Advertisement

ಸಿಡಿಲು, ಮಳೆ, ಪ್ರವಾಹ, ಭೂಕುಸಿತ…ಹಲವು ರಾಜ್ಯಗಳಲ್ಲಿ ವರುಣನ ಅಬ್ಬರ

10:41 PM Jul 06, 2022 | Team Udayavani |

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವರುಣಾರ್ಭಟ ತೀವ್ರಗೊಂಡಿದ್ದು, ಮಳೆ ಸಂಬಂಧಿ ಅನಾಹುತಗಳು ಹಲವರನ್ನು ಬಲಿಪಡೆದಿದೆ. ಮಹಾರಾಷ್ಟ್ರ, ತೆಲಂಗಾಣ, ಗುಜರಾತ್‌ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೆ, ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಮಳೆಯೊಂದಿಗೆ ಭೂಕುಸಿತವೂ ಸೇರಿ ಅವಘಡಗಳು ಸಂಭವಿಸಿವೆ. ಉತ್ತರಪ್ರದೇಶ, ರಾಜಸ್ಥಾನಗಳಲ್ಲಿ ಸಿಡಿಲಬ್ಬರಕ್ಕೆ 8 ಮಂದಿ ಬಲಿಯಾಗಿದ್ದಾರೆ. ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.

Advertisement

ಮಹಾರಾಷ್ಟ್ರ
ಸತತ 2 ದಿನಗಳಿಂದ ಸುರಿಯುತ್ತಿರುವ ಮಳೆಯು ಮಹಾರಾಷ್ಟ್ರವನ್ನು ಹೈರಾಣಾಗಿಸಿದೆ. ಬುಧವಾರದಿಂದ 3 ದಿನಗಳ ಕಾಲ ಮುಂಬೈಗೆ ರೆಡ್‌ ಅಲಟ್‌ ಘೋಷಿಸಲಾಗಿದೆ. ರಸ್ತೆಗಳೆಲ್ಲ ಜಲಾವೃತವಾಗಿದ್ದು, ಹಳಿಗಳಲ್ಲೂ ನೀರು ನಿಂತಿರುವ ಕಾರಣ ಬಸ್‌, ರೈಲು ಸೇವೆಯಲ್ಲಿ ವ್ಯತ್ಯಯವಾಗಿದೆ. ಟ್ರಾಫಿಕ್‌ ಜಾಮ್‌ನಿಂದ ಜನಸಂಚಾರಕ್ಕೂ ಅಡ್ಡಿಯಾಗಿದೆ. ಚಾಲ್‌ ಪ್ರದೇಶದ ಸಮೀಪ ಭೂಕುಸಿತ ಸಂಭವಿಸಿ ಮೂವರು ಗಾಯಗೊಂಡಿದ್ದಾರೆ. ಸತಾರಾ ಜಿಲ್ಲೆಯ ಪ್ರತಾಪ್‌ಗ್ಡ ಕೋಟೆಗೆ ತೆರಳುವ ರಸ್ತೆಯಲ್ಲೂ ಭೂಕುಸಿತ ಉಂಟಾಗಿದೆ. ಪಾಲ^ರ್‌ ಜಿಲ್ಲೆಯಲ್ಲಿ ಸೇತುವೆಯೊಂದು ಮುಳುಗಡೆಯಾಗಿದ್ದು, ಸುಮಾರು 12 ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ದಕ್ಷಿಣ ಕೊಂಕಣ, ಗೋವಾ ಮತ್ತು ಮಹಾರಾಷ್ಟ್ರದ ದಕ್ಷಿಣ ಕೇಂದ್ರ ಭಾಗದಲ್ಲಿ 8ರವರೆಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಉತ್ತರ ಕೊಂಕಣ ಪ್ರದೇಶಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ.

