Advertisement

ಅಕ್ಟೋಬರ್‌ನಲ್ಲೇ 13 ಲಕ್ಷ ರೂ.ಗೂ ಮಿಕ್ಕಿ ನಷ್ಟ

08:14 PM Oct 17, 2021 | Team Udayavani |

ಕುಂದಾಪುರ: ಶಹೀನ್‌ ಚಂಡಮಾರುತ ಹಾಗೂ ವಾಯುಭಾರ ಕುಸಿತದಿಂದಾಗಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ – ಮಳೆಗೆ ಕುಂದಾಪುರ ತಾಲೂಕಿನ ಹಲವೆಡೆಗಳಲ್ಲಿ ಅಡಿಕೆ, ತೆಂಗಿನ ತೋಟ, ಭತ್ತ, ರಬ್ಬರ್‌ ಬೆಳೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಅಕ್ಟೋಬರ್‌ ತಿಂಗಳೊಂದರಲ್ಲಿಯೇ ಬರೋಬ್ಬರಿ 13 ಲಕ್ಷ ರೂ.ಗೂ ಮಿಕ್ಕಿ ನಷ್ಟ ಉಂಟಾಗಿದೆ.

Advertisement

ಅ.5ರಿಂದ ಮಳೆ ಮತ್ತೆ ಬಿರುಸು ಪಡೆದಿದ್ದು, ಅಂದಿನಿಂದ ಆಗಾಗ ಭಾರೀ ಮಳೆಯಾಗಿದ್ದರಿಂದ ಕುಂದಾಪುರ, ಬೈಂದೂರು ತಾಲೂಕಿನ ಹಲವೆಡೆಗಳಲ್ಲಿ ಕೃಷಿಗೆ ಹಾನಿಯಾಗಿದೆ.

ಅದರಲ್ಲೂ ಅಂಪಾರು ಗ್ರಾಮವೊಂದರಲ್ಲಿಯೇ 50ಕ್ಕೂ ಹೆಚ್ಚು ಕುಟುಂಬದ 6 ಸಾವಿರ ಅಡಿಕೆ ಮರ, ತೆಂಗಿನ ಮರಗಳಿಗೆ ಹಾನಿಯಾಗಿದ್ದು, ಇದನ್ನೇ ನಂಬಿಕೊಂಡಿದ್ದ ರೈತರಿಗೆ ಭಾರೀ ಸಂಕಷ್ಟ ತಂದೊಡ್ಡಿದೆ.

ಪರಿಹಾರಕ್ಕೆ 203 ಅರ್ಜಿ ಸಲ್ಲಿಕೆ
ಕಳೆದ ಅಕ್ಟೋಬರ್‌ ತಿಂಗಳಿನಿಂದ ಈವರೆಗೆ ಮಳೆಯಿಂದಾಗಿ ಕೃಷಿಗೆ ಹಾನಿಯಾದ ಬಗ್ಗೆ 203 ಮಂದಿ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಅಂಪಾರು ಗ್ರಾಮದಲ್ಲಿ 160 ಮಂದಿ ರೈತರು, ಕುಳುಂಜೆ ಗ್ರಾಮದಲ್ಲಿ 21 ಮಂದಿ, ಶಂಕರನಾರಾಯಣದಲ್ಲಿ 8 ಹಾಗೂ ಉಳ್ಳೂರು-74 ಗ್ರಾಮದಲ್ಲಿ 14 ಮಂದಿ ಸೇರಿದಂತೆ ಒಟ್ಟು 199 ಮಂದಿ ರೈತರ ಅಡಿಕೆ, ತೆಂಗು, ಗೇರು ಬೆಳೆ, ಇಬ್ಬರು ರೈತರ ಭತ್ತದ ಬೆಳೆಗೆ ಹಾಗೂ ಒಬ್ಬರ ರಬ್ಬರ್‌ ಬೆಳೆಗೆ ಹಾನಿಯಾಗಿದೆ. ಒಟ್ಟಾರೆ 13.28 ಲಕ್ಷ ರೂ. ನಷ್ಟ ಉಂಟಾಗಿದೆ.

