ಶಿವಮೊಗ್ಗ: ಭಾರೀ ಮಳೆ. ಚರಂಡಿಗಳು ತುಂಬಿ ರಸ್ತೆಗಳು ಜಲಾವೃತವಾಗಿತ್ತು. ಮನೆಗಳಿಗೂ ನೀರು ನುಗ್ಗಿತ್ತು. ಮನೆ ಒಳಗಿದ್ದವರಿಗೆ ಹೊರಗೆ ಬರಲು ಭಯ. ಒಳಗಿರಲು ಆತಂಕ. ಇಂತಹ ಸಂದರ್ಭ ಜನರ ನೆರವಿಗೆ ಬಂದಿದ್ದೇ ಶಿವಮೊಗ್ಗ ಅಗ್ನಿಶಾಮಕ ಸಿಬ್ಬಂದಿ.
ಮೇ 19ರಂದು ಶಿವಮೊಗ್ಗ ನಗರ ಅಕ್ಷರಶಃ ಮುಳುಗಿತ್ತು. ಸ್ಮಾರ್ಟ್ ಸಿಟಿ ಅವಾಂತರ, ಪಾಲಿಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ನಗರದ ಬಹು ಬಡಾವಣೆಗಳು ಜಲಾವೃತವಾಗಿದ್ದವು. ಇಂತಹ ಸಂದರ್ಭ ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗು ತೊರೆದು, ಹಗಲು, ರಾತ್ರಿ ಕೆಲಸ ಮಾಡಿದರು. 150ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು.
ಮೇ 19ರ ಬೆಳಗ್ಗೆ 10.30ಕ್ಕೆ ಆರ್.ಎಂ.ಎಲ್ ನಗರದ ಎರಡು ಕಡೆ ಮೊದಲ ರಕ್ಷಣಾ ಕಾರ್ಯಾಚರಣೆ ನಡೆಸಿಲಾಯಿತು. 25 ಜನರನ್ನು ರಕ್ಷಣೆ ಮಾಡಲಾಯಿತು. ಆ ಬಳಿಕ ಸುಮಾರು 15 ಕಡೆ ಅಗ್ನಿಶಾಮಕ ಸಿಬ್ಬಂದಿ ರೆಸ್ಕ್ಯು ಆಪರೇಷನ್ ನಡೆಸಿದರು.
ಗೋಪಾಲಗೌಡ ಬಡಾವಣೆ, ಶರಾವತಿ ನಗರ, ಮಿಳಘಟ್ಟ, ಗಾಂಧಿನಗರ, ಹೊಸಮನೆ, ವೆಂಕಟೇಶ ನಗರ, ಲಕ್ಷ್ಮೀ ಟಾಕೀಸ್ ಬಳಿ, ವಿದ್ಯಾನಗರದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿದರು. ಈ ವೇಳೆ ಹಸುಗೂಸಿನಿಂದ ವಯೋವೃದ್ಧರ ತನಕ 150ಕ್ಕೂ ಹೆಚ್ಚು ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದರು.
Related Articles
ಆರ್.ಎಂ.ಎಲ್. ನಗರದಲ್ಲಿ ಜಲಾವೃತವಾಗಿದ್ದ ಮನೆಯಿಂದ 90 ವರ್ಷದ ಅಬ್ದುಲ್ ಅಜೀಜ್ ಖಾನ್ ಎಂಬುವವರ ರಕ್ಷಣೆ ಮಾಡಲಾಯಿತು. ಅವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಯಿತು. ಗೋಪಾಲ ಗೌಡ ಬಡಾವಣೆಯಲ್ಲಿ ವೃದ್ಧೆಯೊಬ್ಬರನ್ನು ರಕ್ಷಿಸಲಾಯಿತು.
