Advertisement

ಕರಾವಳಿಯಲ್ಲಿ ಕೋಳಿ ಮಾಂಸ, ಮೊಟ್ಟೆ ದರದಲ್ಲಿ ಭಾರೀ ಇಳಿಕೆ

08:39 AM Jul 25, 2022 | Team Udayavani |

ಕಾಪು: ಕರಾವಳಿಯಲ್ಲಿ 10 ದಿನಗಳ ಹಿಂದೆ ಗಗನಕ್ಕೇರಿದ್ದ ಕೋಳಿ ಮಾಂಸದ ದರ ತೀವ್ರ ಕುಸಿತ ಕಂಡಿದೆ. ಮೊಟ್ಟೆ ಬೆಲೆಯೂ ಇಳಿದಿದ್ದು ಮಾಂಸ ಪ್ರಿಯರು ಢಬಲ್‌ ಧಮಾಕದ ಖುಷಿ ಪಡುವಂತಾಗಿದೆ.

Advertisement

10 ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಬ್ರಾಯ್ಲರ್‌ ಕೋಳಿ ಮಾಂಸ ಸ್ಕಿನ್‌ಲೆಸ್‌ ಕೆಜಿಗೆ 240 ರೂ. ಇತ್ತು. ವಿತ್‌ಸ್ಕಿನ್‌ ಕೆ.ಜಿ.ಗೆ 220 ರೂ. ಹಾಗೂ ಜೀವಂತ ಕೋಳಿ 180 ರೂ. ವರೆಗೆ ಇತ್ತು. ಜು. 24ರಂದು ಸ್ಕಿನ್‌ಲೆಸ್‌ ಕೆಜಿಗೆ 155 ರೂ. ಇದ್ದರೆ ವಿತ್‌ಸ್ಕಿನ್‌ 135 ರೂ. ಆಸುಪಾಸಿನಲ್ಲಿದೆ. ಜೀವಂತ ಕೋಳಿ ಕೆಜಿಗೆ 105 ರೂ. ವರೆಗೆ ಕುಸಿದಿದೆ. 6.50 ರೂ.ಗೆ ಮಾರಾಟವಾಗುತ್ತಿದ್ದ ಮೊಟ್ಟೆ ಮೊಟ್ಟೆಯ ದರವೂ ಇಳಿದಿದ್ದು 5.50 ರೂ.ಗೆ ಇಳಿದಿದೆ. ವಾರದಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ.

ಇಳಿಕೆಗೆ ಕಾರಣವೇನು?:

ಬೇಸಗೆಯಲ್ಲಿ ಮದುವೆ, ಕೋಲ, ತಂಬಿಲ ಸಹಿತ ಶುಭ ಕಾರ್ಯಗಳ ಸಂದರ್ಭ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಿರುವ ಕಾರಣ ದರವೂ ವಿಪರೀತ ಏರಿಕೆೆಯಾಗುತ್ತದೆ. ಮಳೆಗಾಲ ಆರಂಭಗೊಂಡು ಆಷಾಢ ಬರುತ್ತಿದ್ದಂತೆಯೇ ದರ ಇಳಿಯುವುದು ಸಾಮಾನ್ಯ. ಮುಂದೆ ಶ್ರಾವಣ ಮಾಸ ಬರುವುದರಿಂದ ಇಡೀ ರಾಜ್ಯದಲ್ಲಿ ಕೋಳಿಯ ದರ ಕಡಿಮೆಯಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ತಾಜಾ ಮೀನು ಕೂಡ ಸಿಗುತ್ತಿರುವುದರಿಂದ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆ. ದರ ಏರಿಕೆಗೆ ಡಿಸೆಂಬರ್‌ ವರೆಗೆ ಕಾಯಬೇಕು ಎನ್ನುತ್ತಾರೆ ಕೋಳಿ ವ್ಯಾಪಾರಿಗಳು.

ಹೊರ ಜಿಲ್ಲೆಗಳಿಂದ ಪೂರೈಕೆ :

Advertisement

ಕೋಳಿ ಮತ್ತು ಕೋಳಿ ಮಾಂಸಕ್ಕೆ ಬೆಂಗಳೂರು, ಮೈಸೂರು, ಕರಾವಳಿ ಜಿಲ್ಲೆಯಲ್ಲಿ ಭಾರೀ ಬೇಡಿಕೆ. ಉಡುಪಿ ಜಿಲ್ಲೆಯ ಬೇಡಿಕೆಯ ಬಹುಪಾಲು ಹುಬ್ಬಳ್ಳಿ, ಹಾಸನ, ಬೆಂಗಳೂರು, ತಮಿಳುನಾಡು, ದಾವಣಗೆರೆ ಜಿಲ್ಲೆಗಳಿಂದ ಪೂರೈಕೆಯಾಗುತ್ತದೆ.

