Advertisement

ಗದಗದಲ್ಲಿ ಮಳೆಯ ರೌದ್ರನರ್ತನ: ಸಾರ್ವಜನಿಕರು, ರೈತರು ಕಂಗಾಲು; ಮಹಿಳೆ ಬಲಿ

11:50 AM Sep 06, 2022 | Team Udayavani |

ಗದಗ: ಜಿಲ್ಲೆಯಲ್ಲಿ ಮಳೆರಾಯನ ರೌದ್ರನರ್ತನ ಮುಂದುವರೆದಿದ್ದು, ಸೋಮವಾರ ರಾತ್ರಿ ಸುರಿದ ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದೆ. ಹಳ್ಳದಲ್ಲಿ ಕೊಚ್ಚಿಹೋಗಿದ್ದ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

Advertisement

ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಸೋಮವಾರ ಸಂಜೆ ಹೊಲದಿಂದ ಮನೆಗೆ ವಾಪಸಾಗುವ ವೇಳೆ ಮಹಿಳೆಯೊಬ್ಬರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಮಂಗಳವಾರ ಬೆಳಿಗ್ಗೆ ಹಳ್ಳಿಕೇರಿ-ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಹಳ್ಳದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಹಳ್ಳಿಕೇರಿಯ ನಾಗಮ್ಮ ಯಂಕಪ್ಪ ಕವಲೂರು (48) ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆಯಿಂದ ಸೋಮವಾರ ರಾತ್ರಿಯಿಡಿ ಸಂಕಷ್ಟ ಅನುಭವಿಸಿದರು. ಬೆಟಗೇರಿ ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣ, ಅಂಬೇಡ್ಕರ್ ನಗರ, ಭಜಂತ್ರಿ ಓಣಿ, ನರಸಾಪೂರ, ಖಾದಿ ನಗರ, ಗದಗನ ಎಸ್.ಎಂ. ಕೃಷ್ಣ ನಗರ, ಗಂಗಿಮಡಿ ಸೇರಿ ವಿವಿಧೆಡೆ ಮನೆಗೆ ನೀರು ನುಗ್ಗಿದ ಪರಿಣಾಮ ದವಸ ಧಾನ್ಯಗಳು, ಬಟ್ಟೆಗಳು, ಪಿಠೋಪಕರಣಗಳು ಮಳೆಗೆ ಹಾನಿಯಾದವು. ರಾತ್ರಿಯಿಡಿ ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ಹರಸಾಹಸ ಪಡಬೇಕಾಯಿತು.

ಗದಗ ತಾಲೂಕಿನ ಮದಗಾನೂರ ಗ್ರಾಮದ ಬಳಿಯಿರುವ ಸವಳಹಳ್ಳ ಹಾಗೂ ಸಿಹಿಹಳ್ಳ ಉಕ್ಕಿ ಹರಿದು ಊರೊಳಗೆ ಹೊಕ್ಕ ಪರಿಣಾಮ ರಾತ್ರಿಯೆಲ್ಲ ಗ್ರಾಮಸ್ಥರು ಪರದಾಡುವಂತಾಗಿದೆ. ರೈತರು ಒಕ್ಕಲು ಮಾಡಿಟ್ಟಿದ್ದ ಧಾನ್ಯಗಳ ರಾಶಿಗಳೆಲ್ಲ ಹಾಳಾಗಿದ್ದು, ದಿನಬಳಕೆ ವಸ್ತುಗಳು ನೀರಲ್ಲಿ ಹೋಮ ಮಾಡಿದಂತಾದವು. ಒಂದೆಡೆ ಜಮೀನಿನಲ್ಲಿ ಬೆಳೆದ ಈರುಳ್ಳಿ, ಶೇಂಗಾ, ಮೆಣಸಿನಕಾಯಿ ಹಳ್ಳದ ರಭಸಕ್ಕೆ ಕೊಚ್ಚಿ ಹೋದರೆ, ಮತ್ತೊಂದೆಡೆ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟ ಹೊಟ್ಟು-ಮೇವಿನ ಬಣವೆಗಳೆಲ್ಲ ನೀರಲ್ಲಿ ತೇಲಾಡಿದವು.

ಮಳೆಗೆ ಕೊಚ್ಚಿ ಹೋದ ಅಟೋರಿಕ್ಷಾ: ಗದಗ ತಾಲೂಕಿನ ಹುಲಕೋಟಿ ಗ್ರಾಮದ ಹರ್ತಿ ರಸ್ತೆ ಮಾರ್ಗದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಯತ್ನಿಸಿದ ಅಟೋರಿಕ್ಷಾ ಕೊಚ್ಚಿಕೊಂಡು ಹೋಗಿದ್ದು, ಅದೃಷ್ಟವಶಾತ್ ಅಟೋದಲ್ಲಿದ್ದ ಚಾಲಕ ಕರಿಯಪ್ಪ ಕರಿಯಣ್ಣವರ, ಮಗ ಪ್ರವೀಣ, ಒಂದು ವರ್ಷದ ಮಗು ಸಾನ್ವಿ ಹಾಗೂ ಪ್ರಯಾಣಿಕ ಗುರಪ್ಪ ಕೊಂಡಿಕೊಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಚ್ಚಿಹೋದ ಅಟೋರಿಕ್ಷಾ ಸುಮಾರು 300 ಅಡಿ ದೂರದಲ್ಲಿ ಗಿಡಕಂಠಿಗಳ ಮಧ್ಯೆ ಸಿಲುಕಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next