Advertisement

ಮುಕ್ತಿಧಾಮಗಳ ಬರಕ್ಕೆ ಮುಕ್ತಿ ಎಂದು?

10:05 AM Feb 25, 2020 | Lakshmi GovindaRaj |

ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಬದುಕಿರುವಾಗ ಹೇಗೋ ನೆಲೆ ಸಿಗುತ್ತಿದೆ. ಆದರೆ ಅದೇ ವ್ಯಕ್ತಿ ಸಾವಿಗೀಡಾದರೆ, ಆತನನ್ನು ಹೂಳಲಿಕ್ಕೂ ಇಲ್ಲಿ ಮುಕ್ತಿಧಾಮದ ಕೊರತೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ನಗರ ಪ್ರದೇಶ ವಿಸ್ತಾರವಾಗುತ್ತಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯ ನೀಡುವುದು ಸವಾಲಾಗಿದೆ. ಅವುಗಳಲ್ಲಿ ಚಿತಾಗಾರ ಕೂಡ ಒಂದು. ಈ ಅಂತಿಮ ಯಾತ್ರೆಗೆ ಇರುವ ಸಮಸ್ಯೆಗಳ ಸುತ್ತ ಒಂದು ಸುತ್ತಾಟ

Advertisement

ನಗರದಲ್ಲಿ ಈಗ ಪಾರ್ಥಿವ ಶರೀರವನ್ನು ಹೂಳುವುದಕ್ಕೂ ಜಾಗ ಇಲ್ಲ. ಇದ್ದರೂ ಅಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ. ಇದರಿಂದಾಗಿ ಅಂತ್ಯಸಂಸ್ಕಾರಕ್ಕಾಗಿ ಶವ ಹೊತ್ತು ಹತ್ತಾರು ಕಿ.ಮೀ. ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇರುವ ವಿದ್ಯುತ್‌ ಚಿತಾಗಾರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಆಗಾಗ ಕೆಟ್ಟು ನಿಲ್ಲುತ್ತಿವೆ. ಕೆಲವು ವಿದ್ಯುತ್‌ ಚಿತಾಗಾರದಲ್ಲಿ ಒಂದು ಯಂತ್ರ ಕಾರ್ಯನಿರ್ವಹಿಸಿದರೆ, ಮೊತ್ತೂಂದರಲ್ಲಿ ತಾಂತ್ರಿಕ ದೋಷದಿಂದ ದುರಸ್ತಿಗೆ ಬರುತ್ತಿದೆ. ಇರುವ ಎರಡು ಯಂತ್ರಗಳು ಕೈಕೊಟ್ಟಾಗ ಶವವನ್ನು ಸಂಬಂಧಿಕರು ಒಂದೆಡೆಯಿಂದ ಮತ್ತೂಂದೆಡೆ ಅಲೆದಾಡಿಸುವ ಪ್ರಸಂಗಗಳೂ ನಡೆದಿವೆ. ಕೆಲವೆಡೆ ಶವಹೂಳಲು ಜಾಗದ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಪಾಲಿಕೆ ಸಿದ್ಧವಿದ್ದರೂ ಸರ್ಕಾರಿ ಸ್ಥಳ ಸಿಗುತ್ತಿಲ್ಲ.

