“ಡಾ. ಅಶೋಕ್ ಪೈ ತುಂಬಾ ಇಷ್ಟಪಟ್ಟು ನಿರ್ಮಿಸಿದ ಸಿನಿಮಾವಿದು. ಅವರೊಂದಿಗೆ ಇದು ನನ್ನ ನಾಲ್ಕನೇ ಚಿತ್ರ. ಯುರೋಪ್‌ನಿಂದ ಫೋನ್ ಮಾಡಿ, “ಸಿನಿಮಾವನ್ನು ನಾನು ಬಂದ ಮೇಲೆ ರಿಲೀಸ್ ಮಾಡೋಣ’ ಅಂತ ಹೇಳಿದ್ದರು. ಆದರೆ, ಅವರು ಅಲ್ಲೇ ಕೊನೆಯುಸಿರೆಳೆದರು. ಹೀಗಾಗಿ ಸಿನಿಮಾ ರಿಲೀಸ್ ಆಗೋದು ಸ್ವಲ್ಪ ತಡವಾಯ್ತು …’ ಹೀಗೆ ಹೇಳಿ ಕ್ಷಣ ಕಾಲ ಮೌನಕ್ಕೆ ಶರಣಾದರು ನಿರ್ದೇಶಕ ಕಮ್ ನಟ ಸುರೇಶ್ ಹೆಬ್ಳೀಕರ್.
ಅವರು ಮಾತನಾಡಿದ್ದು “ಮನ ಮಂಥನ’ ಚಿತ್ರದ ಬಗ್ಗೆ. “ಕಳೆದ ಒಂದೂವರೆ ದಶಕದ ಬಳಿಕ ನಿರ್ದೇಶಿಸಿರುವ ಚಿತ್ರವಿದು. ಹಾಗಾಗಿ, ಒಳ್ಳೆಯ ವಿಷಯದೊಂದಿಗೇ ಪುನಃ ಬಂದಿದ್ದೇನೆ. ಇದು ಬದುಕಿನಲ್ಲಿರುವ ಕೆಲ ಸತ್ಯ ಘಟನೆಗಳನ್ನಾಧರಿಸಿದ ಚಿತ್ರ. ಈಗಿನ ಯುವಕರ ಬಯಕೆ, ಕನಸು ಮತ್ತು ಅವರ ಚಿಂತನೆ ಮಾರ್ಗ, ಭವಿಷ್ಯ ಇವೆಲ್ಲವೂ ಪೋಷಕರಿಗೆ ಅರ್ಥ ಆಗೋದು ಕಷ್ಟ. ಅಂತಹ ಅರ್ಥವಾಗುವ ಅವಕಾಶದ ವಂಚನೆಯೇ ಒಂದು ರೀತಿಯ ಸಂತಾಪ ಮತ್ತು ಘರ್ಷಣೆಗೆ ಕಾರಣ. ಇಂತಹ ಹಲವು ಸನ್ನಿವೇಶಗಳು ಚಿತ್ರದಲ್ಲಿ ಕಾಣಸಿಗುತ್ತವೆ. ಮನೋವಿಜ್ಞಾನಕ್ಕೆ ಸಂಬಂಧಿಸಿದ ಎಳೆಯೇ ಚಿತ್ರದ ಹೈಲೆಟ್ …’
“ಗ್ಯಾಪ್ ಬಳಿಕ ಮಾಡಿದ ಸಿನಿಮಾವಾದ್ದರಿಂದ ತಂಬಾ ಗಂಭೀರ ವಿಷಯದ ಜತೆಯಲ್ಲಿ, ಸಂದೇಶ ಸಾರುವ ಅಂಶಗಳೂ ಇವೆ. ಅಶೋಕ್ ಪೈ ಅವರೇ ಕೊಟ್ಟ ಕಥೆಗೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದೇನೆ. ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರೂ ನೈಜವಾಗಿ ಅಭಿನಯಿಸಿರುವುದು ಚಿತ್ರದ ಪ್ಲಸ್. ಇದೊಂದು ಚಿಕ್ಕ ಬಜೆಟ್ ಚಿತ್ರವಾದರೂ, ಈಗಿನ ಯೂತ್ಸ್ಗಿರುವ ತಳಮಳ, ಪೋಷಕರಲ್ಲಿರುವ ಆತಂಕ ಇತ್ಯಾದಿಗಳನ್ನು ಬಿಚ್ಚಿಡುವ ಮೂಲಕ ಒಂದಷ್ಟು ಪರಿಹಾರ ಸೂಚಿಸುವ ಅಂಶಗಳನ್ನು ಹೊಂದಿದೆ’ ಎನ್ನುತ್ತಾರೆ ಸುರೇಶ್ ಹೆಬ್ಳೀಕರ್.
