ಹುನಗುಂದ: ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸುವುದರ ಜತೆಗೆ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹುನಗುಂದದ ಜೆಎಂಎಫ್‌ಸಿ ನ್ಯಾಯಾಲಯದ ಅಪರ ದಿವಾಣಿ ನ್ಯಾಯಾಧೀಶರಾದ ಚೇತನಾ ಆರೀಕಟ್ಟಿ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಉಚಿತ ಪ್ರಸಾದ ನಿಲಯದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಾರ್ಯಾಲಯ ಹಾಗೂ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಭಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪಾಠದ ಜತೆಗೆ ಪಠ್ಯೇತರ ಚಟುವಟಿಕೆ ಮತ್ತು ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುವುದು ಅವಶ್ಯ. ಉತ್ತಮ ಶಿಕ್ಷಣ, ಆರೋಗ್ಯ, ಆಹಾರ ನೀಡುವುದು ಮೊದಲ ಕರ್ತವ್ಯ. ಉತ್ತಮ ಸಂಸ್ಕಾರ, ದೇಶಭಕ್ತಿ, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾನ್ ನಾಯಕರ ಚರಿತ್ರೆ ಮನದಟ್ಟು ಮಾಡಿಕೊಡಬೇಕು ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಓದಿನ ಜತೆಗೆ ಅವರಲ್ಲಿನ ಇತರೆ ಕೌಶಲ್ಯ ಗುರುತಿಸಿ ಬೆಳೆಸುವುದೇ ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.
ವಿ.ಮ. ಸಂಘದ ಗೌರವ ಕಾರ್ಯದರ್ಶಿ ಡಾ| ಮಹಾಂತೇಶ ಕಡಪಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳೇ ದೇಶದ ಸಂಪತ್ತು. ಎಲ್ಲ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸುವ ಜವಾಬ್ದಾರಿಯನ್ನು ತಂದೆ, ತಾಯಿ. ಶಿಕ್ಷಕ ಮತ್ತು ಸಮಾಜ ತೆಗೆದುಕೊಳ್ಳಬೇಕು. ಮಕ್ಕಳಿಗೆ ಪ್ರತಿಭೆ ಪ್ರದರ್ಶಿಸಲು ಸಮಾನ ಅವಕಾಶ ನೀಡಬೇಕು ಎಂದರು.
ನ್ಯಾಯವಾದಿ ಪವನ ಎಸ್. ಕರವಾಮಾತನಾಡಿ, ಶಿಕ್ಷಣ ಸಂಸ್ಥೆಗಳು ಹಾಕಿಕೊಡುವ ಬುನಾದಿ ಭದ್ರವಾಗಿದ್ದರೆ ಮಾತ್ರ ವಿದ್ಯಾರ್ಥಿ ಸಾಧನೆಯ ಶಿಖರ ಏರಲು ಸಾಧ್ಯ. ಈ ನಿಟ್ಟಿನಲ್ಲಿ ಕೇವಲ ಪಠ್ಯಗಳಿಗೆ ಸೀಮಿತವಾಗಿರುವ ಹಕ್ಕು ಕಾನೂನುಗಳನ್ನು ದೈನಂದಿನ ಜೀವನಕ್ಕೆ ಅಳವಡಿಸಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳು ರೂಪಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಮಾಧವರಾವ ದೇಶಪಾಂಡೆ, ಉಚಿತ ಪ್ರಸಾದ ನಿಲಯದ ಕಾರ್ಯಾದ್ಯಕ್ಷ ಸಂಗಣ್ಣ ಚಿನಿವಾಲ, ನಿರ್ದೇಶಕರಾದ ವೀರಣ್ಣ ಬಳೂಟಗಿ, ಅರುಣ ದುದ್ಗಿ, ವಿ.ಮ ಸಂಘದ ಆಡಳಿತಾ ಕಾರಿ ಶಶಿಕಲಾ ಎಸ್. ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿಗಳಾದ ವಿನೋಧ ಭೋವಿ, ಎ.ಎಚ್. ಗೌಡರ, ಬಿ.ವೈ. ಮುಂಡೇವಾಡಿ, ಮುಖ್ಯ ಗುರುಮಾತೆ ಎಸ್ .ಪಿ. ಮಲ್ಲಪ್ಪನ್ನವರ, ನ್ಯಾಯಾಲಯ ಸಿಬ್ಬಂದಿ ಚನ್ನಪ್ಪ ಮುದಗಲ್ ಉಪಸ್ಥಿತರಿದ್ದರು.