Advertisement
ನೆಲ್ಯಾಡಿ: ಗಾಳಿ-ಮಳೆ; ವ್ಯಾಪಕ ಹಾನಿನೆಲ್ಯಾಡಿ ಪರಿಸರದಲ್ಲಿ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಮತ್ತು ಸುರಿದ ಮಳೆಯಿಂದ ವ್ಯಾಪಕ ಹಾನಿ ಉಂಟಾಗಿದೆ. ಪೆರಿಯಶಾಂತಿಯಲ್ಲಿ ರಸ್ತೆಗೆ ಮರ ಅಡ್ಡಬಿದ್ದ ಪರಿಣಾಮ ಸುಮಾರು 3 ತಾಸುಗಳ ಕಾಲ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿತ್ತು. ಅಲ್ಲದೆ ವಿದ್ಯುತ್ ತಂತಿಗಳ ಮೇಲೆಯೇ ಮರಬಿದ್ದ ಪರಿಣಾಮ ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯವಾಗಿದೆ.
Related Articles
ಪೆರಿಯಶಾಂತಿ – ಕೊಕ್ಕಡ ರಸ್ತೆಯ ಪೊಟ್ಲಡ್ಕದಲ್ಲಿ ರಸ್ತೆಗೆ ಮರಬಿದ್ದ ಪರಿಣಾಮ ಸುಮಾರು 3 ತಾಸು ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ಧರ್ಮಸ್ಥಳ- ಸುಬ್ರಹ್ಮಣ್ಯ ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಇತರ ವಾಹನಗಳು ಪುತ್ಯೆ ಮೂಲಕ ಬದಲಿ ರಸ್ತೆಯಲ್ಲಿ ಸಂಚರಿಸಿವೆ. ಬಳಿಕ ಸಾರ್ವಜನಿಕರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬಂದಿ ಮರ ತೆರವುಗೊಳಿಸಿದರು.
Advertisement
ವಿದ್ಯುತ್ ವ್ಯತ್ಯಯ
ಮಾದೇರಿ ಸಬ್‌ಸ್ಟೇಶನ್‌ನಿಂದ ವಿದ್ಯುತ್ ಸರಬರಾಜು ಆಗುವ ಮಾರ್ಗದ ಕೊಲ್ಯೊಟ್ಟಿನಲ್ಲಿ ವಿದ್ಯುತ್ ತಂತಿ ಮೇಲೆಯೇ ಮರವೊಂದು ಮುರಿದುಬಿದ್ದಿದ್ದು ವಿದ್ಯುತ್ ತಂತಿ ತುಂಡಾಗಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ ಎಂದು ವರದಿಯಾಗಿದೆ. ಗೋಳಿತ್ತೂಟ್ಟು ಅಂಬೇಡಲಿನಲ್ಲಿ ವಿದ್ಯುತ್ ತಂತಿಯ ಮೇಲೆಯೇ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿದ್ದು ವಿದ್ಯುತ್ ಸಂಚಾರದಲ್ಲಿ ಅಡಚಣೆಯಾಗಿದೆ. ಕಡಬದಲ್ಲಿ ಹಾನಿ: ಬಲ್ಯ ಗ್ರಾಮದ ಪನ್ಯಾಡಿ ಪ್ರದೇಶದಲ್ಲಿ ಸೋಮವಾರ ಸಂಜೆ ಗಾಳಿ ಮಳೆಗೆ ತೆಂಗು ಅಡಿಕೆ ಹಾಗೂ ಇನ್ನಿತರ ಮರಗಳು ಉರುಳಿಬಿದ್ದು ಅಪಾರ ಹಾನಿಯಾಗಿದೆ. ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿದೆ. ಉಳಿದಂತೆ ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಮಾಣಿ, ಪುತ್ತೂರು, ಸವಣೂರು, ಬೆಳ್ಳಾರೆ, ಕನ್ಯಾಡಿ, ಉಜಿರೆ, ಮಡಂತ್ಯಾರು, ಬೆಳ್ತಂಗಡಿ, ಕಾರ್ಕಳ, ಪೂಂಜಾಲಕಟ್ಟೆ, ವಿಟ್ಲ, ಉಡುಪಿಯ ಹಾಲಾಡಿ, ಅಮಾಸೆಬೈಲು, ಸಿದ್ದಾಪುರ, ಮುಳ್ಳೇರಿಯ, ಕಾಸರಗೋಡು ಸೇರಿದಂತೆ ಸುತ್ತಮುತ್ತಲಿನ ಪರಿಸರ ದಲ್ಲಿ ಮಳೆಯಾದ ವರದಿಯಾಗಿದೆ. ಅಡ್ಯನಡ್ಕದಲ್ಲಿ ಅಂಗಡಿಗೆ ಹಾನಿ
