Advertisement

ನನಸಾಯ್ತು ಹೆಬ್ರಿ ತಾಲೂಕು ರಚನೆಯ ಕನಸು

07:45 AM Sep 08, 2017 | |

ಹೆಬ್ರಿ: ತಾ| ಆಗಲು ಎಲ್ಲ ಅರ್ಹತೆಯನ್ನು ಹೊಂದಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ತಾಲೂಕು ಆಗ ಬೇಕೆಂದು  41 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು ಕೊನೆಗೂ ಹೆಬ್ರಿಯನ್ನು ತಾಲೂಕು ಆಗಿ ಆದೇಶ ಹೊರಡಿಸಿದ್ದು ಹೆಬ್ರಿ ಪರಿಸರದ ಜನತೆಯಲ್ಲಿ ಸಂಭ್ರಮ ಮನೆ ಮಾಡಿದೆ.
 
ಉಡುಪಿ ಜಿಲ್ಲೆಯಲ್ಲಿ 4ಹೊಸ ತಾಲೂಕುಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 49 ಹೊಸ ತಾಲೂಕುಗಳು 2018 ಜ.1ರಿಂದ ಅಸ್ತಿತ್ವಕ್ಕೆ ಬರಲಿದೆ ಎಂದು ರಾಜ್ಯ ಸರಕಾರ ಗೋಷಿಸಿದೆ.ರಾಜ್ಯದ ಕಂದಾಯ ಇಲಾಖೆಯ ಆಧೀನ ಕಾರ್ಯದರ್ಶಿಗಳು ಈ ಸಂಬಂಧ ಸರಕಾರಿ ಆದೇಶವನ್ನು ಹೊರಡಿಸಿದ್ದು ರಾಜ್ಯದಲ್ಲಿ 49 ಹೊಸ ತಾಲೂಕುಗಳ ರಚನೆಗೆ ತಾತ್ವಿಕವಾಗಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಈಗಿರುವ ಮೂರು ತಾಲೂಕುಗಳೊಂದಿಗೆ ಹೊಸದಾಗಿ ಬ್ರಹ್ಮಾವರ, ಕಾಪು, ಬೈಂದೂರು ಹಾಗೂ ಹೆಬ್ರಿ  ಒಟ್ಟು 4 ತಾಲೂಕುಗಳು ಜ.1ರಿಂದ ಅಸ್ತಿತ್ವಕ್ಕೆ ಬರಲಿವೆ.

