Advertisement

ತಿಮ್ಲಾಪುರ ಕೆರೆಗೆ ವಾರದಲ್ಲಿ ಹೇಮೆ ನೀರು : ದಶಕಗಳ ಹೋರಾಟಕ್ಕೆ ಸಿಕ್ಕ ಫ‌ಲ

12:39 PM Jan 09, 2021 | Team Udayavani |

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಳೆದ ಮೂರು-ನಾಲ್ಕು ತಿಂಗಳಿನಿಂದ ನಿರಂತರವಾಗಿ ಹರಿದು ವಿವಿಧ ಕೆರೆಗಳನ್ನು ತುಂಬಿಸಿರುವ ಹೇಮಾವತಿ ನದಿ ನೀರು ಹುಳಿಯಾರು ಹೋಬಳಿಯ ತಿಮ್ಲಾಪುರ ಕೆರೆಗೆ ಇನ್ನೊಂದು ವಾರದಲ್ಲಿ ಹರಿಯುವ ಸಾಧ್ಯತೆಯಿದೆ. ಈ ಬೆಳವಣಿಗೆಯಿಂದ ಸ್ಥಳೀಯ ರೈತರ ಕನಸು ನನಸಾದಂತಾಗಿದೆ.

Advertisement

ದಶಕಗಳ ಹಿಂದೆ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ 64 ದಿನಗಳ ಅಹೋರಾತ್ರಿ ಹೋರಾಟದ ಫ‌ಲ ಹಾಗೂ ಮಾಜಿ ಶಾಸಕ ಕೆ.ಎಸ್‌.ಕಿರಣ್‌ಕುಮಾರ್‌ ಹಾಗೂ ಸಿ.ಬಿ.ಸುರೇಶ್‌ ಬಾಬು ಸೇರಿದಂತೆ ಅನೇಕ ಮುಖಂಡರು ಹೇರಿದ ಒತ್ತಡದಿಂದ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ಯೋಜನೆ ಮಂಜೂರಾಗಿತ್ತು. ಆದರೆ ಯೋಜನೆ ಮಂಜೂರಾಗಿ ದಶಕಗಳು ಕಳೆದಿದ್ದರೂ ಕಾಮಗಾರಿ ನನೆಗುದಿಗೆ ಬಿದ್ದು ತಾಲೂಕಿಗೆ ಹೇಮಾವತಿ ನೀರು ಹರಿಯುವ ಕನಸು ಕನಸಾಗಿಯೇ ಉಳಿದಿತ್ತು.

ಕೊಟ್ಟ ಮಾತಿನಂತೆ ನೀರು: ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನನೆಗುದಿಗೆ
ಬಿದ್ದಿದ್ದ ಕಾಮಗಾರಿಗೆ ವೇಗ ನೀಡಿದರಲ್ಲದೆ, ಕಾಮಗಾರಿ ಅನುಷ್ಠಾನಕ್ಕೆ ಇದ್ದ ಎಡರುತೊಡರುಗಳನ್ನು ನಿವಾರಣೆ ಮಾಡಿದರು.
ಸುಮಾರು 3-4 ತಿಂಗಳ ಹಿಂದೆ ತಾಲೂಕಿಗೆ ಪ್ರಾಯೋಗಿಕವಾಗಿ ಹೇಮಾವತಿ ನೀರನ್ನು ಹರಿಸಿ ಈ ಭಾಗದ ಜನರಲ್ಲಿ ಸಚಿವರು ವಿಶ್ವಾಸ ಮೂಡುವಂತೆ ಮಾಡಿದ್ದಾರೆ.