ಗುಜರಾತ್‌

ರಾಜ್ಯದ ಗಿರ್‌ ಸೋಮನಾಥ್‌ ಮತ್ತು ಜುನಾಗಡ ಜಿಲ್ಲೆಗಳ ಹಲವು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಲ್ಲಿನ ಸೂತ್ರಪದ ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನದವರೆಗೆ 30 ಗಂಟೆಗಳಲ್ಲಿ 300 ಮಿ.ಮೀ. ಮಳೆಯಾಗಿದೆ. ವಾಯುಭಾರ ಕುಸಿತದಿಂದಾಗಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗುಜರಾತ್‌ನ ಪೋರಬಂದರ್‌ ಬಳಿಯ ಸಮುದ್ರದಲ್ಲಿ ಬುಧವಾರ ಗ್ಲೋಬಲ್‌ ಕಿಂಗ್‌-1 ಹೆಸರಿನ ಸರಕು ಹಡಗು ಪ್ರವಾಹದ ಹೊಡೆತಕ್ಕೆ ಮುಳುಗಲಾರಂಭಿಸಿದ್ದು, ಕೂಡಲೇ ಎಚ್ಚೆತ್ತುಕೊಂಡ ಕರಾವಳಿ ರಕ್ಷಣಾ ಸಿಬ್ಬಂದಿ, ಹಡಗಿನಲ್ಲಿದ್ದ ಎಲ್ಲ 22 ಮಂದಿಯನ್ನು ರಕ್ಷಿಸಿದ್ದಾರೆ.

ಉತ್ತರಾಖಂಡ
ಹಲವು ಪ್ರದೇಶಗಳಲ್ಲಿ ಗುಡ್ಡ ಕುಸಿತ, ಭೂಕುಸಿತದ ಪ್ರಕರಣಗಳು ವರದಿಯಾಗಿವೆ. ಸಿರೋಗಾಬಾದ್‌ನಲ್ಲಿ ಬದ್ರಿನಾಥ ಹೆದ್ದಾರಿಯ ಮೇಲೆ ಮಣ್ಣು ಕುಸಿದ ಕಾರಣ, ಸಂಚಾರಕ್ಕೆ ಅಡ್ಡಿಯಾಗಿದೆ. ಶ್ರೀನಗರ ಮತ್ತು ರುದ್ರಪ್ರಯಾಗ್‌ನ ನಡುವೆ ಬರುವ ಈ ಪ್ರದೇಶದಲ್ಲಿ ಪ್ರತಿ ವರ್ಷವೂ ಭೂಕುಸಿತ ಸಂಭವಿಸುತ್ತಲೇ ಇರುತ್ತದೆ. ಡೆಹ್ರಾಡೂನ್‌, ಬಾಗೇಶ್ವರ್‌ ಸೇರಿದಂತೆ ರಾಜ್ಯಾದ್ಯಂತ ವಿಪರೀತ ಮಳೆಯಾಗುತ್ತಿದೆ. ಭಾರತ-ನೇಪಾಳ ಗಡಿ ಪ್ರದೇಶವಾದ ಜೂಲಾಘಾಟ್‌ನಲ್ಲಿ 200 ವರ್ಷಗಳಷ್ಟು ಹಳೆಯ ಸೇತುವೆಯಲ್ಲಿ ಬಿರುಕು ಮೂಡಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 1830ರಲ್ಲಿ ಬ್ರಿಟಿಷರು ನಿರ್ಮಿಸಿದ್ದ 40 ಮೀ. ಉದ್ದದ, 2.5 ಮೀ. ಅಗಲದ ಈ ಸೇತುವೆಯು ಭಾರತ ಮತ್ತು ನೇಪಾಳದ ನಡುವೆ ಸರಕು ಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು.

ರಾಜಸ್ಥಾನ
ಇಲ್ಲಿನ ಬುಂದಿ ಜಿಲ್ಲೆಯಲ್ಲಿ ಬುಧವಾರ ಸಿಡಿಲು ಬಡಿದು ಪತಿ-ಪತ್ನಿ ಸೇರಿ ಮೂವರು ಸಾವಿಗೀಡಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರ್ಘ‌ಟನೆ ಸಂಭವಿಸಿದೆ.ಹಾಗೆಯೇ ಮಂಗಳವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಅಮರನಾಥ ಯಾತ್ರೆ ಬುಧವಾರ ಪುನಾರಂಭಗೊಂಡಿದೆ.

ಉತ್ತರಪ್ರದೇಶ
ಇಲ್ಲಿನ ಹಮೀರ್‌ಪುರ ಮತ್ತು ಜಲೌನ್‌ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಬುಧವಾರ 5 ಮಂದಿ ಮೃತಪಟ್ಟರೆ, ಇಬ್ಬರು ಗಾಯಗೊಂಡಿದ್ದಾರೆ.