ರಮೇಶ್ ಭಟ್‌ಗೆ ಹೆಬ್ಳೀಕರ್ ಜತೆ ಸಮಾರು ನಾಲ್ಕು ದಶಕದ ಪಯಣವಂತೆ. “ಇಲ್ಲಿ ಎಲ್ಲವೂ ಒಳಗೊಂಡಿದೆ. ಇಲ್ಲಿ ಹೀರೋ ಇಪ್ಪತ್ತು ಜನರಿಗೆ ಹೊಡೆದುರುಳಿಸಲ್ಲ. ಐಟಂ ಸಾಂಗ್ ಇಲ್ಲ. ಗ್ಲಾಮರ್ ಇಲ್ಲ. ಹೆವಿ ಮೆಲೋಡ್ರಾಮವೂ ಇಲ್ಲ. ಒಂದು ಸಹಜವಾದ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಒಂದು ಚೌಕಟ್ಟಿನಲ್ಲಿ ನನ್ನ ಪಾತ್ರವಿದೆ. ಅದಕ್ಕೆ ಸರ್ಕಾರಿ ಮುದ್ರೆಯೂ ಬಿದ್ದಿದೆ. ಅಭಿನಯಕ್ಕೆ ಅವಾರ್ಡ್ ಸಿಕ್ಕಿರುವುದು ಖುಷಿ ಕೊಟ್ಟಿದೆ’ ಎಂದರು ರಮೇಶ್‌ಭಟ್.
ಹೀರೋ ಕಿರಣ್ ರಜಪೂತ್‌ಗೆ ಇದು ಮೊದಲ ಸಿನಿಮಾ. ಧಾರವಾಡ ಮೂಲದ ಕಿರಣ್ ರಜಪೂತ್ ಒಮ್ಮೆ, ಹೆಬ್ಳೀಕರ್ ಅವರನ್ನು ಭೇಟಿ ಮಾಡಿ, ಸಿನಿಮಾ ಆಸೆ ಹೇಳಿಕೊಂಡಿದ್ದರಂತೆ. ಆಗ, ಓಕೆ ಅಂದಿದ್ದರಂತೆ ಹೆಬ್ಳೀಕರ್, ಏನೋ ಒಂದು ಸಣ್ಣ ಪಾತ್ರ ಕೊಡ್ತಾರೆ ಅಂದುಕೊಂಡ ರಜಪೂತ್‌ಗೆ, ಹೀರೋ ಅವಕಾಶ ಕೊಟ್ಟಿದ್ದಕ್ಕೆ ಇನ್ನಿಲ್ಲದ ಖುಷಿ ಇದೆ. ಅವರಿಗಿಲ್ಲಿ ಮುಗ್ಧ ಹುಡುಗನ ಪಾತ್ರವಂತೆ.
ಅರ್ಪಿತ ಸಿನಿಮಾದ ನಾಯಕಿ. ಅವರಿಗೂ ಇಲ್ಲಿ ಮುಗ್ಧ ಹುಡುಗಿಯ ಪಾತ್ರ ಸಿಕ್ಕಿದೆಯಂತೆ. ಹಿರಿಯ ನಟಿ ಸಂಗೀತ ಅವರಿಗೆ ಹೆಬ್ಳೀಕರ್ ಜತೆ ಮೊದಲ ಸಿನಿಮಾವಂತೆ. ಅವರಿಂದ ಸಾಕಷ್ಟು ಕಲಿತಿದ್ದುಂಟು. ಸೆಟ್‌ನಲ್ಲಿ ಒಳ್ಳೆಯ ವಾತಾವರಣ ಇತ್ತು’ ಎಂದರು ಸಂಗೀತ.