ಸುಮಾರು 830 ಚದರ ಕಿ.ಮೀ. ವ್ಯಾಪ್ತಿಯಲ್ಲಿ 1.20 ಕೋಟಿಗೂ ಅಧಿಕ ಜನಸಂಖ್ಯೆ ಇರುವ ನಗರದಲ್ಲಿ ಇರುವ ಚಿತಾಗಾರಗಳ ಸಂಖ್ಯೆ ಹತ್ತು ಹಾಗೂ ರುದ್ರಭೂಮಿಗಳ ಸಂಖ್ಯೆ 52. ಜನ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಬಿಬಿಎಂಪಿ ವ್ಯಾಪ್ತಿಯ ಯಲಹಂಕ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯು ಪಾಲಿಕೆಗೆ ನಿರ್ದೇಶನ ನೀಡಿದೆ. ಆದರೆ, ಯಲಹಂಕದಲ್ಲಿ ಆರು ಪ್ರದೇಶಗಳಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸುವ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಇನ್ನು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಒಂದು ಚಿತಾಗಾರವಿದ್ದು (ಕೂಡ್ಲು ಗೇಟ್‌ನಲ್ಲಿ) ಆ ಭಾಗದಲ್ಲಿ ಸಂಚಾರದಟ್ಟಣೆ ಹಾಗೂ ಮಾಹಿತಿ ಕೊರತೆಯಿಂದ ಶವಸಂಸ್ಕಾರಕ್ಕೆ ಜನ ಬನಶಂಕರಿ, ವಿಲ್ಸನ್‌ ಗಾರ್ಡನ್‌ ಚಿತಾಗಾರಗಳತ್ತ ಮುಖ ಮಾಡುತ್ತಿದ್ದಾರೆ.

ಶವಸಂಸ್ಕಾರಕ್ಕೆ ಜಾಗ ಇಲ್ಲ!: ಯಲಹಂಕ ವಲಯದಲ್ಲಿ ಚಿತಾಗಾರ ನಿರ್ಮಾಣಕ್ಕೆ ಗುರುತಿಸಿರುವ ಹುಲ್ಲೇಗೌಡನಹಳ್ಳಿ, ಶಿವನಪುರ ಹಾಗೂ ಗಂಗೊಂಡನಹಳ್ಳಿಯಲ್ಲಿ ಪಾಲಿಕೆ ಅಧಿಕಾರಿಗಳು ತಲಾ ಎರಡು ಎಕರೆ ಜಾಗ ಗುರುತಿಸಿದ್ದಾರೆ. ಆದರೆ, ಮೂರು ಪ್ರದೇಶಗಳಲ್ಲಿ ಒತ್ತುವರಿ ಸಮಸ್ಯೆ ಉಂಟಾಗಿರುವುದರಿಂದ ಜಾಗವನ್ನು ಪಾಲಿಕೆ ಸುಪರ್ದಿಗೆ ತೆಗೆದುಕೊಳ್ಳುವುದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ಯಲಹಂಕ ವಲಯದ ಬಿಬಿಎಂಪಿ ಅಧಿಕಾರಿಗಳು.

ಬಾಗಲೂರಿನಲ್ಲಿ ಒಂದು ಎಕರೆ, ಕುದರಗೆರೆಯಲ್ಲಿ ಎರಡು ಎಕರೆ ಹಾಗೂ ಆವಲಹಳ್ಳಿಯಲ್ಲಿ ಎರಡು ಎಕರೆ ಜಾಗ ಗುರುತಿಸಲಾಗಿದ್ದು, ರುದ್ರಭೂಮಿ ಹಾಗೂ ಚಿತಾಗಾರ ನಿರ್ಮಾಣ ಮಾಡುವ ಯೋಜನೆ ಮಂದಗತಿಯಲ್ಲಿದೆ. ವಿದ್ಯುತ್‌ಚಿತಾಗಾರ, ರುದ್ರಭೂಮಿ ಹಾಗೂ ಸ್ಮಶಾನಗಳ ನಿರ್ವಹಣೆಗೆ ಪಾಲಿಕೆ 2019-2020ನೇ ಸಾಲಿನ ಬಜೆಟ್‌ನಲ್ಲಿ ಮೂರು ಕೋಟಿ ಅನುದಾನ ಮೀಸಲಿಟ್ಟಿತ್ತು. ಆದರೆ, ನಗರದ ಬಹುತೇಕ ವಿದ್ಯುತ್‌ ಚಿತಾಗಾರಗಳ ಸಮಸ್ಯೆಗಳ ನಿವಾರಿಸುವ ಕೆಲಸವಾಗಿಲ್ಲ. ಚಿತಾಗಾರಗಳ ನಿರ್ವಾಹಕರ ಕೊರತೆಯೂ ಕಾಡುತ್ತಿದೆ ಎನ್ನುತ್ತವೆ ಮೂಲಗಳು.