Advertisement

ಕಳೆದ ಬಜೆಟ್‌ನಲ್ಲಿ ಕೈ ತಪ್ಪಿದ ಹೆಬ್ರಿ ತಾಲೂಕು
ಕಳೆದ ಬಜೆಟ್‌ನಲ್ಲಿ ಬ್ರಹ್ಮಾವರ, ಕಾಪು, ಬೈಂದೂರು 3 ಪ್ರದೇಶಗಳನ್ನು ಮಾತ್ರ ತಾಲೂಕನ್ನಾಗಿ ಘೋಷಣೆ ಮಾಡಲಾಗಿತ್ತು. ತಾಲೂಕು ಆಗುವ ಎಲ್ಲಾ ಅರ್ಹತೆಯಿರುವ ಹೆಬ್ರಿಯನ್ನು ಕೈಬಿಟ್ಟಿರುವ ಬಗ್ಗೆ ಮತ್ತೆ ಹೋರಾಟದ ಕಾವು ಹೆಚ್ಚಾಗಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಭಾಸ್ಕರ್‌ ಜೋಯಿಸ್‌, ಸಂಚಾಲಕ ಹೋರಾಟದ ರುವಾರಿ ನೀರೆ ಕೃಷ್ಟ ಶೆಟ್ಟಿ ಹಾಗೂ ಹೆಬ್ರಿ ಸತ್ತಮುತ್ತಲಿನ ಎಲ್ಲಾ ಸಂಘ ಸಂಸ್ಥೆಗಳ ನಿರಂತರ ಪ್ರಯತ್ನದಿಂದ ಕೈತಪ್ಪಿದ ಹೆಬ್ರಿ ತಾಲೂಕು ಆಗಿದೆ ಆದೇಶ ಹೊರಬಂದಿರುವುದು ಹೋರಾಟಗಾರರಲ್ಲಿ ಸಂಭ್ರಮ ತಂದಿದೆ. ತಾಲೂಕು ಪುನರ್‌ ರಚನಾ ರಾಜ್ಯ ಸಮಿತಿಯ 2012ರಲ್ಲಿ ಅಧ್ಯಕ್ಷರಾಗಿದ್ದ ಎಂ.ಬಿ. ಪ್ರಕಾಶ್‌ ಉಡುಪಿ ಜಿಲ್ಲೆಯಲ್ಲಿ  ಹೆಬ್ರಿ ತಾಲೂಕು ರಚನೆಗೆ  ಸಾಕಷ್ಟು ಧನಾತ್ಮಕ ಅಂಶಗಳಿವೆ ಎಂಬ ಆದಾರದಲ್ಲಿ ಹೆಬ್ರಿ ತಾಲೂಕು ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ  ಹೆಬ್ರಿ ಜನತೆಗೆ ಕನಸು ನನಸಾಗಿದೆ. ಹೆಬ್ರಿ ಒಂದು ಮಳೆನಾಡು ಪ್ರದೇಶವಾಗಿದ್ದು, ಬುಡಕಟ್ಟು ಜನಾಂಗದ ವಾಸ್ತವ್ಯ ಪ್ರದೇಶವಾಗಿದೆ. ಕುಂದಾಪುರಕ್ಕೆ 48 ಕಿ.ಮೀ., ಬ್ರಹ್ಮಾವರಕ್ಕೆ 30 ಕಿ.ಮೀ., ತೀರ್ಥಹಳ್ಳಿಗೆ 50ಕಿ.ಮೀ., ಕಾರ್ಕಳಕ್ಕೆ 33 ಕಿ.ಮೀ, ಉಡುಪಿಗೆ 35 ಕಿ.ಮೀ ದೂರವಿರುವ ಹೆಬ್ರಿ ಯಾವತ್ತೇ ತಾಲೂಕು ಆಗಬೇಕಿತ್ತು. ಕೊನೆಗೂ ಈ ಭಾಗದ ಜನಪ್ರತಿನಿಧಿಗಳ , ಜನರ ,ಹೋರಾಟಗಾರರ ನಿರಂತರ ಪ್ರಯತ್ನದಿಂದ ತಾಲೂಕು ಘೋಷಣೆಯಾಗಿರುವುದು ಸಂತಸ ತಂದಿದೆ.

