Advertisement
ಉಡುಪಿ ಜಿಲ್ಲೆ ಮಾತ್ರವಲ್ಲದೆ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪೆರ್ಡೂರು ಸಿಂಹ ಸಂಕ್ರಮಣಕ್ಕೆ ಬರುವುದು ಇಲ್ಲಿಯ ವಿಶೇಷತೆ. 12 ಸಂಕ್ರಮಣಗಳೂ ಇಲ್ಲಿ ವಿಶೇಷವಾಗಿದ್ದು ಅದರಲ್ಲೂ ಸಿಂಹ ಸಂಕ್ರಮಣ ಹಬ್ಬದ ವಾತಾವರಣದೊಂದಿಗೆ ದೇವರ ದರ್ಶನಕ್ಕೆ ಬೆಳಗ್ಗೆ 4 ಗಂಟೆಯಿಂದ ಜನಜಂಗುಳಿ, ವಾಹನ ದಟ್ಟಣೆ ಆರಂಭವಾಗುತ್ತದೆ. ಸಿಂಹ ಸಂಕ್ರಮಣದಂದು ದೇವರಿಗೆ ವಿಶೇಷ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಭಕ್ತ ವೃಂದದ ಸಹಕಾರದೊಂದಿಗೆ ನಡೆಯಲಿದೆ.
Related Articles
Advertisement
ಅನಂತಪದ್ಮನಾಭನ ವಿಗ್ರಹವನ್ನು ತರುವಾಗ ದಾರಿಯಲ್ಲಿ ಬಾಳೆಹಣ್ಣು ಮಾರಾಟ ಮಾಡುವವನು ಅದನ್ನು ನಿರ್ಲಕ್ಷ್ಯ ಮಾಡಿದನಂತೆ. ಆ ಅನಂತರ ಆತನಿಗೆ ನಾನಾ ಸಮಸ್ಯೆಗಳಾಯಿತು. ಬಳಿಕ ಅವನು ದೇವರಿಗೆ ಬಾಳೆಹಣ್ಣು ಸಮರ್ಪಣೆ ಮಾಡಿದ ಮೇಲೆ ಸಮಸ್ಯೆಗಳು ಬಗೆಹರಿಯಿತು ಎಂದು ಹೇಳಲಾಗುತ್ತಿದೆ.
ಸುಮಾರು ಒಂದು ಸಾವಿರ ವರ್ಷಗಳಿಂದಲೂ ಭಕ್ತರಿಂದ ಬಾಳೆಹಣ್ಣಿನ ಸೇವೆ ಇಲ್ಲಿ ನಡೆದು ಬರುತ್ತಿದ್ದು ತಮ್ಮ ಇಷ್ಟಾರ್ಥ ಸಿದ್ಧಿ ಸಂಕಲ್ಪಗಳಿಗೆ ಬಾಳೆಹಣ್ಣಿನ ಸೇವೆ ಸಲ್ಲಿಸುವುದು ಇಲ್ಲಿ ವಿಶೇಷ. ಅನಾರೋಗ್ಯದ ನಿವಾರಣೆಗೆ ಸಾವಿರ ಬಾಳೆಹಣ್ಣು, 500 ಬಾಳೆಹಣ್ಣು, ದಿನಕ್ಕೊಂದು ಬಾಳೆಹಣ್ಣು, ಸಿಬ್ಲಿ ಹಣ್ಣು ಹೀಗೆ ಬಾಳೆಹಣ್ಣಿನ ಹರಕೆ ಸೇವೆ ನಡೆಯುತ್ತಿದೆ.
ಹನ್ನೆರಡು ಸಂಕ್ರಮಣ ವ್ರತಾಚರಣೆ
ಸಂಕ್ರಮಣ ದೇವರು ಎಂದು ಪ್ರಸಿದ್ಧಿ ಪಡೆದ ಪೆರ್ಡೂರು ಕ್ಷೇತ್ರವು ವರ್ಷದ ಹನ್ನೆರಡು ರಾಶಿಗಳನ್ನು ಸೂರ್ಯ ಕ್ರಮಿಸುವ ಘಟ್ಟದಲ್ಲಿ ಅನಂತಪದ್ಮನಾಭ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆರಾಧಿಸುವ ಪದ್ದತಿ ಹಿಂದಿನಿಂದಲೂ ಇದೆ.