Advertisement

ಸಂಚಾರದಟ್ಟಣೆ ಸಮಸ್ಯೆ!: ವಿಶ್ವದಲ್ಲೇ ಅತಿಹೆಚ್ಚು ಸಂಚಾರದಟ್ಟಣೆ ಇರುವ ಬೆಂಗಳೂರಿನಲ್ಲಿ ಶವಸಂಸ್ಕಾರಕ್ಕೂ ಅದರ ಬಿಸಿ ತಟ್ಟುತ್ತಿದೆ. ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಶವಸಂಸ್ಕಾರಕ್ಕೂ ಸಂಚಾರದಟ್ಟಣೆ ಇಲ್ಲದ ರಸೆೆ¤ಗಳನ್ನು, ಹುಡುಕುವ ಸ್ಥಿತಿ ಇದೆ. ಬೊಮ್ಮನಹಳ್ಳಿ ಹೆದ್ದಾರಿಗಳು ಮತ್ತು ಅಲ್ಲಿರುವ ಸಂಚಾರದಟ್ಟಣೆ ವಿಪರೀತ. ಈ ಹಿನ್ನೆಲೆಯಲ್ಲಿ ಕೂಡ್ಲುಗೇಟ್‌ನಲ್ಲಿ ಚಿತಾಗಾರವಿದ್ದರೂ, ಅಲ್ಲಿಗೆ ತೆರಳಲು ಜನ ಹಿಂದೇಟು ಹಾಕುತ್ತಾರೆ. ಬೊಮ್ಮನಹಳ್ಳಿಯ ಚಿತಾಗಾರದ ಪಕ್ಕವೇ ಪಾಲಿಕೆಯ ಹಸಿತ್ಯಾಜ್ಯ ಸಂಸ್ಕರಣಾ ಘಟಕವಿದ್ದು, ಇದರ ದುರ್ನಾತ ಚಿತಾಗಾರವನ್ನು ಆವರಿಸಿಕೊಳ್ಳುತ್ತದೆ. ಚಿತಾಗಾರ ಸಂಪರ್ಕಿಸುವ ಮಾರ್ಗವನ್ನು ಕಸ ವಿಂಗಡಣೆಗೆ ಬಳಸಿಕೊಳ್ಳಲಾಗುತ್ತಿದೆ.

ಸುರಕ್ಷತಾ ಸಾಧನವೂ ಇಲ್ಲ: ಚಿತಾಗಾರದಲ್ಲಿರುವ ಸಿಬ್ಬಂದಿ ವೇತನ ನೀಡದೆ, ಅಮಾನವೀಯವಾಗಿ ದುಡಿಸಿಕೊಳ್ಳುತ್ತಿರುವುದು ಒಂದೆಡೆಯಾದರೆ, ಮತ್ತೂಂದೆಡೆ ಅವರ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ, ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ಆತಂಕ ಎದುರಿಸುತ್ತಿದ್ದಾರೆ. ಯಾವುದೇ ಸುರಕ್ಷತಾ ಸಾಧನ ನೀಡದೆ ಇರುವುದರಿಂದ ಭಯದಿಂದಲೇ ಕೆಲಸ ಮಾಡುತ್ತಿದ್ದೇವೆ. ಚಿತಾಗಾರದ ಗಾಳಿ ಸೇವಿಸುವುದರಿಂದ ಉಸಿರಾಡಲು ಸಹ ಸಂಕಟವಾಗುತ್ತದೆ ಎನ್ನುತ್ತಾರೆ ಹೆಬ್ಟಾಳ ಚಿತಾಗಾರದ ಸಿಬ್ಬಂದಿ ಎಂ.ಡಿ. ಚಂದ್ರಯ್ಯ. “ಅಂತ್ಯಸಂಸ್ಕಾರಕ್ಕೆ ತಂದಾಗ ಆ ಮೃತಪಟ್ಟ ವ್ಯಕ್ತಿಗೆ ಯಾವ ಕಾಯಿಲೆ ಇತ್ತು ಎನ್ನುವುದು ತಿಳಿಯುವುದು ಹೇಗೆ? ಕೆಲವೊಮ್ಮೆ ಅನಾಥ ಶವದಿಂದ ರಕ್ತ ಬಸಿಯುತ್ತಿರುತ್ತದೆ. ಯಾವಾಗ ಯಾವ ಕಾಯಿಲೆ ಬರುತ್ತದೆಯೋ ಎಂಬ ಆತಂಕದಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