41ವರ್ಷಗಳ ಹೋರಾಟಕ್ಕೆ ಸಂದ ಜಯ
ಹೆಬ್ರಿ ತಾಲೂಕು ರಚನೆಯ ಹೋರಾಟ ಇಂದು ನಿನ್ನೆಯದಲ್ಲ. ನಿರಂತರವಾಗಿ 41ವರ್ಷಗಳ  ಅಧಿಕ ಸಮಯದಿಂದ ಇಲ್ಲಿನ ಜನತೆ ಹೋರಾಟ ನಡೆಸುತ್ತಿದ್ದಾರೆ. ಹೋರಾಟ ಸಮಿತಿಯ ನೇತೃತ್ವದಲ್ಲಿ ಹೆಬ್ರಿ ತಾಲೂಕು ರಚನೆ ಮತ್ತು ಅಭಿವೃದ್ಧಿ ಸಮಿತಿ ಈಗಾಗಲೇ ರಾಜ್ಯದ ಹಲವು ಮುಖ್ಯಮಂತ್ರಿಗಳಿಗೆ ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಮನವಿ ನೀಡಿದೆ. ಮತ್ತು ನಿರಂತರ ಪ್ರಯತ್ನ ನಡೆಸುತ್ತಿದೆ. ಜಿಲ್ಲೆಯ ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ ಸೇರಿದಂತೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಗ್ಗಳಿಕೆ ಹೆಬ್ರಿಯದ್ದಾಗಿದೆ. ಹೆಬ್ರಿ ತಾಲೂಕು ಆಗಬೇಕೆಂದು  ಸುಮಾರು 41 ವರ್ಷದ ಬೇಡಿಕೆಯಾಗಿದ್ದು ಹೆಬ್ರಿ ತಾಲೂಕು ಆಗಲು ಎಲ್ಲಾ ಆರ್ಹತೆಯನ್ನು ಹೊಂದಿದ್ದು ತಾಲೂಕು ಪುನರ್‌ ರಚನಾ ರಾಜ್ಯ ಸಮಿತಿಯ 2012ರಲ್ಲಿ ಅಧ್ಯಕ್ಷರಾಗಿದ್ದ ಎಂ. ಬಿ ಪ್ರಕಾಶ್‌ ಉಡುಪಿ ಜಿಲ್ಲೆಯಲ್ಲಿ  ಹೆಬ್ರಿ ತಾಲೂಕು ರಚನೆಗೆ  ಸಾಕಷ್ಟು ಧನಾತ್ಮಕ ಅಂಶಗಳಿವೆ ಎಂದು ತಿಳಿಸಿದ್ದರು.2012-13ರ ಬಜೆಟ್‌ನಲ್ಲಿ 43 ಹೊಸ ತಾಲೂಕು ಘೋಷಣೆ ಮಾಡಿ ಮೂಲ ಸೌಕರ್ಯ ಒದಗಿಸಲು ಭರವಸೆ ನೀಡಿದರೂ ಸಹ ಅನುಷ್ಠಾನಗೊಂಡಿರಲಿಲ್ಲ. ಹೀಗಾಗಿ ಈ ಬಾರಿ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗದೆ ಪೂರ್ಣ ಅನುದಾನ ಬಿಡುಗಡೆಗೊಳಿಸಿ ತಾಲೂಕು ರಚನೆಗೆ ಅವಶ್ಯವಾಗಿರುವ ಕಾಮಗಾರಿಗಳಿಗೆ ಚಾಲನೆ ದೊರಕಿಸಿಕೊಡುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ. 

ಬಿಜೆಪಿ ಪಕ್ಷದಿಂದ ಸಂಭ್ರಮಾಚರಣೆ
ಬಿಜೆಪಿ ಪಕ್ಷದ ವತಿಯಿಂದ ಹೆಬ್ರಿ ತಾಲೂಕು ಘೋಷಣೆ ಸಂದರ್ಭದಲ್ಲಿ ಹೆಬ್ರಿ ಬಸ್‌ಸ್ಟಾಂಡ್‌ನ‌ಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಲಾಯಿತು. ಈ ಸಂದರ್ಭ ಹೆಬ್ರಿ ಜಿಲ್ಲಾ ಪಂಚಾಯತ್‌ ಸದಸ್ಯೆ ಜ್ಯೋತಿ ಹರೀಶ್‌ ಮಾತನಾಡಿ, ಹೆಬ್ರಿ ತಾಲೂಕು ಘೋಷಣೆಯಾಗುವಲ್ಲಿ ಕೇವಲ ಕಾಂಗ್ರೆಸ್‌ ಪಕ್ಷದ ಶ್ರಮ ಮಾತ್ರ ಕಾರಣವಲ್ಲ. ಎಲ್ಲ ಪಕ್ಷಗಳೂ, ಸಂಘಟನೆಗಳ ಸಂಘಟಿತ ಹೋರಾಟಕ್ಕೆ ಸಂದ ಜಯ ಇದಾಗಿದೆ. ಹಾಗಾಗಿ ತಾಲೂಕು ಘೋಷಣೆ ಸಂಭ್ರಮವನ್ನು ಎಲ್ಲರೂ ಒಗ್ಗೂಡಿ ಸಂಭ್ರಮಿಸೋಣ ಎಂದು ಕರೆ ನೀಡಿದರು. ಈ ಸಂದರ್ಭ ಹೆಬ್ರಿ ಪಂಚಾಯತ್‌ ಅಧ್ಯಕ್ಷ  ಸುಧಾಕರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಕೃತಿಯ ಸಂಭ್ರಮ 
ತಾಲೂಕು ಘೋಷಣೆಯ ಸುದ್ದಿ ತಿಳಿಯುತ್ತಿದ್ದಂತೆಯ ಕಳೆದ ಕೆಲವು ದಿನಗಳಿಂದ ಬಾರದ ಮಳೆ ಒಮ್ಮೆಲೆ ಸಿಡಿಲು ಗುಡುಗಿನ ಆರ್ಭಟದೊಂದಿಗೆ ಧರೆಗಿಳಿದು ಪರಿಸರವನ್ನು ತಂಪಾಗಿಸಿ ಜನರಲ್ಲಿ ಇನ್ನಷ್ಟು ಸಂತಸದೊಂದಿಗೆ ಪ್ರಕೃತಿ ಸಂಭ್ರಮಿಸಿದೆ ಎಂದು ಸ್ಥಳೀಯರೊಬ್ಬರು ಸಂತಸದಿಂದ ಹೇಳುತ್ತಾರೆ. ಉದಯವಾಣಿಯ ನಿರಂತರ ಲೇಖನ ತಾಲೂಕು ತಾಲೂಕು ರಚನೆ ಕುರಿತು ಹಲವು ವರ್ಷಗಳಿಂದ ಉದಯವಾಣಿ ವರದಿ ಹಾಗೂ ಸಮಗ್ರ ಲೇಖನವನ್ನು ಪ್ರಕಟಿಸಿರುವುದು ನೆನಪಿಸಿಕೊಳ್ಳಬಹುದಾಗಿದೆ.