ಅದೇ ದಿನ ರಾತ್ರಿ ವಿದ್ಯಾನಗರದಲ್ಲಿ ನವಜಾತ ಶಿಶು ಮತ್ತು ಬಾಣಂತಿಯ ರಕ್ಷಣಾ ಕಾರ್ಯ ನಡೆಸಲಾಯಿತು. ಇವರನ್ನು ಸುರಕ್ಷಿತವಾಗಿ ಬಡಾವಣೆಯಿಂದ ಹೊರಗೆ ಕರೆತರಲಾಯಿತು. ನಿರಂತರ ಮಳೆ ನಡುವೆ ಅಗ್ನಿಶಾಮಕ ಸಿಬ್ಬಂದಿಗೆ ಸವಾಲೆನಿಸಿದ್ದು ಸ್ಮಾರ್ಟ್ ಸಿಟಿ ಗುಂಡಿಗಳು. ಯಾವ ಬಡಾವಣೆಯಲ್ಲಿ ಎಲ್ಲಿ ಗುಂಡಿ ತೋಡಲಾಗಿದೆ ಅನ್ನುವುದರ ಖಚಿತತೆ ಇರಲಿಲ್ಲ. ಹಾಗಾಗಿ ಪ್ರತಿ ಹೆಜ್ಜೆ ಇಡುವಾಗಲೂ ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಪ್ರತಿದಿನ ಓಡಾಡುತ್ತಿದ್ದ ರಸ್ತೆಯಲ್ಲಿ ಹೆಜ್ಜೆ ಇಡಲು ಜನ ಹೆದರುತ್ತಿದ್ದ ಸಂದರ್ಭದಲ್ಲೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಕೆಲವು ಕಡೆ ಜನರನ್ನು ಎತ್ತಿಕೊಂಡು ಬಂದು ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು. ಇನ್ನೂ ಕೆಲವು ಕಡೆ ಹಗ್ಗ ಬಳಸಿ ಜನರ ರಕ್ಷಣೆ ಮಾಡಿದರು.
ಗೋಪಾಲಗೌಡ ಬಡಾಣೆಯಲ್ಲಿ ಜಲಾವೃತವಾಗಿದ್ದ ರಸ್ತೆಯಲ್ಲಿ ತೆರಳುತ್ತಿದ್ದ ಕಾರು ಆಫ್ ಆಗಿತ್ತು. ರಸ್ತೆ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದರಿಂದ ಕಾರಿನಲ್ಲಿದ್ದವರು ಕೆಳಗಿಳಿಯಲು ಹೆದರುತ್ತಿದ್ದರು. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ರೆಸ್ಕ್ಯು ಆಪರೇಷನ್ ನಡೆಸಿದರು. ಹಗ್ಗದ ಸಹಾಯದಿಂದ ಕಾರಿನಲ್ಲಿದ್ದವರನ್ನು ಕಾಪಾಡಿದರು.
ಇನ್ನು, ಶಿವಮೊಗ್ಗದ ಸೋಮಿನಕೊಪ್ಪ ಕೆರೆಯ ನಡುಗಡ್ಡೆಯಲ್ಲಿ ಕುದುರೆ ಗುಂಪೊಂದು ಸಿಕ್ಕಿಬಿದ್ದಿದ್ದವು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮಾಡಿ 13 ಕುದುರೆಗಳ ರಕ್ಷಣೆ ಮಾಡಿದರು. ಎರಡು ದಿನಗಳಿಂದ ಆಹಾರವಿಲ್ಲದೆ ಕುದುರೆಗಳು ನಡುಗಡ್ಡೆಯಲ್ಲಿ ಸಿಕ್ಕಿಬಿದ್ದಿದ್ದವು. ಅವುಗಳ ರಕ್ಷಣೆ ಮಾಡಿ ಕರ್ತವ್ಯ ಪಜ್ಞೆ ಜೊತೆಗೆ ಮಾನವೀಯತೆ ಮರೆದಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಚಾಕಚಕ್ಯತೆ ಮತ್ತು ಸಮಯ ಪ್ರಜ್ಞೆಯಿಂದ ಅನಾಹುತಗಳು ತಪ್ಪಿವೆ. ಸಾವು- ನೋವಿನ ಆತಂಕವೂ ದೂರವಾಗಿದೆ. ಶಿವಮೊಗ್ಗ ಜಲಾವೃತವಾಗಿದ್ದಾಗ ಜೀವದ ಹಂಗು ತೊರೆದು 150ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.