ಸಣ್ಣ ವ್ಯಾಪಾರಿಗಳಿಗೆ ನಷ್ಟ:

ಮಾರುಕಟ್ಟೆಯಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆಯಾದಾಗ ಬೆಲೆ ಇಳಿಸುತ್ತಾರೆ. ಬೇಡಿಕೆ ಹೆಚ್ಚಾದಾಗ ಬೆಲೆ ಹೆಚ್ಚಿಸುತ್ತಾರೆ. ಮಾಂಸ ಮತ್ತು ಮೊಟ್ಟೆಯ ದರ ಪ್ರತೀ ದಿನ ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಕೋಳಿ ದರ ವಿಪರೀತ ಇಳಿದಾಗ ಅದು ನಮ್ಮಂತಹ ಸಣ್ಣ ವ್ಯಾಪಾರಿಗಳಿಗೆ ಸಂಕಷ್ಟವನ್ನುಂಟು ಮಾಡುತ್ತದೆ ಎನ್ನುತ್ತಾರೆ ಕಾಪು ಸಂತೆ ಮಾರ್ಕೆಟ್‌ನ ಕೋಳಿ ವ್ಯಾಪಾರಿ ಆಶ್ರಿತ್‌ ಶೆಟ್ಟಿ.

ನಷ್ಟದಲ್ಲಿ ಕುಕ್ಕುಟೋದ್ಯಮ :

ಕೋಳಿ ಸಾಕಾಣಿಕೆಗೆ ಪ್ರತೀ ಕೆಜಿಗೆ 100 ರೂ.ಗೂ ಅಧಿಕ ವೆಚ್ಚ ತಗಲುತ್ತದೆ. ಕೋಳಿ ಆಹಾರದ ಬೆಲೆಯೂ ಹೆಚ್ಚಾಗಿರುವುದಲ್ಲದೆ ಅದರ ತಯಾರಿಗೆ ಬಳಸುವ ಕಚ್ಚಾ ಪದಾರ್ಥಗಳಾದ ಮೆಕ್ಕೆ ಜೋಳ, ಸೋಯಾ, ಅಕ್ಕಿ ಎಣ್ಣೆ ಬೆಲೆಯೂ ಹೆಚ್ಚಾಗಿರುವ ಕಾರಣ ನಿರ್ವಹಣ ವೆಚ್ಚ ಹೆಚ್ಚಾಗುತ್ತಿದೆ. ಪ್ರಸ್ತುತ ನಷ್ಟದಲ್ಲೇ ಕುಕ್ಕಟೋದ್ಯಮ ನಡೆಸುವಂತಾಗಿದೆ ಎನ್ನುತ್ತಾರೆ ಕುರ್ಕಾಲು ಅರುಣ್‌ ಪೌಲಿó ಫಾರಂನ ಅರುಣ್‌ ಕೋಟ್ಯಾನ್‌.

ಕಿನ್ನಿಗೋಳಿ: ಕೋಳಿ ಮಾರಾಟ  ಅಂಗಡಿಯಲ್ಲಿ ದರ ಸಮರ! :

ಕಿನ್ನಿಗೋಳಿ: ಜಿಲ್ಲೆಯಾದ್ಯಂತ ಹಲವು ಮಳಿಗೆಯನ್ನು ಹೊಂದಿರುವ ಖಾಸಗಿ ಕೋಳಿ ಮಾರಾಟ ಮಳಿಗೆಯವರು ಕಿನ್ನಿಗೋಳಿಯಲ್ಲಿ ಗ್ರಾಹರಿಗೆ ಆಫರ್‌ ನೀಡಿರುವುದರಿಂದ ಗ್ರಾಹಕರು ಸರತಿಯಲ್ಲಿ ನಿಲ್ಲುವಂತಾಗಿದೆ!

ಕಳೆದ ಗುರುವಾರ ಮತ್ತು ಶುಕ್ರವಾರ ಕೆಜಿಗೆ 99 ರೂ. ಮತ್ತು ಶನಿವಾರ ಮತ್ತು ರವಿವಾರ 110 ರೂ.ಗೆ ಕೋಳಿ ಮಾರಾಟವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ಮಳಿಗೆಯವರು ಹರಿಯಬಿಟ್ಟ ಕಾರಣ   (ಮಾರುಕಟ್ಟೆ ದರ ಕೆಜಿಗೆ ಸುಮಾರು 130 ರೂ.) ಗ್ರಾಹಕರು ಅಲ್ಲಿ ಮುಗಿಬಿದ್ದರು. ಇದಕ್ಕೆ ಪ್ರತಿಯಾಗಿ ಸ್ಥಳೀಯ ಕೋಳಿ ಮಾಂಸದ ಮಳಿಗೆಯವರು ಸಭೆ ನಡೆಸಿ 95 ರೂ.ಗೆ ಕೋಳಿ ಮಾರಾಟ ಮಾಡಲು ನಿರ್ಧರಿಸಿ, 99 ರೂ.ಗೆ ಮಾರಾಟ ಮಾಡುವ ಮಳಿಗೆಗೆ ಸ್ಪರ್ಧೆ ನೀಡಿದರು.

ಪರಿಣಾಮವಾಗಿ 3 ದಿನಗಳಿಂದ ಕಿನ್ನಿಗೋಳಿಯ ಎಲ್ಲ ಕೋಳಿ ಮಾರಾಟ ಮಳಿಗೆಗಳಿಗೆ ಗ್ರಾಹಕರು ಮುಗಿಬೀಳುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಲಾಭವಾಗಿರುವುದು ಹೌದು; ಆದರೆ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿರುವುದರಿಂದ ಹೆಚ್ಚು ದಿನ ನಡೆಯದು ಎಂದು ಕೋಳಿ ಮಾರಾಟ ಮಳಿಗೆಯವರು  ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next