Advertisement

“ನಿರಂತರವಾದ ಹೋರಾಟಕ್ಕೆ ಸಿಕ್ಕ ಫ‌ಲ’
ಕಾರ್ಕಳ:
ಮುಖ್ಯಮಂತ್ರಿಗಳು ರಾಜ್ಯದಲ್ಲಿ ಹೊಸದಾಗಿ 49 ನೂತನ ತಾಲೂಕುಗಳನ್ನು ಘೋಷಣೆ ಮಾಡಿದ್ದು ಈ ಸಂದರ್ಭ ಕಾರ್ಕಳ ತಾಲೂಕಿನ ಹೆಬ್ರಿಯನ್ನು ನೂತನ ತಾಲೂಕಾಗಿ ಘೋಷಣೆ ಮಾಡಿರುವುದು ಸ್ವಾಗತಾರ್ಹ, ಇದಕ್ಕಾಗಿ  ಮುಖ್ಯಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಹೆಬ್ರಿ ತಾಲೂಕು ರಚನೆಯ ಹೋರಾಟ ಅತೀ ದೀರ್ಘ‌ವಾದ ಹೋರಾಟವಾಗಿದ್ದು ವಿವಿಧ ಸಂಸ್ಥೆಗಳು, ಹಿರಿಯ ನಾಗರಿಕರು, ತಾಲೂಕು ಹೋರಾಟ ಸಮಿತಿ ಹಾಗೂ ಎಲ್ಲ ಹಂತದ ಜನಪ್ರತಿನಿಧಿಗಳ ನಿರಂತರವಾದ ಹೋರಾಟ ಮತ್ತು ಪ್ರಯತ್ನವೇ ಇಂದು ನೂತನ ತಾಲೂಕು ರಚನೆಯಾಗಲು ಕಾರಣವಾಗಿದೆ. ಕ್ಷೇತ್ರದ ಶಾಸಕನಾಗಿ ಮುಖ್ಯಮಂತ್ರಿಗಳು ಕಾರ್ಕಳದ ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ನೂತನ ತಾಲೂಕು ರಚನೆ ಬಗ್ಗೆ ಮನವಿ ಸಲ್ಲಿಸಿದ್ದೆ. ವಿಧಾನಸಭೆ ಅಧಿವೇಶನದಲ್ಲಿ ಮನವಿ ಮಾಡಿದ್ದು ಎರಡನೇ ಹಂತದಲ್ಲಿ ನೂತನ ತಾಲೂಕುಗಳ ಘೋಷಣೆ ಮಾಡುವಾಗ ಹೆಬ್ರಿಯನ್ನು ತಾ|ನ್ನಾಗಿ ಘೋಷಣೆ ಮಾಡುವುದಾಗಿ ಭರವಸೆಯನ್ನು ನೀಡಿದ್ದರು. ಎಲ್ಲ ರೀತಿಯ ಪ್ರಯತ್ನದಿಂದಾಗಿ ಇಂದು ಹೆಬ್ರಿ ತಾಲೂಕಾಗಿ ಘೋಷಣೆ ಆಗಿದೆ ಎಂದವರು ತಿಳಿಸಿದ್ದಾರೆ.     

