Advertisement

ಡಿ. 1ರಿಂದ ಹೆಜಮಾಡಿ ಟೋಲ್‌ ದುಬಾರಿ

11:36 PM Nov 24, 2022 | Team Udayavani |

ಮಂಗಳೂರು: ಕೊನೆಗೂ ಡಿ. 1ರಿಂದ ಅನ್ವಯವಾಗುವಂತೆ ಸುರತ್ಕಲ್‌ ಎನ್‌ಐಟಿಕೆ ಬಳಿಯ ಸುಂಕ ಸಂಗ್ರಹ ಕೇಂದ್ರವು ಹೆಜಮಾಡಿ ಟೋಲ್‌ಗೇಟ್‌ ನೊಂದಿಗೆ ವಿಲೀನಗೊಳ್ಳಲಿದೆ. ಇದರ ಪರಿಣಾಮವಾಗಿ ನಿರೀಕ್ಷೆ ಯಂತೆಯೇ ಹೆಜಮಾಡಿಯಲ್ಲಿ ಸುಂಕ ದುಬಾರಿಯಾಗಲಿದೆ. ಈ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಗುರುವಾರ ಉಡುಪಿ ಜಿಲ್ಲಾಡಳಿತಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದೆ.

Advertisement

ಇದುವರೆಗೆ ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಕೆಎ 19 ನೋಂದಣಿಯ ಕಾರುಗಳಿಗೆ ಇದ್ದ ರಿಯಾಯಿತಿ ರದ್ದಾಗಲಿದೆ. ಇನ್ನು ಮುಂದೆ ಹೆದ್ದಾರಿಯಲ್ಲಿ ಉಡುಪಿ-ಮಂಗಳೂರು ಮಧ್ಯೆ ಸಂಚರಿಸುವವರು ಹೆಜಮಾಡಿಯ 40 ರೂ. ಹಾಗೂ ಸುರತ್ಕಲ್‌ನ 60 ರೂ. ಸೇರಿದಂತೆ 100 ರೂ. ಪಾವತಿ ಮಾಡಲೇಬೇಕು. ಆದರೆ ಹೆಜಮಾಡಿ ಟೋಲ್‌ಗೇಟ್‌ ಒಳಗೆ ಮಂಗಳೂರು ಮಧ್ಯೆ ಸಂಚರಿಸುವ ಬಸ್‌, ಟೂರಿಸ್ಟ್‌ ವಾಹನ, ಲಾರಿ ಮತ್ತಿತರ ವಾಹನಗಳಿಗೆ ಟೋಲ್‌ ಪಾವತಿಸಬೇಕಾದ ಪ್ರಮೇಯವಿರುವುದಿಲ್ಲ.

ಎನ್‌ಎಂಪಿ ರೋಡ್‌ ಕನೆಕ್ಟಿವಿಟಿ ರಸ್ತೆಯ ಸುರತ್ಕಲ್‌ನ ಟೋಲ್‌ಗೇಟ್‌ ಜತೆಗೆ ನವಯುಗದವರ ಹೆಜಮಾಡಿ ಟೋಲ್‌ಗೇಟ್‌ ವಿಲೀನ ಗೊಳಿಸಲಾಗಿದೆ. ಇದರಂತೆಯೇ ಸುರತ್ಕಲ್‌ನ ಸುಂಕದರಗಳನ್ನೂ ಹೆಜಮಾಡಿ ಜತೆ ಸೇರ್ಪಡೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮುಂದೆ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ತೊಡಕು ಉಂಟಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಸುಂಕದ ಬಳಿಕ ಯಾವುದೇ ಸಮಸ್ಯೆಯಾಗಿ ಟೋಲ್‌ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ಎನ್‌ಎಚ್‌ಎಐ ಜತೆಗಿನ ರಾಜ್ಯ ಸಹಕಾರ ಒಪ್ಪಂದದಂತೆ ನಷ್ಟವನ್ನು ರಾಜ್ಯವೇ ಭರಿಸಬೇಕು ಎಂದು ತಿಳಿಸಲಾಗಿದೆ.

ಈ ಕುರಿತಂತೆ ಉಡುಪಿ ಜಿಲ್ಲಾಡಳಿತದ ಕಡೆಯಿಂದ ಯಾವುದೇ ರೀತಿಯ ಸಹಾಯ, ನೆರವನ್ನು ಪೊಲೀಸ್‌ ಭದ್ರತೆಯನ್ನು ಕಲ್ಪಿಸಬೇಕು, ಇದು ಡಿ. 1ರಿಂದಲೇ ಚಾಲ್ತಿಗೆ ಬರಲಿದೆ ಎಂದೂ ಉಡುಪಿ ಜಿಲ್ಲಾಡಳಿತಕ್ಕೆ ಎನ್‌ಎಚ್‌ಎಐ ಡಿಜಿಎಂ ಮತ್ತು ಯೋಜನ ನಿರ್ದೇಶಕ ಎಚ್‌.ಎಸ್‌.ಲಿಂಗೇಗೌಡ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

Advertisement

ಹೋರಾಟ ಸಮಿತಿ ಆಕ್ರೋಶ:

ಅತ್ಯಂತ ಜನವಿರೋಧಿ ಸರಕಾರ ಮಾತ್ರ ಹೀಗೆ ಮಾಡಲು ಸಾಧ್ಯ. ಸುರತ್ಕಲ್‌ ಟೋಲ್‌ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿ ಯಲ್ಲಿ ಸಂಗ್ರಹಿಸಲು (ಸುಲಿಗೆ ನಡೆಸಲು) ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದು ತುಳುನಾಡಿನ ಜನತೆಗೆ ಎಸಗಿದ ಮಹಾ ಮೋಸ. ಏಳು ವರ್ಷಗಳ ಕಾಲ ಸುರತ್ಕಲ್‌ ಟೋಲ್‌ ಗೇಟ್‌ನಲ್ಲಿ ಸಂಗ್ರಹಿಸಿದ ನೂರಾರು ಕೋಟಿ ರೂಪಾಯಿಗೆ ಬೆಲೆಯೇ ಇಲ್ಲವಾಗಿದೆ ಎಂದು ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

ಜನರ ಭಾವನೆ, ಕಷ್ಟ ಸುಖಗಳ ಅರಿವಿಲ್ಲದ ಸಂಸದ, ಶಾಸಕರು ಮಾತ್ರ ಹೀಗೆ ನಡೆದುಕೊಳ್ಳಲು ಸಾಧ್ಯ. ಮತ ಹಾಕುವ ಇಲ್ಲಿನ ಜನರಿಗಿಂತ ನವಯುಗ್‌ ಟೋಲ್‌ ಕಂಪೆನಿಯ ಹಿತ ಮಾತ್ರ ಅವರಿಗೆ ಮುಖ್ಯವಾಯಿತು. ಜನತೆ ಇದನ್ನು ಒಪ್ಪಬಾರದು ಎಂದು ಸಂಚಾಲಕ ಮುನೀರ್‌ ಕಾಟಿಪಳ್ಳ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next