Advertisement

ಹೇಮಾವತಿ ಜಲಧಾರೆ ನೋಡಲು ಹರಿದು ಬಂದ ಜನ ಸಾಗರ 

12:40 PM Jul 23, 2018 | |

ಹಾಸನ: ಗೊರೂರಿನ ಹೇಮಾವತಿ ಜಲಾಶಯದತ್ತ ಭಾನುವಾರ ಜನಸಾಗರವೇ ಹರಿದು ಬಂದಿತ್ತು. ಜಲಾಶಯದ 6 ಕ್ರಸ್ಟ್‌ಗೇಟ್‌ಗಳ ಮೂಲಕ ಹರಿವ ಜಲಧಾರೆಯನ್ನು ನೋಡಲು ಸಾವಿರಾರು ಜನರು ಜಲಾಶಯದ ಮುಂಭಾಗ ಜಮಾಯಿಸಿ ವಾರಾಂತ್ಯದ ಸಂತೋಷ ಸವಿದರು. 

Advertisement

ಶುಕ್ರವಾರ ಮತ್ತು ಶನಿವಾರ ಜಲಾಶಯಕ್ಕೆ ಒಳಹರಿವು ಕ್ಷೀಣಿಸಿದ್ದರಿಂದ ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರಿನ ಹರಿವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಶನಿವಾರ ಘಟ್ಟಪ್ರದೇಶದಲ್ಲಿ ಭಾರೀ ಮಳೆ ಆರಂಭವಾಗಿದ್ದರಿಂದ ಭಾನುವಾರ ಬೆಳಗ್ಗೆ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 18,751 ಕ್ಯುಸೆಕ್‌ಗೆ ಏರಿತು. ಹಾಗಾಗಿ ನದಿಗೆ ಕ್ರಸ್ಟ್‌ಗೇಟ್‌ಗಳ ಮೂಲಕ 14, 574 ಕ್ಯುಸೆಕ್‌ ನೀರನ್ನು ಹರಿಸಲಾಯಿತು.

ನದಿಗೆ ನೀರು ಬಿಡುತ್ತಿರುವ ಮಾಹಿತಿ ಪಡೆದ ಜನರು ಬೆಳಗ್ಗೆ 9 ಗಂಟೆಯಿಂದಲೇ ಗೊರೂರಿನತ್ತ ಹೊರಟರು. ಜಲಾಶಯದ ಮುಂಭಾಗ ಜಮಾಯಿಸಿದ ಸಾವಿರಾರು ಜನರು ಮಳೆಯನ್ನೂ ಲೆಕ್ಕಿಸದೆ ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಧುಮುಕುವ ಜಲಧಾರೆಯನ್ನು ಕಣ್ತುಂಬಿಕೊಂಡರು. ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. 

ವಾಹನಗಳ ಸಾಲು: ಕಳೆದ ವಾರವೂ ಸಾವಿರಾರು ಜನರು ಜಲಾಶಯದತ್ತ ಹೋಗಿ ಜಲಧಾರೆಯ ಸೊಬಗು ಸವಿದಿದ್ದರು. ಈ ಭಾನುವಾರವೂ ಜನರು ಗೊರೂರು ಹೇಮಾವತಿ ಜಲಾಶಯದ ತಪ್ಪಲನ್ನು ಪಿಕ್‌ನಿಕ್‌ಸ್ಪಾಟ್‌ ಮಾಡಿಕೊಂಡು ಭಾನುವಾರದ ರಜೆಯನ್ನು ಕಟುಂಬದರೊಂದಿಗೆ ಕಳೆದರು. ಸಾವಿರಾರು ಜನರು ಬಂದಿದ್ದರಿಂದ ಗೊರೂರಿನ ಬಳಿ 2 ಕಿ.ಮೀ.ವರೆಗೂ ವಾಹನಗಳು ಹೆದ್ದಾರಿಯ ಬದಿಯಲ್ಲಿ ಸಾಲು ನಿಂತಿದ್ದವು. 

ಜಲಾಶಯದ ಮೇಲೆ ಹೋಗಲು ಈ ಭಾನುವಾರ ಅವಕಾಶ ನೀಡಲಿಲ್ಲ. ಹಾಗಾಗಿ ಜಲಧಾರೆ ವೀಕ್ಷಿಸಿದ ಜನರು ಜಲಾಶಯದ ಹಿನ್ನೀರಿನ ದ್ವೀಪ ಬೀಕನಹಳ್ಳಿ ಬಳಿ ಹರಿವು ಕೋನಾಪುರ ದ್ವೀಪಕ್ಕೆ ಭೇಟಿ ನೀಡಿ ಹೇಮಾವತಿಯ ಜಲ ರಾಶಿಯನ್ನು ದಿಟ್ಟಿಸಿ ಸಂತಸಪಟ್ಟರು. ಮತ್ತೆ ಕೆಲವರು ಹಾಸನ ತಾಲೂಕು ಶೆಟ್ಟಿಹಳ್ಳಿ ಬಳಿ ತೆರಳಿ ಹಿನ್ನೀರಿನಲ್ಲಿ ಮುಳುಗಿರುವ ಪುರಾತನ ಚರ್ಚ್‌ ಹಾಗೂ ಹಾಸನ ತಾಲೂಕು ಮತ್ತು ಆಲೂರು ತಾಲೂಕು ಬೆಸೆಯುವ ಕೊಂಡಿ ಶೆಟ್ಟಿಹಳ್ಳಿ ಸೇತುವೆ ಮೇಲೆ ನಿಂತು ನೀರಿನ ಅಲೆಯ ಸೊಬಗು ಸವಿದರು. 
 
ಹೇಮಾವತಿ ಜಲಾಶಯದ ಮಟ್ಟ
22-07-2018,  ಭಾನುವಾರ.

ಪೂರ್ಣಮಟ್ಟ : 2922 ಅಡಿಗಳು. 
ಇಂದಿನ ಮಟ್ಟ : 2919. 93 ಅಡಿಗಳು
ಒಳ ಹರಿವು :18,751 ಕ್ಯುಸೆಕ್‌.
ಹೊರಹರಿವು: 17,584 ಕ್ಯುಸೆಕ್‌.
ನೀರಿನ ಸಂಗ್ರಹ ಸಾಮರ್ಥ್ಯ: 37.10 ಟಿಎಂಸಿ
ಇಂದಿನವರೆಗೆ ಸಂಗ್ರಹ : 35.10 ಟಿಎಂಸಿ.
ಕಳೆದ ವರ್ಷದ ಮಟ್ಟ : 2885. 72 ಅಡಿಗಳು.
ಕಳೆದ ವರ್ಷ ಒಳ ಹರಿವು : 9,470 ಕ್ಯುಸೆಕ್‌.
ಕಳೆದ ವರ್ಷ ಹೊರ ಹರಿವು:150 ಕ್ಯುಸೆಕ್‌.
ಕಳೆದ ವರ್ಷದ ಸಂಗ್ರಹ: 11.99 ಟಿಎಂಸಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next