ಮಹಾಲಿಂಗಪುರ: ಪಟ್ಟಣದಲ್ಲಿ ಸೆ.23ರ ಸೋಮವಾರ ರಾತ್ರಿ 9 ರಿಂದ 12ವರೆಗೆ ಹಾಗೂ ಸೆ.24ರ ಮಂಗಳವಾರ ಮಧ್ಯಾಹ್ನ 12 ರಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿ ಸುರಿದ ಮಳೆಯು ಪ್ರಸಕ್ತ ವರ್ಷದ ಮಳೆಗಳಲ್ಲಿಯೇ ಅತ್ಯುತ್ತಮ ಮಳೆಯಾಗಿದೆ.
ಸೆ.24ರ ಮಂಗಳವಾರ ಮಧ್ಯಾಹ್ನ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಪಟ್ಟಣದ ಎಲ್ಲಾ ಭಾಗದಲ್ಲಿನ ಚರಂಡಿಗಳು ತುಂಬಿ ಹರಿಯುತ್ತಿವೆ. ಪಟ್ಟಣದ ಹೊಲ-ಗದ್ದೆಗಳು ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಜನಜೀವನ ಅಸ್ತವ್ಯಸ್ತ: ನಿರಂತರ ಮಳೆಯಿಂದಾಗಿ ಎಲ್ಲಾ ರಸ್ತೆಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿವೆ. ಕೆಲವೆಡೆ ಚರಂಡಿ ತುಂಬಿ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ವ್ಯಾಪಾರಸ್ಥರ ಪರದಾಟ: ಕಳೆದ ಮಂಗಳವಾರ ಪ್ರಾರಂಭವಾದ ಮಹಾಲಿಂಗೇಶ್ವರ ಜಾತ್ರೆಯ ಅಂಗಡಿ ಮುಗ್ಗಟ್ಟುಗಳು, ಜೇಕ್, ಜೋಕಾಲಿ ಸೇರಿದಂತೆ ಮನರಂಜನೆಯ ಆಟಗಳಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮಂಗಳವಾರ ಸಂತೆ ಮಾಡುತ್ತಿರುವ ತರಕಾರಿ ಮತ್ತು ದಿನಸಿ ವ್ಯಾಪಾರಸ್ಥರು ಹಾಗೂ ಜಾತ್ರೆಯ ನಿಮಿತ್ತ ಆಗಮಿಸಿದ್ದ ವಿವಿಧ ಆಟಿಕೆ ಸಾಮಾನು, ಮನೆ ಬಳಕೆ ಸಾಮಗ್ರಿಗಳು, ಬಳೆ ಅಂಗಡಿ, ಸಿಹಿತಿಂಡಿಗಳ ಅಂಗಡಿಗಳು ಸೇರಿದಂತೆ ವಿವಿಧ ವ್ಯಾಪಾರಸ್ಥರಿಗೆ ಮಳೆಯಿಂದಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪ್ರತಿ ವರ್ಷವೂ ಮಹಾಲಿಂಗೇಶ್ವರ ಜಾತ್ರೆಗೆ ಮಳೆ ಬರುವುದು ಖಚಿತ. ಆದರೆ ಈ ವರ್ಷ ಜಾತ್ರೆ ಮುಗಿದ ನಂತರ ಭಾನುವಾರ ಪ್ರಾರಂಭವಾದ ಮಳೆ ಆ ನಂತರ ಪ್ರತಿನಿತ್ಯ ತಪ್ಪದೆ ಮಳೆಯಾಗುತ್ತಿದೆ. ಅದರಲ್ಲೂ ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ 12 ರಿಂದ ಇಲ್ಲಿವರೆಗೂ ನಿರಂತರವಾಗಿ ಸುರಿಯುತ್ತಿರುವ ಧಾರಕಾರ ಮಳೆ, ಇಳೆಯನ್ನು ತಂಪಾಗಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಬೈಕ್ ಗಳು ಜಲಾವೃತ- ವಾಹನ ಸವಾರರ ಪರದಾಟ: ಪಟ್ಟಣದ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯ ಮಧ್ಯೆಯಿರುವ ಬಸವ ವೃತ್ತದಲ್ಲಿ ರಸ್ತೆಯ ಮೇಲೆ 2 ಅಡಿಯಷ್ಟು ನೀರು ನಿಂತು, ರಸ್ತೆ ಪಕ್ಕದಲ್ಲಿ ನಿಲ್ಲಿಸಿರುವ ಬೈಕ್ ಗಳು ಸಂಪೂರ್ಣ ಜಲಾವೃತವಾಗಿದೆ. ಬಸವ ವೃತ್ತದಿಂದ ಎಪಿಎಂಸಿ ವರೆಗೆ ಚರಂಡಿ ಕಾಮಗಾರಿ ನಿಮಿತ್ತ ಚರಂಡಿಯನ್ನು ಅಗೆದಿರುವ ಕಾರಣ ನೀರು ಮುಂದೆ ಸರಾಗವಾಗಿ ಹೋಗದಿರುವ ಕಾರಣ ಮೊದಲಿನಕ್ಕಿಂತ ಜಾಸ್ತಿ ನೀರು ಬಸವ ವೃತ್ತದಲ್ಲಿ ನಿಂತ ಕಾರಣ ರಸ್ತೆಯು ಮಿನಿ ಕಾಲುವೆಯಂತಾಗಿ ವಾಹನ ಸವಾರರು, ಪಾದಚಾರಿಗಳು ರಸ್ತೆ ದಾಟಲು ಪರದಾಡುತ್ತಿದ್ದಾರೆ.