ್ಲಿ ನೀರು ಹರಿಯದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

5255 ಎಕರೆ ನೀರಾವರಿ: ಗೊರೂರಿನ ಹೇಮಾವತಿ ಜಲಾಶಯದ ಎಡದಂಡೆ ನಾಲೆ ನೀರು ತಾಲೂಕಿನ ರೈತರ ಜೀವನಾಡಿ. ಎಡದಂಡೆ ನಾಲೆ ತಾಲೂಕು ವ್ಯಾಪ್ತಿಯಲ್ಲಿ ಸರಪಳಿ 106 ರಿಂದ 150.95 ರವರೆಗೆ ಒಟ್ಟು 45.975 ಕಿ. ಮೀ.ಉದ್ದ ಹರಿದು ನೆರೆಯ ಪಾಂಡವಪುರ ತಾಲೂಕಿಗೆ ಹೋಗುತ್ತದೆ. ವಿತರಣಾ ನಾಲೆ 47 ರಿಂದ 64 ರವರೆಗೆ ಒಟ್ಟು 17 ವಿತರಣಾ ನಾಲೆಗಳ ಮುಖಾಂತರ ತಾಲೂಕಿನ 54,088 ಎಕರೆ ಭೂ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಇದಲ್ಲದೆ ಸದರಿ ನಾಲಾ ವ್ಯಾಪ್ತಿಯಲ್ಲಿ ತಾಲೂಕಿನ 95 ಕೆರೆಗಳಿದ್ದು ಕೆರೆಗಳ ಮುಖಾಂತರ 5255 ಎಕರೆ ನೀರಾವರಿಗೆ ಒಳಪಟ್ಟಿದೆ. ಪ್ರಸಕ್ತ ಸಾಲಿನಲ್ಲಿ ನೀರಾವರಿ ಇಲಾಖೆ ನಾಲೆ ಮುಖಾಂತರ ನೀರು ಹರಿಸಿ ಕೆರೆ-ಕಟ್ಟೆ ತುಂಬಿಸದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಡಚಣೆ: ರೈತರ ಹೂವು ಮತ್ತಿತರ ಅಲ್ಪಾವಧಿ ಬೆಳೆಗಳು ನೆಲಕಚ್ಚಿವೆ. ಕಾಲುವೆ ನಿರ್ವಹಣೆಗೂ ನೀರಾವರಿ ಇಲಾಖೆ ಗಮನ ಹರಿಸುತ್ತಿಲ್ಲ. ಕಳಪೆ ಕಾಮಗಾರಿಯಿಂದ ನಾಲೆ ಉದ್ದಗಲಕ್ಕೂ ಅಲ್ಲಲ್ಲಿ ಲೈನಿಂಗ್‌ ಕುಸಿದು ಬಿದ್ದು ನಾಲೆಯಲ್ಲಿ ಸೇರಿಕೊಂಡಿದೆ. ಕುಸಿದ ಲೈನಿಂಗ್‌ ಮೇಲೆ ಗಿಡಗಂಟಿ ಬೆಳೆಯುತ್ತಿದ್ದು ನೀರಿನ ಸರಾಗ ಹರಿಯುವಿಕೆಗೆ ಅಡಚಣೆಯಾಗುತ್ತಿದೆ. ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರಿನ ಸಂಗ್ರಹವಿದ್ದರೂ ನಾಲೆಗಳ ಮುಖಾಂತರ ನೀರು ಹರಿಸದ ನೀರಾವರಿ ಇಲಾಖೆ ಅಧಿಕಾರಿಗಳ ವರ್ತನೆಯನ್ನು ರೈತರು, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಖಂಡಿಸಿದ್ದಾರೆ.

ಬೆಳೆಗಳನ್ನು ಉಳಿಸಿಕೊಳ್ಳಲು ರೈತರ ಪರದಾಟ: ಈಗಾಗಲೇ ಬಿರು ಬೇಸಿಗೆ ಆರಂಭವಾಗಿದ್ದು ಜನ ಜಾನುವಾರುಗಳಿಗೆ ನೀರಿನ ಅಭಾವ ಕಾಣಿಸಿಕೊಂಡಿದೆ. ಕೆರೆಗಳು ಹೇಮೆ ನೀರಿನಿಂದ ಭರ್ತಿಯಾಗದ ಕಾರಣ ಅಂತರ್ಜಲ ಮಟ್ಟ ಕುಸಿದಿದೆ. ರೈತರ ಕೃಷಿ ಪಂಪ್‌ ಸೆಟ್ಟುಗಳು ಸ್ಥಗಿತಗೊಳ್ಳುತ್ತಿವೆ. ನಾಲೆಯಲ್ಲಿ ಬೇಸಿಗೆ ಕಾಲದಲ್ಲಿ ಅನುಸರಿಸುವ ಕಟ್ಟು ನೀರಿನ ಪದ್ಧತಿ ಜಾರಿಗೆ ಬಂದಿದ್ದರೆ, ತಾಲೂಕಿನ ಎಲ್ಲಾ ಕೆರೆ-ಕಟ್ಟೆ ಹೇಮೆಯ ನೀರಿನಿಂದ ಭರ್ತಿಯಾಗಿ ಜನ-ಜಾನುವಾರುಗೆ ಕುಡಿಯುವ ನೀರಿನ ಬವಣೆ ತಪ್ಪುತ್ತಿತ್ತು. ನಾಲಾ ವ್ಯಾಪ್ತಿಯಲ್ಲಿ ಬಹುತೇಕ ರೈತರು ಕಬ್ಬು, ತೆಂಗು, ಅಡಕೆ, ಬಾಳೆ ಮುಂತಾದ ಬೆಳೆ ಬೆಳೆಯುತ್ತಿದ್ದಾರೆ. ಜತೆಗೆ ಕೆಲವು ರೈತರು ಕೆರೆ ನೀರಿನಿಂದ ಭತ್ತ, ರಾಗಿ ಮುಂತಾದ ಬೆಳೆ ಬೆಳೆದರೆ ಮತ್ತಷ್ಟು ರೈತರು ರೇಷ್ಮೆ ಮತ್ತು ಹೂವಿನ ಬೇಸಾಯ ಮಾಡುತ್ತಾರೆ. ಕಾಲುವೆಯಲ್ಲಿ ನೀರು ಹರಿಯದ ಪರಿಣಾಮ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

Advertisement

ಕ್ಷೇತ್ರದಲ್ಲಿ ರೈತರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ಇಲ್ಲಿನ ಅಧಿಕಾರಿಗಳ ವರ್ತನೆಗಳಿವೆ. ರೈತರ ಹಿತದೃಷ್ಟಿಯಿಂದ ತಕ್ಷಣವೇ ನಾಲೆಗೆ ನೀರು ಹರಿಸದಿದ್ದರೆ, ಚುನಾವಣೆ ನಿಯಮ ಮೀರಿ ನೀರಾವರಿ ಇಲಾಖೆ ಮುಂದೆ ಚಳವಳಿ ರೂಪಿಸಬೇಕಾಗುತ್ತದೆ. ● ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ

-ಅರುಣ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next