“ನಿರಂತರ ಪರಿಶ್ರಮಕ್ಕೆ ಸಂದ ಜಯ’
ಕಾರ್ಕಳ
: ಕಳೆದ 4 1ವರ್ಷಗಳಿಂದ ಹೋರಾಟದ ಹಿನ್ನೆ‌°ಲೆಯಿರುವ ಹೆಬ್ರಿ ತಾಲೂಕು ರಚನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ ಮಾತಿನಂತೆ ನಡೆದುಕೊಂಡು ತಾಲೂಕು ಘೋಷಣೆ ಮಾಡಿರುವುದು ಸಂತಸ ತಂದಿದೆ. ಈ ಭಾಗದವರೇ ಆದ ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ,ಆಸ್ಕರ್‌ ಫೆರ್ನಾಂಡಿಸ್‌ ಅವರು ಈ ಭಾಗದ ಜನರ ಹೋರಾಟಗಾರ ಮನವಿಗೆ ಸ್ಪಂದಿಸಿ ಹೆಬ್ರಿಯನ್ನು ತಾಲೂಕು ಮಾಡಿದ್ದಾರೆ.ಈ ಬಗ್ಗೆ ನಾನು ಸದನದಲ್ಲಿ ಭಾವಿಗಿಳಿದು ಪ್ರತಿಭಟಿಸಿದ್ದೆ.ಸಿದ್ದರಾಮಯ್ಯನವರ ಇಚ್ಚಾಶಕ್ತಿ ಶ್ಲಾಘನೀಯ. ಈ ದಿನವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ದಿನ. ಹೆಬ್ರಿ ತಾಲೂಕನ್ನಾಗಿ ಮಾಡಿದ ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಗಳು,ಕಂದಾಯ ಇಲಾಖೆ, ಮೊಲಿ, ಆಸ್ಕರ್‌ ತಾಲೂಕು ಹೋರಾಟದ ಪ್ರಮುಖರು,ವಿವಿಧ ಸಂಘ ಸಂಸ್ಥೆಗಳು ಹಾಗೂ ಹೋರಾಟದ ಶ್ರಮಿಸಿದ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಜಿ ಶಾಸಕ ಎಚ್‌ ಗೋಪಾಲ ಭಂಡಾರಿ ಹೇಳಿದರು. 

ಅವರು ಸೆ. 7ರಂದು ಹೆಬ್ರಿ ಚೈತನ್ಯ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಎಚ್‌. ಭಾಸ್ಕರ್‌ ಜೋಯಿಸ್‌, ಮಾಜಿ ಜಿ.ಪಂ. ಸದಸ್ಯ ಮಂಜುನಾಥ ಪೂಜಾರಿ, ಕೆರೆಬೆಟ್ಟು ಸಂಜೀವ ಶೆಟ್ಟಿ,ನವೀನ್‌ ಅಡ್ಯಂತಾಯ ಮೊದಲಾದವರಿದ್ದರು.

– ಉದಯ ಕುಮಾರ್‌ ಶೆಟ್ಟಿ  ಹೆಬ್ರಿ

Advertisement

Udayavani is now on Telegram. Click here to join our channel and stay updated with the latest news.

Next