Advertisement

ಗಂಗೊಳ್ಳಿ ಕಡಲ ಕಿನಾರೆಯಲ್ಲಿ ರಾಶಿ ಬಿದ್ದ ತ್ಯಾಜ್ಯ

11:57 PM Mar 28, 2019 | Sriram |

ಗಂಗೊಳ್ಳಿ: ಪಂಚ ನದಿಗಳು ಸಂಗಮಿಸುವ ಗಂಗೊಳ್ಳಿಯ ಕಡಲ ಕಿನಾರೆಯು ಕಸ ಎಸೆಯುವ ಡಂಪಿಂಗ್‌ ಯಾರ್ಡ್‌ ಆಗಿ ಮಾರ್ಪಡುತ್ತಿದೆ. ಸಮುದ್ರ ತೀರದಲ್ಲಿರುವ ಕಸದ ರಾಶಿಯಿಂದಾಗಿ ಬೀಚ್‌ನ ಸೌಂದರ್ಯ ಆಸ್ವಾದಿಸಲು ಬರುವ ಪ್ರವಾಸಿಗರು ಮತ್ತು ವಾಯು ವಿಹಾರಿಗಳು ದುರ್ವಾಸನೆಯಿಂದ ತೊಂದರೆ ಅನುಭವಿಸುವಂತಾಗಿದೆ.

Advertisement

ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವೆಂದು ಗುರುತಿಸಲ್ಪಡುವ ಗಂಗೊಳ್ಳಿಯ ಸಮುದ್ರ ತೀರದಲ್ಲಿ ಐದು ನದಿಗಳು ಒಟ್ಟು ಸೇರಿ ಸಮುದ್ರವನ್ನು ಸೇರುವ ಅದ್ಭುತ ದೃಶ್ಯವನ್ನು ಕಾಣಬಹುದು. ಇಂತಹ ಸುಂದರ, ರಮಣೀಯ ಪ್ರದೇಶದ ಕಡಲ ತೀರವು ತ್ಯಾಜ್ಯ ರಾಶಿಯಿಂದ ತುಂಬಿ ತುಳುಕುತ್ತಿದೆ. ಕಡಲ ತೀರಕ್ಕೆ ಹೋಗುವ ದಾರಿಯುದ್ದಕ್ಕೂ ತಾಜ್ಯಗಳು ಕಂಡು ಬರುತ್ತಿವೆ.

ಬೀಚ್‌ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುವ ಜನರಿಗೆ ಸಮಸ್ಯೆಯಾಗುತ್ತಿದೆ. ಕಡಲ ತೀರಕ್ಕೆ ಸಾಗುವ ದಾರಿಯ ಇಕ್ಕೆಲಗಳಲ್ಲಿ ಭಾರಿ ಪ್ರಮಾಣದ ತ್ಯಾಜ್ಯ ಸಂಗ್ರಹಗೊಂಡಿದ್ದು, ಇದು ಇಲ್ಲಿಗೆ ಬರುವ ಜನರಿಗೆ ಅಸಹ್ಯ ಮೂಡಿಸುವಂತಿದೆ.

ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಗಂಗೊಳ್ಳಿ ಕಡಲ ತೀರ ತ್ಯಾಜ್ಯ ವಿಸರ್ಜನೆಯ ಕೇಂದ್ರವಾಗಿ ಮಾರ್ಪಾಡಾ ಗುವುದರ ಬಗ್ಗೆ ಸ್ಥಳೀಯಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರ ವಾಗಿ ಪರಿಗಣಿಸಬೇಕಿದೆ. ಕಡಲ ಕಿನಾರೆಯಲ್ಲಿ ಕಸದ ವಿಸರ್ಜನೆಗೆ ಕಡಿವಾಣ ಹಾಕುವುದರ ಜತೆಗೆ ತ್ಯಾಜ್ಯದ ರಾಶಿ ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮೂಗು ಮುಚ್ಚಿಕೊಳ್ಳಬೇಕು
ಗಂಗೊಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಎಸ್‌ಎಲ್‌ಆರ್‌ಎಂ ಘಟಕ ಕಾರ್ಯನಿರ್ವಹಿಸುತ್ತಿದ್ದರೂ ಜನರು ತಮ್ಮ ಮನೆ ಹಾಗೂ ವಾಣಿಜ್ಯ ಮಳಿಗೆಗಳ ತ್ಯಾಜ್ಯವನ್ನು ಸಂಜೆ ಬಳಿಕ ಸಮುದ್ರ ತೀರದಲ್ಲಿ ಎಸೆಯುತ್ತಿದ್ದಾರೆ. ಮನೆಯ ಹಳೆ ಸಾಮಗ್ರಿಗಳು, ಹಾಳಾದ ಟಿವಿ, ಫ್ರೀಡ್ಜ್ ಇತ್ಯಾದಿ ಉಪಕರಣಗಳು, ಮನೆಯ ನಿರುಪಯುಕ್ತ ಕಟ್ಟಡ ಸಾಮಾಗ್ರಿಗಳು, ಮರಗಳನ್ನು ಕೂಡ ಕೂಡ ಇಲ್ಲಿ ಎಸೆದು ಹೋಗುತ್ತಾರೆ. ಇಲ್ಲಿ ತ್ಯಾಜ್ಯ ವಿಸರ್ಜನೆಯಿಂದ ಇಲ್ಲಿಗೆ ಬರಲು ಕೂಡ ಸರಿಯಾಗುವುದಿಲ್ಲ. ನಡೆದಾಡಲು ಸಹ ಸಾಧ್ಯವಾಗುತ್ತಿಲ್ಲ. ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ ಎನ್ನುವುದು ಇಲ್ಲಿಗೆ ನಿತ್ಯ ಬರುವ ವಾಯು ವಿಹಾರಿಯೊಬ್ಬರ ಆರೋಪ.

Advertisement

ಎಚ್ಚರಿಕೆ ನೀಡಲಾಗಿದೆ
ಗಂಗೊಳ್ಳಿ ಸಮುದ್ರ ತೀರದಲ್ಲಿ ತ್ಯಾಜ್ಯ ವಿಸರ್ಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಅನೇಕ ಬಾರಿ ಸ್ಥಳೀಯರಿಗೆ ಮೌಖೀಕ ಎಚ್ಚರಿಕೆ ನೀಡಲಾಗಿದೆ. ಆದರೂ ತ್ಯಾಜ್ಯ ವಿಲೇವಾರಿಗೆ ಕಡಿವಾಣ ಬಿದ್ದಿಲ್ಲ. ಸಂಬಂಧಪಟ್ಟ ಇಲಾಖಾಧಿಕಾರಿಗಳ ಜತೆ ಚರ್ಚೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸದ್ಯ ಬೀಚ್‌ ಬದಿ ಇರುವ ಕಸದ ರಾಶಿಯನ್ನು ತೆರವುಗೊಳಿಲಾಗುವುದು.
– ಬಿ. ಮಾಧವ,
ಕಾರ್ಯದರ್ಶಿ, ಗ್ರಾ.ಪಂ. ಗಂಗೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next