ಚಿಕ್ಕಮಗಳೂರು: ಸಮಸ್ಯೆಗಳನ್ನು ಎದುರಿಸುತ್ತಿರುವ, ದೌರ್ಜನ್ಯಗಳನ್ನು ಅನುಭವಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ನೆರವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ ತಿಳಿಸಿದರು.
ಶನಿವಾರ ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪ ಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲಘಟ್ಟಗಳಿಗೆ ಹೋಲಿಸಿದಲ್ಲಿ ಇಂದು ಮಹಿಳೆಯರು ಸುಧಾರಣೆ ಕಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳದೆ ಮಹಿಳೆಯರು ಇನ್ನಷ್ಟು ಸುಧಾರಣೆ ಕಾಣಬೇಕಿದೆ. ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಎಎಸ್ಪಿ ಶೃತಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಯಾವ ವಿಷಯದಲ್ಲೂ ಕಮ್ಮಿ ಇಲ್ಲ, ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಯುದ್ಧಭೂಮಿಯಲ್ಲಿ ಹೋರಾಡುವ ಧೈರ್ಯವನ್ನು ಹೊಂದಿದ್ದಾಳೆ ಎಂದರು.
ಡಾ| ಪ್ರಶಸ್ತಿ ಸಚಿನ್ ಮಾತನಾಡಿ, ಮಹಿಳೆಯರು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದು, ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.
ಆದಿಚುಂಚನಗಿರಿ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟರ್ ಸಿ.ಕೆ. ಸುಬ್ಬರಾಯ, ಕಾಲೇಜು ಪ್ರಾಂಶುಪಾಲ ಡಾ| ಜಯದೇವ ಇದ್ದರು. ಪುಷ್ಪಾ ರವಿಕುಮಾರ್ ಸ್ವಾಗತಿಸಿದರು. ಡಾ| ಎಂ.ಆರ್. ಸುನೀತ ವಂದಿಸಿದರು. ಭಾವನ ಚೇತನ್ ನಿರೂಪಿಸಿದರು