Advertisement

121 ವರ್ಷಗಳಲ್ಲೇ ಗರಿಷ್ಠ ಮಳೆ
ಅಸ್ಸಾಂ ಮತ್ತು ಮೇಘಾಲಯವು ಜೂನ್‌ ತಿಂಗಳ ಮಳೆಯಲ್ಲಿ ದಾಖಲೆ ಬರೆದಿವೆ. ಇಲ್ಲಿ ಜೂನ್‌ನಲ್ಲಿ 858.1 ಮಿ.ಮೀ. ಮಳೆಯಾಗಿದ್ದು, ಇದು ಕಳೆದ 121 ವರ್ಷಗಳಲ್ಲೇ ಗರಿಷ್ಠ ಎಂದು ಹೇಳಲಾಗಿದೆ. 1966ರಲ್ಲಿ 789.5 ಮಿ.ಮೀ. ಮಳೆಯಾಗಿದ್ದೇ ಈ ಹಿಂದಿನ ದಾಖಲೆಯಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜತೆಗೆ, ಮುಂಗಾರಿನ ಮೊದಲ ತಿಂಗಳಲ್ಲಿ ಒಟ್ಟಾರೆ 313 ಮಂದಿ ಸಾವಿಗೀಡಾಗಿದ್ದು, 72 ಮಂದಿ ಗಾಯಗೊಂಡಿದ್ದಾರೆ, 50 ಮಂದಿ ನಾಪತ್ತೆಯಾಗಿದ್ದಾರೆ, 72 ಸಾವಿರ ಜಾನುವಾರುಗಳು ಕೊಚ್ಚಿಹೋಗಿವೆ ಎಂದೂ ಇಲಾಖೆಯ ವರದಿ ಹೇಳಿದೆ. ಹೆಚ್ಚಿನ ಸಾವು-ನೋವು ಸಂಭವಿಸಿರುವುದು ಅಸ್ಸಾಂ, ಅರುಣಾಚಲ, ಮೇಘಾಲಯ ಮತ್ತು ಮಣಿಪುರದಲ್ಲಿ ಎಂದೂ ತಿಳಿಸಲಾಗಿದೆ.

ಪ್ರಮಾಣಕ್ಕೆ ತೆರಳುತ್ತಿದ್ದಾಗ ಸಾವು!
ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ನೂತನವಾಗಿ ಆಯ್ಕೆಯಾ ಗಿದ್ದ ಗ್ರಾಮದ ಮುಖ್ಯಸ್ಥರೊಬ್ಬರು ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಬಂಡೆಯೊಂದು ಕಾರಿನ ಮೇಲೆ ಉರುಳಿಬಿದ್ದಿದೆ. ಪರಿಣಾಮ, ಗ್ರಾಮ ಪ್ರಧಾನ್‌ ಪ್ರತಾಪ್‌ ಸಿಂಗ್‌(50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರೆ ಮೂವರಿಗೆ ಗಾಯಗಳಾಗಿವೆ.

ಪಾಕ್‌ನಲ್ಲಿ ದಿಢೀರ್‌ ಪ್ರವಾಹಕ್ಕೆ 25 ಬಲಿ
ಬುಧವಾರ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದ ಉಂಟಾದ ದಿಢೀರ್‌ ಪ್ರವಾಹವು 25 ಮಂದಿಯನ್ನು ಬಲಿಪಡೆದಿದೆ. ಈ ಪೈಕಿ 6 ಮಹಿಳೆಯರು ಒಂದೇ ಕುಟುಂಬಕ್ಕೆ ಸೇರಿದವರು. ಕ್ವೆಟ್ಟಾ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಮಣ್ಣಿನ ಮನೆಗಳು ನೆಲಸಮವಾಗಿವೆ. ಬಲೂಚಿಸ್ತಾನ ಸರ್ಕಾರವು ಕ್ವೆಟ್ಟಾ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.

ಮಳೆ, ಪ್ರವಾಹದಿಂದಾಗಿ ಅಸ್ಸಾಂ ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು ನಿರಂತರ ವಾಗಿ ಅಸ್ಸಾಂ ಸಿಎಂ ಜತೆ ಸಂಪರ್ಕದಲ್ಲಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಪ್ರವಾಹಸಂತ್ರಸ್ತರಿಗೆ ಸೂಕ್ತ ನೆರವು ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ.
ನರೇಂದ್ರ ಮೋದಿ, ಪ್ರಧಾನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next