ಚನ್ನರಾಯಪಟ್ಟಣ: ಪಟ್ಟಣದ ನ್ಯಾಯಾಧೀಶರುಗಳು ಇಂದು ಖುದ್ದಾಗಿ ರಸ್ತೆಗಿಳಿದು ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರ ಜೊತೆಯಲ್ಲಿ ಸೇರಿ ದಂಡ ವಿಧಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು!
ಪಟ್ಟಣ ನ್ಯಾಯಾಲಯದ ಎದುರು ಬಿ.ಎಂ.ರಸ್ತೆಯಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಹೆಲ್ಮೆಟ್ ಧರಿಸಿ, ಜೀವ ಉಳಿಸಿ ಹಾಗೂ ಹೆಲ್ಮೆಟ್ ಕಡ್ಡಾಯದ ಬಗ್ಗೆ ಜಾಥಾ ಕಾರ್ಯಕ್ರಮದಲ್ಲಿ ಮೂರು ಜನ ನ್ಯಾಯಾಧೀಶರುಗಳು ರಸ್ತೆಯಲ್ಲಿ ನಿಂತು ಸ್ವತಃ ಬೈಕ್ ಸವಾರರನ್ನು ತಡೆದು ದಂಡ ಹಾಕಿಸಿದರು. ಇಂದು ನಡೆದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಇದೊಂದು ಅಪರೂಪದ ವಿಶಿಷ್ಠವಾದ ಕಾರ್ಯಕ್ರಮವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಗಣಪತಿ ಗುರುಸಿದ್ಧ ಬಾದಾಮಿ ತಾಲೂಕಿನಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತಿದೆ. ಅದರಲ್ಲೂ ಬೈಕ್ ಸವಾರರು ಹೆಚ್ಚಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಒಳ್ಳೆಯದಲ್ಲ. ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಬಗ್ಗೆ ಎಚ್ಚೆತ್ತುಕೊಂಡು ಬೈಕ್ ಸವಾರರು ಮುಂದಿನ ದಿನಗಳಲ್ಲಿ ಖಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಇಲ್ಲದಿದ್ದರೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಸುಮಾರು 250ಕ್ಕೂ ಹೆಚ್ಚು ಬೈಕ್‌ಗಳನ್ನು ಹಿಡಿದು ದಂಡವಿಧಿಸಲಾಯಿತು. ನಂತರ ಬಿ.ಎಂ. ರಸ್ತೆ, ಹಳೇ ಬಸ್‌ನಿಲ್ದಾಣ, ಕೆ. ಆರ್. ವೃತ್ತದ ಮಾರ್ಗವಾಗಿ ಕೋರ್ಟ್ ಮುಂಭಾಗದವರೆಗೂ ವಿದ್ಯಾರ್ಥಿಗಳೊಂದಿಗೆ ಜಾಥಾ ನಡೆಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ಜಡ್ಜ್ ನ್ಯಾಯಾಧೀಶ ಎಸ್. ಚಿನ್ನಸ್ವಾಮಿ, 2ನೇ ಅಧಿಕ ಸಿವಿಲ್ ನ್ಯಾಯಾಧೀಶರಾದ ಎಂ.ವಿ.ಲಕ್ಷ್ಮೀ 3ನೇ ಅಧಿಕ ಸಿವಿಲ್ ನ್ಯಾಯಾಧೀಶ ಜಿನ್ನಪ್ಪ ಚೌಗಲ್, ನಗರ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ವಿನೋದ್‌ರಾಜ್, ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಂದರ್‌ರಾಜ್, ಕಾರ್ಯದರ್ಶಿ ಜಲೇಂದ್ರಕುಮಾರ್ ಮತ್ತು ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿಗಳು, ಟ್ರಾಫಿಕ್ ಪೊಲೀಸರು ಸಾಥ್ ನೀಡಿದರು.