ಹೆಬ್ರಿ: ನೂತನವಾಗಿ ಘೋಷಣೆಗೊಂಡ ಹೆಬ್ರಿ ತಾಲೂಕು ಇನ್ನೂ ಕಾರ್ಯಾರಂಭಿಸದೇ ಜನರಿಗೆ ಸೌಲಭ್ಯಗಳನ್ನು ಪಡೆಯುವಲ್ಲಿ ತೊಂದರೆಯಾಗುತ್ತಿದೆ. ಆದ್ದರಿಂದ ಕಚೇರಿಯನ್ನು ಶೀಘ್ರವಾಗಿ ಶುರುಮಾಡಬೇಕು. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ತಪ್ಪಿದಲ್ಲಿ ವಿವಿಧ ಸಂಘಟನೆಗಳಿಂದ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದು ಪ್ರಗತಿಪರ ನಾಗರಿಕ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಹೇಳಿದರು.
ಅವರು ಹೆಬ್ರಿ ನಾಯಕ್ ಸಭಾಭವನದಲ್ಲಿ ಹೆಬ್ರಿ ತಾಲೂಕು ಹೋರಾಟ ಸಮಿತಿ ಪ್ರಗತಿಪರ ನಾಗರಿಕ ಹೋರಾಟ ಸಮಿತಿ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ತಾಲೂಕಾಗಿ ಘೋಷಣೆಯಾದರೂ ಪ್ರಗತಿ ಇಲ್ಲ. ಮುಖ್ಯವಾಗಿ ಆರ್‌ಟಿಸಿ ಸಮಸ್ಯೆ ಬಗೆ ಹರಿದಿಲ್ಲ. ಕೂಡಲೇ ಇಲಾಖೆ ಈ ಸಮಸ್ಯೆ ಬಗೆಹರಿಸಬೇಕು ಎಂದು ಹೆಬ್ರಿ ತಾಲೂಕು ಹೊರಾಟ ಸಮಿತಿಯ ಅಧ್ಯಕ್ಷ ಎಚ್ ಭಾಸ್ಕರ್ ಜೋಯಿಸ್ ಹೇಳಿದರು. ಸಭೆಯಲ್ಲಿ ಎಲ್ಲಾ ಗ್ರಾಮಗಳು ಸೇರಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳನ್ನು ಪರಿಹರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು. ಹೆಬ್ರಿ ತಾಲೂಕಿನ 16 ಗ್ರಾಮಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಟಿ.ಜಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಟನೆ
ಹೆಬ್ರಿ ತಾಲೂಕಿನ ಗ್ರಾಮಗಳ ನಾಗರಿಕರಿಗೆ ಬೇಕಾದ ಅಗತ್ಯ ದಾಖಲೆಗಳು ಸಿಗದೇ ಜನತೆಗೆ ತುಂಬಾ ತೊಂದರೆಯಾಗಿದೆ. ಇದರಿಂದಾಗಿ ಅಡಿಕೆ ಕೊಳೆರೋಗ ಪರಿಹಾರಕ್ಕೆ ಆರ್‌ಟಿಸಿ ಪಡೆಯಲು ಹಾಗೂ ನೂತನವಾಗಿ ಗೃಹನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮ ನಡೆಸಲು ಅಸಾಧ್ಯವಾಗಿದೆ. ರೈತರ ಸ್ಥಿತಿ ಶೋಚನೀಯವಾಗಿದ್ದು ಈ ತೊಂದರೆಗಳನ್ನು ಪರಿಹರಿಸುವಲ್ಲಿ ಜಿಲ್ಲಾಡಳಿತ ಕೂಡಲೇ ಯತ್ನಿಸಬೇಕು. ಇಲ್ಲದಿದ್ದರೆ ಸಂಘಟನೆಗಳೊಂದಿಗೆ ರೈತರು ಬೀದಿಗಿಳಿಯಬೇಕಾಗುತ್ತದೆ.
– ಮುಟ್ಲುಪಾಡಿ ಸತೀಶ್ ಶೆಟ್ಟಿ
ರೈತ ಮೋರ್ಚಾ ಜಿಲ್ಲಾಧ್ಯಕ್ಷ