ವೇತನ ನೀಡದೆ ವರ್ಷವಾಯ್ತು!: ಇನ್ನು ಇರುವ ಚಿತಾಗಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವೇತನ, ಮುಖಗವಸು, ಕೈಗವಸು ಮತ್ತಿತರ ಸುರಕ್ಷಾ ಸಾಧನಗಳೂ ಇಲ್ಲ. ಯಲಹಂಕ ಹೋಬಳಿಯ ಮೋಡಿ ಅಗ್ರಹಾರ, ಬೊಮ್ಮನಹಳ್ಳಿಯ ಕೂಡ್ಲುಗೇಟ್ನ ವಿದ್ಯುತ್‌ ಚಿತಾಗಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಪಾಲಿಕೆ ಒಂದು ವರ್ಷದಿಂದ ವೇತನ ನೀಡಿಲ್ಲ. ಅಲ್ಲದೆ, ಹೆಬ್ಟಾಳದ ಚಿತಾಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ ಎಂದು “ಉದಯವಾಣಿ’ಯೊಂದಿಗೆ ಸಿಬ್ಬಂದಿ ಅಳಲು ತೋಡಿಕೊಂಡರು. ವೇತನ ನೀಡುವಂತೆ ಕೇಳಿದರೆ ಲಂಚ ನೀಡುವಂತೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ವರ್ಷದಿಂದ ವೇತನವಿಲ್ಲ ಹೀಗಿರುವಾಗ ಅಧಿಕಾರಿಗಳಿಗೆ ಎಲ್ಲಿಂದ ಹಣ ತರುವುದು ಎಂದು ಮೇಡಿ ಅಗ್ರಹಾರದ ಚಿತಾಗಾರದಲ್ಲಿ ಕಾರ್ಯನಿರ್ವ ಹಿಸುತ್ತಿರುವ ಎಚ್‌.ಟಿ. ವೆಂಕಟೇಶ್‌ ಅಸಹಾಯಕತೆ ವ್ಯಕ್ತಪಡಿಸಿದರು. ಬೊಮ್ಮನಹಳ್ಳಿಯ ಚಿತಾಗಾರ ಹಾಗೂ ಹೆಬ್ಟಾಳದ ಚಿತಾಗಾರದ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ಚಿತಾಗಾರ ಸಿಬ್ಬಂದಿ ಬದುಕು ಬೀದಿಗೆ: ಈ ಚಿತಾಗಾರಗಳ ನಿರ್ವಹಣೆ ಗುತ್ತಿಗೆಯನ್ನು ಪಾಲಿಕೆ ರದ್ದುಪಡಿಸಿದ ಹಿನೆೆ°ಲೆಯಲ್ಲಿ ಕಳೆದ ಒಂದು ವರ್ಷದಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿರುವವರ ಬದುಕು ಬೀದಿಗೆ ಬಿದ್ದಿದೆ. ಕನಿಷ್ಠ ವೇತನ ಪಾವತಿಸುವಂತೆ ಪಾಲಿಕೆಯಿಂದ ಆದೇಶವಾಗಿದೆ. ಮುಖ್ಯಮಂತ್ರಿಗಳ ಕಾಯದರ್ಶಿ ಹಾಗೂ ಯಲಹಂಕ ಶಾಸಕರಾದ ಎಸ್‌.ಆರ್‌. ವಿಶ್ವನಾಥ್‌, ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ. ಆದರೂ ಸಂಬಳ ನೀಡಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ.

