ಹಳೆಯಂಗಡಿ: ಆತನಿಗೆ ಇನ್ನೂ 7ರ ಹರೆಯ. ಬಾಲ್ಯದ ದಿನಗಳಲ್ಲಿ ಎಲ್ಲರಂತೆ ಸ್ನೇಹಿತರೊಂದಿಗೆ ಓಡಾಡಿಕೊಂಡು ಹೆತ್ತವರೊಂದಿಗೆ ದಿನ ಕಳೆಯಬೇಕಾದ ಬಾಲಕನಿಗೆ ದೈಹಿಕ ಕ್ಷಮತೆ ಇದ್ದರೂ ಕಾಲಿನ ಅಶಕ್ತಿಯಿಂದ ಆತನ ತಾಯಿಯೇ ಆತನಿಗೆ ಕಾಲಿನ ಶಕ್ತಿಯಾಗಿದ್ದಾರೆ. ಇದು ಹಳೆಯಂಗಡಿ ಬಳಿಯ ಇಂದಿರಾನಗರದ ಬಡಕುಟುಂಬವೊಂದರ ವ್ಯಥೆ.
ಬೊಳ್ಳೂರಿನ ಇಂದಿರಾನಗರದ ಆಶಿಯಾ ಎಂಬವರ ಎರಡನೇ ಪುತ್ರ ಮೊಹಮ್ಮದ್ ಸವಾನ್ (7) ಸಣ್ಣ ವಯಸ್ಸಿನಲ್ಲಿಯೇ ಕಾಲಿನ ಅಂಗವೈಕಲ್ಯದಿಂದ ಬಳಲುತ್ತಿದ್ದ. 8ನೇ ತರಗತಿಯಲ್ಲಿ ಕಲಿಯುತ್ತಿರುವ ಮೊಹಮ್ಮದ್ ಸವಾದ್(13) ಜತೆಗೆ ತವರು ಮನೆಯಲ್ಲಿಯೇ ಆಸರೆ ಪಡೆದಿರುವ ಆಶಿಯಾ, ಮೊಹಮ್ಮದ್ ಸವಾನ್‌ಗೆ ಅನೇಕ ಕಡೆಗಳಲ್ಲಿ ಔಷಧ ನೀಡಿ ಲಕ್ಷಾಂತರ ರೂ. ಖರ್ಚು ಮಾಡಿದ್ದರೂ ಕಾಲಿನ ಶಕ್ತಿ ಇನ್ನೂ ಬಂದಿಲ್ಲ.
ವೈದ್ಯರ ಪ್ರಕಾರ ಅಪೌಷ್ಟಿಕತೆಯಿಂದ ಮಾಂಸ ಖಂಡಗಳು ಹಾಗೂ ನರನಾಡಿಗಳು ಸ್ಪಂದಿಸದೇ ಇರುವುದರಿಂದ ಈ ರೀತಿಯಾಗಿ ಕಾಲಿನ ಶಕ್ತಿ ಕಳೆದುಕೊಂಡಿದ್ದಾನೆ. ಕಾಲಿನ ಮಾಂಸದ ಒಂದು ಭಾಗವನ್ನು ಪರೀಕ್ಷೆಗೆಂದು ಬೆಂಗಳೂರಿಗೆ ರವಾನಿಸಲಾಗಿದೆ. ಅದರ ವರದಿಯ ಆಧಾರದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖನಾಗಲು ಸಾಧ್ಯವಿದೆ ಎಂದಿದ್ದಾರೆ. ಬಡತನದ ಚೌಕಟ್ಟಿನಲ್ಲಿ ಜೀವನ ಸಾಗಿಸುತ್ತಿರುವ ಇವರ ಚಿಕಿತ್ಸೆಗಾಗಿ ಧನ ಸಹಾಯ ಸಿಗಬೇಕಾಗಿದೆ. ಈಗಾಗಲೇ ಈ ಬಡ ಕುಟುಂಬಕ್ಕೆ ಆಸರೆಯಾಗಿ ನಿಂತಿರುವುದು ಇಂದಿರಾನಗರದ ರಿಲಯನ್ಸ್ ಅಸೋಸಿಯೇಶನ್ ಎಂಬ ಸಮಾಜ ಸೇವಾ ಸಂಸ್ಥೆ.