ಶ್ರೀ ಕ್ಷೇತ್ರದಲ್ಲಿ 12 ಸಂಕ್ರಮಣಕ್ಕೆ ತಪ್ಪದೇ ಬಂದು ಭಗವಂತನ ದರ್ಶನ ಪಡೆದರೆ ಸಂಕಲ್ಪ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.
ಹಿಂದೆ ಪ್ರತೀ ಸಂಕ್ರಮಣದಂದು ಕಾಲ್ನಡಿಗೆಯಲ್ಲಿಯೇ ದೇವರ ದರ್ಶನ ಪಡೆಯುತ್ತಿದ್ದರು. ಈಗಲೂ ಹೆಚ್ಚಿನ ಭಕ್ತರು ನಿರಾಹಾರರಾಗಿ ಶ್ರೀ ಸನ್ನಿಧಿಗೆ ಬಂದು ಹಣ್ಣು ಕಾಯಿ ಸಮರ್ಪಿಸಿ ಭಕ್ತಿಯಿಂದ ದೇವರಲ್ಲಿ ಪ್ರಾಥಿಸಿ ವ್ರತಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ಮದುಮಕ್ಕಳ ಜಾತ್ರೆ
ಆಷಾಢ ಕಳೆದು ಬರುವ ಸಿಂಹ ಮಾಸ ಹೊಸ ಮದುಮಕ್ಕಳಿಗೆ ವಿಶೇಷ. ಈ ವರ್ಷದಲ್ಲಿ ಮದುವೆಯಾದ ಮದುಮಕ್ಕಳು ಸಿಂಹಸಂಕ್ರಮಣದಂದು ದೇವರ ದರ್ಶನ ಮಾಡಿ ಹೋಗುವ ಸಂಪ್ರದಾಯ ಮೊದಲಿನಿಂದಲೂ ನಡೆದು ಬರುತ್ತಿದೆ. ಮದುಮಗ ತನ್ನ ಮನೆ ಹಿರಿಯರೊಂದಿಗೆ ತನ್ನ ಮಡದಿಯನ್ನು ಕರೆದೊಯ್ಯಲು ಬರುವ ಹಾಗೂ ಮದುಮಗಳು ಗಂಡನ ಮನೆಗೆ ಹೋಗುವ ಮುನ್ನ ತಮ್ಮ ಹೆತ್ತವರೊಂದಿಗೆ ಬಂದು ಸೇರುವ ತಾಣ ಇದಾಗಿದ್ದು, ಇಲ್ಲಿ ಹೊಸ ದಂಪತಿ ಶ್ರೀ ಸ್ವಾಮಿಯನ್ನು ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದ್ದು, ಮದುಮಕ್ಕಳ ಜಾತ್ರೆ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.
ಸಮಸ್ಯೆಯಾಗದಂತೆ ಕ್ರಮ
ಈ ಭಾಗದ ಯುವಕ ಸಂಘ, ಗ್ರಾಮಸ್ಥರ, ಪೊಲೀಸ್ ಇಲಾಖೆಯ ಸಹಕಾರದಿಂದ ಯಾವುದೇ ನೂಕುನುಗ್ಗಲಿಲ್ಲದೆ, ಮಳೆಯಲ್ಲಿ ಒದ್ದೆಯಾಗದಂತೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆೆ. ಅಲ್ಲದೆ ಅಂಗವಿಕಲರಿಗೆ ಮತ್ತು ವಯೋವೃದ್ಧರಿಗೆ ದೇವರ ಶೀಘ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. -ಪ್ರತಿಭಾ ಆರ್., ತಹಶೀಲ್ದಾರರು, ಕಾಪು, ಕಾರ್ಯ ನಿರ್ವಹಣಾಧಿಕಾರಿ, ಶ್ರೀ ಅನಂತಪದ್ಮನಾಭ ದೇವಸ್ಥಾನ , ಪೆರ್ಡೂರು