ಇದನ್ನೂ ಓದಿ:ಸ್ವಂತ ಖರ್ಚಿನಿಂದ ಪೈಪ್‌ಲೈನ್‌ ವ್ಯವಸ್ಥೆ : ಸಮಸ್ಯೆಗೆ ಸ್ಪಂದಿಸಿದ ಪುರಸಭೆ ಸದಸ್ಯ

ಬರದ ನಾಡಾಗುತ್ತಿದ್ದ ತಾಲೂಕು: ಮಳೆಯಾಶ್ರಿತ ಪ್ರದೇಶವಾದ ಚಿಕ್ಕನಾಯನಕನಹಳ್ಳಿ ತಾಲೂಕು ಸಮರ್ಪಕವಾದ ಮಳೆಯಿಲ್ಲದೆ ಬರದನಾಡಾಗಿ ಪರಿವರ್ತನೆಯಾಗಿತ್ತು. ಒಂದು ಸಾವಿರ ಅಡಿ ಕೊಳೆವೆ ಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ
ನಿರ್ಮಾಣವಾಗಿತ್ತು. ಪರಿಣಾಮ ತೋಟಗಳು ಒಣಗಿ ನಿಂತಿದ್ದವು. ಇಲ್ಲಿನ ಜನರು ಉದ್ಯೋಗ ಅರಸಿ ಪಟ್ಟಣ ಸೇರಿದ್ದರು. ತಾಲೂಕಿನಲ್ಲಿ ಕೆರೆ ಯೋಜನೆ ಮೂಲಕ ಹೇಮಾವತಿ ನೀರು ಹರಿಯುತ್ತಿರುವುದರಿಂದ ಬತ್ತಿದ್ದ ಬಾವಿ, ಕೊಳವೆಗಳಲ್ಲಿ ನೀರು ಬರಲಾರಂಭಿಸಿದೆ. ಮಳೆ ಜತೆಗೆ ಕೆರೆಗಳಿಗೆ ನೀರು ಹರಿಯುವುದರಿಂದ ಬೆಳೆಗಳಿಗೆ ಅನುಕೂಲವಾಗಿ ರೈತರಿಗೆ ನೀರಿನ ಸಂಕಟ ಪರಿಹಾರವಾಗುತ್ತದೆ.

Advertisement

ಕೆರೆಗಳಿಗೆ ನೀರು ತಂದ ಸಂತಸ: ಕೆರೆಗಳಿಗೆ ನೀರು ಹರಿಯುತ್ತಿರುವುದರಿಂದ ಸ್ಥಳೀಯ ರೈತರು ಸಂಭ್ರಮಕ್ಕೆ ಪಾರವೇ ಇಲ್ಲದಾಗಿದೆ. ಹಾಗಾಗಿ ತಿಮ್ಲಾಪುರ ಭಾಗದ ರೈತರು ತಮ್ಮ ಕೆರೆ ತುಂಬುವುದನ್ನು ಕಾತುರದಿಂದ ಕಾಯುತ್ತಿದ್ದಾರೆ. ಇವರ ಜತೆಗೆ ಹೇಮಾವತಿ ಯೋಜನೆ ಮಂಜೂರಿಗಾಗಿ ಅಹೋರಾತ್ರಿ ಧರಣಿ ಕುಳಿತಿದ್ದ ಬಹುತೇಕ ಸಂಘಟನೆಗಳು ಹುಳಿಯಾರು
ಹೋಬಳಿಯವರಾಗಿದ್ದಾರೆ. ಸಹಜವಾಗಿಯೇ ತಮ್ಮ ಹೋರಾಟದ ಫ‌ಲವನ್ನು ಕೆರೆ ತುಂಬುವುದನ್ನು ಕಣ್ಣಾರೆ ಕಂಡು ಸಂಭ್ರಮಿಸಲು ಎದುರು ನೋಡುತ್ತಿದ್ದಾರೆ. ಇವರೆಲ್ಲರ ನಿರೀಕ್ಷೆಯಂತೆ ತಿಮ್ಲಾಪುರ ಕೆರೆ ನೀರು ಹರಿಯಲು ಕ್ಷಣಗಣನೆ
ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next