ರಿಲಾಯನ್ಸ್ ಅಸೋಸಿಯೇಶನ್
ಒಂದು ಪುಟ್ಟ ಗ್ರಾಮದಲ್ಲಿ ಹುಟ್ಟಿಕೊಂಡಿರುವ ರಿಲಯನ್ಸ್ ಅಸೋಸಿಯೇಶನ್ ಇಂದು ದೇಶ ವಿದೇಶದಲ್ಲಿನ ದಾನಿಗಳ ಸಂಪರ್ಕ ಪಡೆದು ವಿವಿಧ ರೀತಿಯಲ್ಲಿ ನಿಧಿ ಕ್ರೋಢಿಕರಿಸಿಕೊಂಡು ತಮ್ಮ ಸೇವಾ ಮನೋಭಾವನೆಯನ್ನು ಸ್ಥಳೀಯವಾಗಿ ಪಸರಿಸುತ್ತಿರುವುದರಿಂದ ಆಶಿಯಾ ಅವರಿಗೂ ಪರೋಕ್ಷವಾಗಿ ಆಕೆಯ ಮಗನಿಗೆ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದೆ. ಈಗಾಗಲೇ ಊರ, ಪರವೂರ ದಾನಿಗಳಿಂದ ನಿಧಿ ಸಂಗ್ರಹಿಸಿ ಮಂಗಳೂರಿನ ತಜ್ಞ ವೈದ್ಯರಲ್ಲಿ ಚಿಕಿತ್ಸೆಗಾಗಿ ಸಂಸ್ಥೆಯೇ ನೆರವು ನೀಡುತ್ತಿದೆ. ಜತೆಗೆ ಎರಡು ವರ್ಷಗಳ ಹಿಂದೆಯೇ ಆಶಿಯಾಗೆ ಮನೆಯನ್ನು ಸಹ ನಿರ್ಮಿಸಿಕೊಟ್ಟಿದೆ.
Related Articles
ಸಹೃದಯರಿಂದ ಸಹಕಾರ
ಎರಡು ವರ್ಷದ ಹಿಂದೆ ಆಶಿಯಾ ಅವರು ತಮ್ಮ ಮಗನ ಅನಾರೋಗ್ಯದ ಬಗ್ಗೆ ಸಂಸ್ಥೆಯಲ್ಲಿ ಹೇಳಿಕೊಂಡಿದ್ದರು. ಸವಾನ್‌ನ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚು ಮಾಡಲಾಗಿದೆ. ಬೆಂಗಳೂರಿನ ವೈದ್ಯರೊಬ್ಬರು ಆತನು ನಡೆದಾಡಲು ಸಾಧ್ಯವಿದೆ ಎಂದು ತಿಳಿಸಿರುವುದರಿಂದ ಸಂಸ್ಥೆಯೇ ಆಕೆಯ ನೆರವಿಗೆ ನಿಂತಿದೆ.
-ಆರೀಫ್ ಹಳೆಯಂಗಡಿ,
ಮಾಜಿ ಅಧ್ಯಕ್ಷರು
ರಿಲಯನ್ಸ್ ಅಸೋಸಿಯೇಶನ್.
ನೆರವಿಗಾಗಿ ಸಂಪರ್ಕಿಸಿ
ಆಶಿಯಾ ಅವರಿಗೆ ನೆರವು ನೀಡಲು ಬಯಸುವವರು ASIA ಅಕೌಂಟ್ ಸಂಖ್ಯೆ 0637101206996. ಕೆನರಾ ಬ್ಯಾಂಕ್, ಹಳೆಯಂಗಡಿ ಬ್ರ್ಯಾಂಚ್. IFSC CODE CNRB0000637 ಗೆ ಹಣ ಜಮೆ ಮಾಡಬಹುದು.