ಅಧಿಕಾರಿಗಳ ಭೇಟಿ
ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಈಗಾಗಲೇ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ, ಹಿರಿಯ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 326 ಹೊಸ ಪ್ರಕರಣ ಪತ್ತೆ | 380 ಸೋಂಕಿತರು ಗುಣಮುಖ

ಜೀವನವೇ ಹೋದಂತಾಗಿದೆ
ಮನೆ ಮಕ್ಕಳಂತೆ ತೋಟವನ್ನು ಪೋಷಿಸಿದ್ದೆವು. ಆದರೆ ಈಗ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಮ್ಮ ಜೀವನವೇ ಹೋದಂತಾಗಿದೆ. ಸರಕಾರ ಕೊಡುವ ಪರಿಹಾರ ಮೊತ್ತದಲ್ಲಿ ತೋಟದಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲು ಕೂಡ ಸಾಕಾಗಲ್ಲ. ಅ ಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಪರಿಹಾರಕ್ಕೆ ಅಲೆದಾಟ ತಪ್ಪುವುದಿಲ್ಲ.
– ಸುಬ್ಬಣ್ಣ ಶೆಟ್ಟಿ ಆವರ್ಸೆಮನೆ,
ಹಿರಿಯ ಕೃಷಿಕ

ಗರಿಷ್ಠ ಪರಿಹಾರಕ್ಕೆ ಪ್ರಯತ್ನ
ಬೆಳೆ ಹಾನಿ ಆದ ರೈತರಿಗೆ 5 ಎಕರೆಗಿಂತ ಕಡಿಮೆ ಜಾಗದವರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೆಂಗು, ಅಡಿಕೆ, ಬಾಳೆ ಕೃಷಿ ಪುನಶ್ಚೇತನ ನೀಡಲಾಗುವುದು. 5 ಎಕರೆಗಿಂತ ಹೆಚ್ಚಿನವರಿಗೆ ತೋಟಗಾರಿಕಾ ಇಲಾಖೆಯ ಯೋಜನೆಯಡಿ ಪರಿಹಾರ ನೀಡಲಾಗುವುದು. ಈ ಬಗ್ಗೆ ಆದಷ್ಟು ಶೀಘ್ರ ಮತ್ತೂಮ್ಮೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ, ಸಮಗ್ರ ವಿವರ ಪಡೆದು, ಕ್ರಮಕೈಗೊಳ್ಳಲಾಗುವುದು.
– ಸಂಜೀವ ನಾಯ್ಕ, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ ಕುಂದಾಪುರ

ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
ಉಡುಪಿ: ಜಿಲ್ಲಾದ್ಯಂತ ರವಿವಾರ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ನಗರ ಹಾಗೂ ಗ್ರಾಮೀಣ ಭಾಗದ ವಿವಿಧೆಡೆಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಯಿತು.

ಅ.17ರ ಮುಂಜಾನೆ 8.30ರ ಹಿಂದಿನ 24 ಗಂಟೆಯಲ್ಲಿ ಉಡುಪಿ ತಾಲೂಕಿನಲ್ಲಿ 20.4 ಮಿ.ಮೀ., ಬ್ರಹ್ಮಾವರ 14 ಮಿ.ಮೀ., ಕಾಪು 41 ಮಿ.ಮೀ., ಬೈಂದೂರು 2 ಮಿ.ಮೀ., ಕಾರ್ಕಳ 10.9 ಮಿ.ಮೀ., ಹೆಬ್ರಿ 32.4 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 17.35 ಮಿ.ಮೀ ಮಳೆಯಾಗಿದೆ. ರವಿವಾರ ಬೆಳಗ್ಗೆ 9 ಗಂಟೆಯ ಬಳಿಕ ಭಾರೀ ಮಳೆ ಸುರಿದ ಕಾರಣ ಜನರು ಭಾರೀ ಸಂಕಷ್ಟ ಅನುಭವಿಸಿದರು. ಕೆಲವೆಡೆ ಸಿಡಿಲು, ಮಿಂಚಿನಿಂದ ವಿದ್ಯುತ್‌ ವ್ಯತ್ಯಯವಾಯಿತು. ನಗರ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಕ್ಕೆಲಗಳ ಚರಂಡಿಗಳು ತುಂಬಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿತ್ತು. ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next