ಕನಿಷ್ಠ 60 ಚದರಡಿ ಜಾಗ: 2000-01ನೇ ಸಾಲಿನ ಅಂಕಿ-ಅಂಶಗಳ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರತಿ ವರ್ಷ ಪ್ರತಿ 1 ಸಾವಿರ ಜನರಲ್ಲಿ ಸರಾಸರಿ 7ರಿಂದ 8 ಜನ ಸಾವಿಗೀಡಾಗುತ್ತಿದ್ದು, ವಾರ್ಷಿಕ ಸಾವಿನ ಪ್ರಮಾಣ 10 ಜನ ಎಂದು ಭಾವಿಸಿ, ಮುಂದಿನ 30 ವರ್ಷಗಳಿಗೆ ಸಾವನ್ನಪ್ಪಬಹುದಾದ 300 ಜನರ ಶವಸಂಸ್ಕಾರಕ್ಕಾಗಿ ತಲಾ 60 ಚದರಡಿಯಂತೆ, ಕನಿಷ್ಠ 18 ಸಾವಿರ ಚದರ ಅಡಿ ಅಂದರೆ 18ರಿಂದ 20 ಗುಂಟೆ ಜಾಗವನ್ನು ಶವ ಸಂಸ್ಕಾರದ ಉದ್ದೇಶಕ್ಕಾಗಿ ಕಾಯ್ದಿರಿಸಬೇಕು ಎಂದು ಕಂದಾಯ ಇಲಾಖೆ 2014ರಲ್ಲೇ ಹೇಳಿತ್ತು.

ನ್ಯಾಯಾಲಯದ ಆದೇಶ: ಶವಸಂಸ್ಕಾರಕ್ಕೆ ಗ್ರಾಮ ಮತ್ತು ಪಟ್ಟಣಗಳಲ್ಲಿ ಆರು ತಿಂಗಳಲ್ಲಿ ಅಗತ್ಯ ಭೂಮಿ ಒದಗಿಸಬೇಕು ಎಂದು ಹೈಕೋರ್ಟ್‌ 2019ರ ಆಗಸ್ಟ್‌ 20ರಂದು ಆದೇಶ ನೀಡಿತ್ತು. ಅದರಂತೆ, ಅ. 25ರಂದು ಕಂದಾಯ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬೆಂಗಳೂರು ನಗರ ಜಿಲ್ಲೆ ವಿವರ (ಕಂದಾಯ ಇಲಾಖೆ ಪ್ರಕಾರ)
875 ಒಟ್ಟಾರೆ ಹಳ್ಳಿಗಳು
15 ಪಟ್ಟಣಗಳು
717 ಸದ್ಯ ಇರುವ ಸ್ಮಶಾನಗಳು
158 ಗ್ರಾಮಗಳಿಗೆ ಸ್ಮಶಾನಗಳಿಲ್ಲ

ನಗರದ ವಿದ್ಯುತ್‌ ಚಿತಾಗಾರಗಳು
ಕಲ್ಲಹಳ್ಳಿ (ಸಿ.ವಿ.ರಾಮನ್‌ನಗರ)
ಕೆಂಪಾಪುರ (ಹೆಬ್ಟಾಳ)
ಸುಮನಹಳ್ಳಿ (ರಾಜರಾಜೇಶ್ವರಿ ನಗರ)
ಬನಶಂಕರಿ (ಪದ್ಮನಾಭ ನಗರ)
ಕೆಂಗೇರಿ (ಆರ್‌.ಆರ್‌.ನಗರ- ಯಶವಂತಪುರ ರಸ್ತೆ)
ಪೀಣ್ಯ (ದಾಸರಹಳ್ಳಿ)
ಮೈಸೂರು (ಚಾಮರಾಜಪೇಟೆ- ಪಶ್ಚಿಮ)
ಸತ್ಯಹರಿಶ್ಚಂದ್ರಘಾಟ್‌ (ರಾಜಾಜಿನಗರ)
ಬೊಮ್ಮನಹಳ್ಳಿ (ಬೊಮ್ಮನಹಳ್ಳಿ)
ಮೇಡಿ ಅಗ್ರಹಾರ(ಯಲಹಂಕ)

