ಮಂಗಳೂರು: ಜನರಿಗೆ ರಕ್ಷಣೆ ಕೊಡ ಬೇಕಾದ ಪೊಲೀಸ್ ಹೆಡ್‌ಕಾನ್ಸ್‌ಟೆಬಲ್ ಒಬ್ಬರು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುವ ವೇಳೆ ತಪ್ಪಿಸಿಕೊಳ್ಳಲೆತ್ನಿಸಿ ಓಡುವಾಗ ನ್ಯಾಯಾಲಯ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಮಂಗಳೂರಿನಲ್ಲಿ ಸಂಭವಿಸಿದೆ.
ಮಂಜೇಶ್ವರ ಮೂಲದವನಾಗಿದ್ದು, ಪ್ರಸ್ತುತ ಬಜಪೆ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೆಬಲ್ ಆಗಿದ್ದ ಪ್ರವೀಣ್ (40) ಸಾವನ್ನಪ್ಪಿದ ಆರೋಪಿ. ಬಜೆಪೆ ಸುಂಕದಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪ್ರವೀಣ್ ಪಕ್ಕದ ಮನೆಯ ಮಹಿಳೆ ಮತ್ತು ಆಕೆಯ 11 ವರ್ಷದ ಪುತ್ರಿ ಬಾತ್‌ರೂಂನಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದನೆಂದು ಆರೋಪಿಸಲಾಗಿದೆ.
ಕೆಲವು ದಿನಗಳ ಹಿಂದೆ ಮಹಿಳೆಯ ಪುತ್ರಿ ಸ್ನಾನ ಮಾಡುತ್ತಿದ್ದಾಗ ಅದರ ವೀಡಿಯೋ ಚಿತ್ರೀಕರಣ ಮಾಡಿದ್ದನು. ಅದನ್ನು ಗಮನಿಸಿದ ಪುತ್ರಿ ವಿಷಯವನ್ನು ತಾಯಿಗೆ ತಿಳಿಸಿದ್ದಳು. ಆಗ ಮನೆಯವರು ಹೆಡ್‌ಕಾನ್‌ಸ್ಟೆಬಲ್‌ಗೆ ಎಚ್ಚರಿಕೆ ನೀಡಿದ್ದರು. ಆಗ ಪ್ರವೀಣ್ ಕ್ಷಮೆ ಯಾಚಿಸಿದ್ದನು. ಬಳಿಕ ಶುಕ್ರವಾರ ಸಂಜೆ ಮತ್ತೆ ಹಳೇ ಚಾಳಿ ಮುಂದುವರಿಸಿ, ಆ ಮನೆಯ ಮಹಿಳೆ ಸ್ನಾನ ಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ವೀಡಿಯೋ ರೆಕಾರ್ಡ್ ಮಾಡಿದ್ದನು. ಈ ಬಗ್ಗೆ ಶನಿವಾರ ಬೆಳಗ್ಗೆ ಮಹಿಳೆ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಆತನನ್ನು ಬಜಪೆ ಪೊಲೀಸರು ಬಂಧಿಸಿ, ಪೋಕ್ಸೋ ಕಾಯ್ದೆಯನ್ನು ದಾಖಲಿಸಿದ್ದರು. ಸಂಜೆ 5.30ರ ವೇಳೆಗೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲು, ನ್ಯಾಯಾಲಯದ 3ನೇ ಮಹಡಿಗೆ ಕರೆದುಕೊಂಡು ಬರುತ್ತಿದ್ದರು.
3ನೇ ಮಹಡಿಯಲ್ಲಿ ಲಿಫ್ಟ್ ನಿಲ್ಲಲು ವ್ಯವಸ್ಥೆಯಿಲ್ಲದ ಕಾರಣ 4ನೇ ಮಹಡಿಗೆ ಕರೆದುಕೊಂಡು ಹೋಗಿ, ಬಳಿಕ 4ನೇ ಮಹಡಿಯಿಂದ ಮೆಟ್ಟಿಲು ಮೂಲಕ ಇಳಿದುಕೊಂಡು ಬರುತ್ತಿದ್ದಾಗ ಏಕಾಏಕಿ ಆರೋಪಿ ಪ್ರವೀಣ್ ತನ್ನನ್ನು ಕರೆದೊಯ್ಯುತ್ತಿದ್ದ ಓರ್ವ ಎಎಸ್‌ಐ ಮತ್ತು ಇಬ್ಬರು ಸಿಬಂದಿಯನ್ನು° ದೂಡಿ ಹಾಕಿ ಪರಾರಿಯಾಗಲು ಯತ್ನಿಸಿದ್ದ. ಆಗ ಸುಮಾರು 25 ಅಡಿ ಕೆಳಗಿರುವ 2ನೇ ಮಹಡಿಗೆ ಬಿದ್ದಿದ್ದ, ಸೊಂಟ, ಬೆನ್ನುಮೂಳೆಗೆ ಗಂಭೀರ ಗಾಯಗೊಂಡ
ಆತನನ್ನು ಕೂಡಲೇ ವೆನಾÉಕ್ ಆಸ್ಪತ್ರೆಗೆ ದಾಖಲಿಸಲಾಯಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 7.30ಕ್ಕೆ ಸಾವನ್ನಪಿದ.
15 ವರ್ಷಗಳಿಂದ ಕರ್ತವ್ಯ: ಪ್ರವೀಣ್ ಟ್ರಾಫಿಕ್ ಪೂರ್ವ ಮತ್ತು ಪಶ್ಚಿಮ ಠಾಣೆ ಸಹಿತ ಹಲವು ಕಡೆ ಒಟ್ಟು 15ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಕಳೆದ 3 ತಿಂಗಳಿಂದ ಬಜಪೆ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೆಬಲ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದನು.
ಆತ ಕುಡಿತದ ಚಟ ಹೊಂದಿದ್ದರಿಂದ ಪತ್ನಿ ಮತ್ತು ಮಕ್ಕಳು ಮೂರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.