ಪಡುಬಿದ್ರಿ: ಹೆಜಮಾಡಿಯ ಹಳೇ ಎಂಬಿಸಿ ರಸ್ತೆ ಗುಡ್ಡೆ ಅಂಗಡಿ ಪ್ರದೇಶದಲ್ಲಿ ನವಯುಗ ಟೋಲ್ ಗೇಟ್ ಬಳಿಕ ಹೆದ್ದಾರಿ ಸೇರುವಲ್ಲಿ ಬೃಹದಾಕಾರದ ಹೊಂಡವೊಂದು ಬಾಯ್ದೆರೆದಿದೆ. ಇಲ್ಲಿ ಅನೇಕ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿ ಗಾಯಗೊಳ್ಳಲು ಕಾರಣವಾಗಿದೆ.
ವರ್ಷದ ಹಿಂದೆ ಟೋಲ್ ಸೋರಿಕೆ ತಡೆಗಟ್ಟಲು, ನವಯುಗ ಕಂಪನಿ ಇದೇ ಹಳೆ ಎಂಬಿಸಿ ರಸ್ತೆಯಲ್ಲಿ ಇನ್ನೊಂದು ಟೋಲ್ ನಿರ್ಮಾಣಕ್ಕೆ ಮುಂದಾಗಿತ್ತು. ಜಿಲ್ಲಾಡಳಿತದ ಗಮನಕ್ಕೆ ತಾರದೇ ಈ ಕೆಲಸವನ್ನು ಅದು ಮಾಡಿದ್ದು, ಪರಿಣಾಮ ಸಾರ್ವಜನಿಕರು ತೀವ್ರ ಪ್ರತಿರೋಧ ಒಡ್ಡಿದ್ದರು. ಬಳಿಕ ಅದನ್ನು ಕಂಪನಿ ಕೈಬಿಟ್ಟಿತ್ತು.
ಟೋಲ್ ನಿರ್ಮಾಣದ ಸಂದರ್ಭ ಜೆಸಿಬಿಯಲ್ಲಿ ಮಾಡಿದ್ದ ಕೆಲವೊಂದು ಹೊಂಡಗಳನ್ನು ಕಂಪನಿ ಮುಚ್ಚಿದ್ದರೂ, ಈಗ ಸಮಸೆÂಯಾಗಿರುವ ಹೊಂಡವನ್ನು ಹಾಗೆಯೇ ಬಿಡಲಾಗಿತ್ತು. ಈಗ ಹೆದ್ದಾರಿಯಿಂದ ಒಳನುಗ್ಗಿ ಬರುವ ಘನವಾಹನಗಳ ಭರಾಟೆಯಲ್ಲಿ ದ್ವಿಚಕ್ರವಾಹನ ಸವಾರರು ಅರಿವಿಲ್ಲದೇ ಹೊಂಡಕ್ಕೆ ಬೀಳುವಂತಾಗಿದೆ. ಈಗೀಗ ಹೆದ್ದಾರಿಯಿಂದ ಒಳ ನುಗ್ಗಿ ಬರುವ ಘನ ವಾಹನಗಳ ಭರಾಟೆಯಲ್ಲಿ ದ್ವಿಚಕ್ರ ಸವಾರರು ಅರಿವಿಲ್ಲದೇ ಹೊಂಡಕ್ಕೆ ಬೀಳುವಂತಾಗಿದೆ. ರಸ್ತೆ ಹೊಂಡದ ಬಗ್ಗೆ ಹೆಜಮಾಡಿ ಗ್ರಾ,ಪಂ ಪಿಡಿಒ ಮೂಲಕ ಲೋಕೋಪಯೋಗಿ ಇಲಾಖೆಗೆ ಗಮನಸೆಳೆಯಲಾಗಿದೆ.
ಸಾರ್ವಜನಿಕರ ಜೀವಹಾನಿಯಾಗುವ ಮೊದಲು ಈ ಕುರಿತಾಗಿ ಲೋಕೋಪಯೋಗಿ ಇಲಾಖೆ ಶೀಘ್ರ ಗುಂಡಿ ಮುಚ್ಚಬೇಕು. ಅಥವಾ ನವಯುಗ ಕಂಪನಿಯಿಂದಲೇ ಇದನ್ನು ಮುಚ್ಚುವ ಕೆಲಸ ಮಾಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.