ಬಿಬಿಎಂಪಿ ವ್ಯಾಪ್ತಿಯಲ್ಲಿ 9ನೂತನ ಚಿತಾಗಾರ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ. ಯಲಹಂಕದಲ್ಲಿ ಎರಡು ಹಾಗೂ ದಾಸರಹಳ್ಳಿಯಲ್ಲಿ ಒಂದು ಚಿತಾಗಾರ ಸದ್ಯದಲ್ಲೇ ನಿರ್ಮಾಣವಾಗಲಿದೆ. ರುದ್ರಭೂಮಿ ಹಾಗೂ ಚಿತಾಗಾರ ಸಿಬ್ಬಂದಿಗೆ ವೇತನವಾಗದೆ ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಲಂಚ ಕೇಳುತ್ತಿರುವ ಬಗ್ಗೆ ಲಿಖೀತ ದೂರು ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

ಸಿಬ್ಬಂದಿಗಳಿಗೆ ವೇತನ ನೀಡದೆ ತೊಂದರೆ ಕೊಡುತ್ತಿದ್ದು, ಲಂಚ ನೀಡಿದರೆ ಮಾತ್ರ ವೇತನ ಕೊಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಚಿತಾಗಾರ ಹಾಗೂ ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಆರೋಗ್ಯ ಹಾಗೂ ಸುರಕ್ಷತಾ ದೃಷ್ಟಿಯಿಂದ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಲವು ಬಾರಿ ಮನವಿ ಮಾಡಿದರೂ ಮೇಯರ್‌ ಹಾಗೂ ಆಯುಕ್ತರು ಇಲ್ಲಿಯವರೆಗೆ ಒಂದೇ ಒಂದು ಸಭೆ ನಡೆಸಿಲ್ಲ.
-ಆ.ಸುರೇಶ್‌, ಅಂಬೇಡ್ಕರ್‌ ದಸಂಸ ಪ್ರಧಾನ ಕಾರ್ಯದರ್ಶಿ

ಸರ್ಕಾರಿ ಜಾಗವಿಲ್ಲ! ಶವಸಂಸ್ಕಾರಕ್ಕೆ ಬರುವವರು ನೀಡುವ ಪುಡಿಗಾಸಿನಿಂದಲೇ ನಮ್ಮ ಜೀವನ ನಡೆಯುತ್ತಿದೆ. ಸಂಬಳ ನೀಡಿದರೆ ನೆಮ್ಮದಿಯಿಂದ ಬದುಕುತ್ತೇವೆ.
-ಸಿ.ಎಸ್‌. ರುದ್ರಾರಾದ್ಯ, ಯಲಹಂಕದ ಮೇಡಿ, ಚಿತಾಗಾರದ ಸಿಬ್ಬಂದಿ

ನಮ್ಮ ವಾರ್ಡ್‌ನಲ್ಲಿಯೂ ಸರ್ಕಾರಿ ಜಾಗವಿಲ್ಲ, ಚಿತಾಗಾರದ ಪ್ರಸ್ತಾವನೆಯೂ ಇಲ್ಲ.
-ಭಾರತಿ ರಾಮಚಂದ್ರ, ಹೊಂಗಸಂದ್ರ

ವಾರ್ಡ್‌ ಸದಸ್ಯೆ.ನಮ್ಮ ವಾರ್ಡ್‌ನಲ್ಲಿ ಸರ್ಕಾರಿ ಜಾಗದ ಕೊರತೆ ಇದೆ. ಇರುವ ಜಾಗವನ್ನು ಪಾಲಿಕೆವತಿಯಿಂದ ಶಾಲಾ, ಕಾಲೇಜು ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ.
-ಭಾಗ್ಯಲಕ್ಷ್ಮೀ ಮುರಳಿ, ಅರೆಕೆರೆ ವಾರ್ಡ್‌ ಸದಸ್ಯೆ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next