Advertisement

ಕಠಿನ ನಿರ್ಧಾರಗಳಿಗೂ ಜನತೆ ಸಹಕರಿಸಿ

01:17 AM Mar 22, 2020 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ -19 ಪ್ರಕರಣ ದೃಢಪಟ್ಟಿಲ್ಲ. ಆದರೂ ಆವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಸೋಂಕು ಇರುವುದು ದೃಢಪಟ್ಟರೆ ಕಠಿನ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ. ಆ ಸಂದರ್ಭದಲ್ಲಿ ಕೂಡ ಜನತೆ ಜಿಲ್ಲಾಡಳಿತದ ಜತೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.

Advertisement

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದರು, ಶಾಸಕರು ಮತ್ತು ಅಧಿಕಾರಿಗಳ ಸಭೆಯ ಅನಂತರ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

16 ರಸ್ತೆಗಳು ಬಂದ್‌
ಇದುವರೆಗೆ ಜಿಲ್ಲೆಯಿಂದ 89 ಜನರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದ್ದು ಎಲ್ಲ ಪ್ರಕರಣಗಳ ವರದಿ ನೆಗೆಟಿವ್‌ ಬಂದಿವೆ. ಕೇರಳದಲ್ಲಿ ಪ್ರಕರಣಗಳು ದೃಢಪಟ್ಟಿರುವುದರಿಂದ ಕೇರಳ ದೊಂದಿಗಿನ ಸಂಪರ್ಕ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಆ ರಾಜ್ಯದೊಂದಿಗೆ ಸಂಪರ್ಕ ಸಾಧಿಸುವ ಜಿಲ್ಲೆಯ ವಿವಿಧೆಡೆಯ 17 ರಸ್ತೆಗಳ ಪೈಕಿ 16 ರಸ್ತೆಗಳನ್ನು ಬಂದ್‌ ಮಾಡಲಾಗಿದ್ದು ತಲಪಾಡಿ ರಸ್ತೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಸಂಪರ್ಕ ರಸ್ತೆ ಬಂದ್‌ಗೆ ಸಲಹೆ
ತಲಪಾಡಿಯಲ್ಲಿ ಸಂಪೂರ್ಣ ತಪಾಸಣೆಗೊಳಪಡಿಸಿದ ಅನಂತರವೇ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಇತರ ಕಡೆಗಳಿಂದ ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆಗಳನ್ನು ಕೂಡ ಬಂದ್‌ ಮಾಡಬೇಕೆಂಬ ಸಲಹೆಗಳಿವೆ. ಅಗತ್ಯವಾದರೆ ಈ ಬಗ್ಗೆ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕಟ್ಟುನಿಟ್ಟಾಗಿ ಪಾಲಿಸಿ
ಜಿಲ್ಲೆಯಾದ್ಯಂತ ಸಭೆ- ಸಮಾರಂಭಗಳನ್ನು ಮುಂದೂಡ ಬೇಕೆಂಬ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳು ಅಥವಾ ಸೋಂಕಿತ ವ್ಯಕ್ತಿಗಳು ಕಂಡುಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಈಗಾಗಲೇ ವಿಮಾನನಿಲ್ದಾಣದಿಂದ ಬರುವವರೆಲ್ಲರಿಗೂ ಅಳಿಸಲಾಗದ ಶಾಯಿ ಮುದ್ರೆ ಹಾಕಲಾಗುತ್ತಿದೆ. ಅಂಥವರು ಹೊರಗಡೆ ತಿರುಗಾಡಿದರೆ ಅವರನ್ನು ಬಂಧಿಸಲಾಗುವುದು. ಈ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ 104 ಅಥವಾ 1077ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

Advertisement

ಖಾಸಗಿ ಆಸ್ಪತ್ರೆಗಳ ವೆಂಟಿಲೇಟರ್‌
ಕೋವಿಡ್‌ -19 ಸೋಂಕಿತರು ಪತ್ತೆಯಾದರೆ ಅವರ ಚಿಕಿತ್ಸೆಗಾಗಿ ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ ವಾರ್ಡ್‌ ತೆರೆಯಲು ಸೂಚನೆ ನೀಡಲಾಗಿದೆ. ಇದೀಗ ಖಾಸಗಿ ಆಸ್ಪತ್ರೆಗಳ ವೆಂಟಿಲೇಟರ್‌ಗಳನ್ನು ಕೂಡ ಬಳಸಿಕೊಳ್ಳಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಕೆಲವು ದಿನಗಳವರೆಗೆ ಬಸ್‌ ಸೇರಿದಂತೆ ಸಾರಿಗೆ ಸಂಪರ್ಕ ವ್ಯವಸ್ಥೆ ಕಡಿಮೆಗೊಳಿಸಿ ಜನರ ಓಡಾಟವನ್ನು ನಿಯಂತ್ರಿಸಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಸೂಚಿಸಿದರು.

ವಿಧಾನಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಶಾಸಕರಾದ ವೇದವ್ಯಾಸ ಕಾಮತ್‌, ಭರತ್‌ ಶೆಟ್ಟಿ, ರಾಜೇಶ್‌ ನಾೖಕ್‌, ಯುಟಿ ಖಾದರ್‌, ಐವನ್‌ ಡಿ’ಸೋಜಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್‌ ದಿವಾಕರ ಪಾಂಡೇಶ್ವರ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಉಪಸ್ಥಿತರಿದ್ದರು.

ಪ್ರಯೋಗಾಲಯ ಮಂಜೂರು ನಿರೀಕ್ಷೆ
ಕೋವಿಡ್‌ -19 ವೈರಸ್‌ ಪರೀಕ್ಷೆಗಾಗಿ ಮಂಗಳೂರಿನಲ್ಲಿಯೇ ಪ್ರಯೋಗಾಲಯ ಸ್ಥಾಪಿಸಲು ಮಂಜೂರಾತಿ ನೀಡುವಂತೆ ಮುಖ್ಯ ಮಂತ್ರಿ ಯವರಿಗೆ ಮನವಿ ಮಾಡಿದ್ದೇನೆ. ಶೀಘ್ರ ಮಂಜೂರಾತಿ ದೊರೆಯುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದರು.

ಹಳೆ ಬಂದರು: ನೌಕೆಗಳಿಗೆ ನಿರ್ಬಂಧ
ಮಂಗಳೂರು ಹಳೆ ಬಂದರಿಗೆ ಆಗಮಿಸುವ ಎಲ್ಲ ರೀತಿಯ ಪ್ಯಾಸೆಂಜರ್‌ ನಾವೆಗಳ ಆಗಮನ ಮತ್ತು ನಿರ್ಗಮನವನ್ನು ಮಾ. 31ರ ಮಧ್ಯರಾತ್ರಿ 12 ಗಂಟೆಯವರೆಗೆ ನಿರ್ಬಂಧಿಸಿ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next