ವಿಟ್ಲ ಆಸುಪಾಸಿನಲ್ಲಿ ಸೋಮವಾರ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಭಾರೀ ಮಳೆಯಿಂದ ಅಲ್ಲಲ್ಲಿ ಹಾನಿ ಸಂಭವಿಸಿದೆ. ಅಡ್ಯನಡ್ಕ ಪೇಟೆಯಲ್ಲಿ ಬಿರುಗಾಳಿಗೆ ಅಂಗಡಿಯ ಮೇಲ್ಛಾವಣಿ ಹಾರಿಹೋಗಿ ಕಾಗದ ಪತ್ರ ಸೇರಿ ಮಹತ್ವದ ದಾಖಲೆಗಳು ಒದ್ದೆಮುದ್ದೆಯಾದವು, ಕೇಪು ಗ್ರಾ.ಪಂ. ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿದ್ದ ಭಾಸ್ಕರ್ ಶೆಟ್ಟಿ ಅವರ ಅಂಗಡಿಯ ಛಾವಣಿಯ ಶೀಟ್ ಹಾರಿ ಹೋಗಿದೆ. ಕೊಳ್ನಾಡು ಗ್ರಾಮದ ಮಾದಕಟ್ಟೆ ಶಾಲಾ ಬಳಿಯ ವಿದ್ಯುತ್ ಪರಿವರ್ತಕಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಇದರಿಂದ ಆಸುಪಾಸಿನಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಚಂದಳಿಕೆ ನಿಡ್ಯ ಕೃಷ್ಣಪ್ಪ ಆಚಾರ್ ಅವರ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕಾಸರಗೋಡು: ಅಲ್ಲಲ್ಲಿ ಮಳೆ; ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ ಸೋಮವಾರ ಸಂಜೆ 4.45ರಿಂದ ಕೆಲವೆಡೆ ಸುಮಾರು ಒಂದು ತಾಸು ಕಾಲ ಮಳೆಯಾಗಿದ್ದು, ವ್ಯಾಪಕ ಹಾನಿ ಉಂಟು ಮಾಡಿದೆ. ಕಾಸರಗೋಡು ನಗರದಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯ ವಿವಿಧೆಡೆ ಇನ್ನೂ ಕೆಲವು ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ನೀಲೇಶ್ವರ ವೆಸ್ಟ್ ಎಳೇರಿಯ ಪುಂಗಚಾಲ್ ಚಿರಕಯದಲ್ಲಿ ಸಿಡಿಲು ಬಡಿದು ಪಿ.ವಿ. ಶೋಭಾ ಅವರ ಮನೆ ಹಾನಿಗೀಡಾಗಿದೆ. ಮನೆಯಲ್ಲಿದ್ದ ಪ್ಲಸ್ ಟು ವಿದ್ಯಾರ್ಥಿ ಅರ್ಜುನನ್ (18) ಅವರಿಗೆ ವಿದ್ಯುತ್ ಆಘಾತ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತಳಂಗರೆ ತೆರುವತ್ತ ಕೋಯಾಸ್ ಲೈನ್‌ನಲ್ಲಿ ಮನೆಯೊಂದು ಹಾನಿಗೀಡಾಗಿದೆ. ಸಿಡಿಲು ಬಡಿದು ಓರ್ವ ಸಾವು
ಸವಣೂರು: ಸೋಮವಾರ ಸುರಿದ ಸಿಡಿಲು ಮತ್ತು ಗಾಳಿ ಸಹಿತ ಮಳೆಗೆ ಓರ್ವ ಬಲಿಯಾಗಿ, ಇಬ್ಬರು ಗಾಯಗೊಂಡ ಘಟನೆ ಸವಣೂರು ಸಮೀಪದ ಪುಣcಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಪುಣcಪ್ಪಾಡಿ ಗ್ರಾಮದ ನೆಕ್ಕಿ ನಿವಾಸಿ ಕೇಪು ಎಂಬವರ ಪುತ್ರ ಧನಂಜಯ (36) ಮೃತಪಟ್ಟ ಯುವಕ. ಧನಂಜಯ ಅವರು ಅಂಗವಿಕಲರಾಗಿದ್ದು, ಮನೆಯಲ್ಲೇ ಇದ್ದರು. ಸಂಜೆ 4.30ಕ್ಕೆ ಮನೆ ಹಾಗೂ ಸಮೀಪದ ತೆಂಗಿನ ಮರಕ್ಕೆ ಸಿಡಿಲು ಬಡಿದು ಅವರು ಆಘಾತಕ್ಕೆ ಈಡಾಗಿ ಈ ಘಟನೆ ನಡೆದಿದೆ. ಧನಂಜಯ ಅವರ ಅಕ್ಕ ಗೀತಾ, ದೊಡ್ಡಪ್ಪ ಕುಂಡ ಅವರಿಗೂ ಸಿಡಿಲಿನಿಂದ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಧನಂಜಯ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಕಾರು ಜಖಂ
ಸವಣೂರು ಸಮೀಪದ ಮೋನು ಎಂಬವರ ಮನೆ ಸಮೀಪ ಗಾಳಿಯಿಂದ ವಿದ್ಯುತ್ ಕಂಬ ಮುರಿದು ಕಾರೊಂದು ಜಖಂಗೊಂಡಿದೆ. ಪುತ್ತೂರು: 5 ಸೆಂ.ಮೀ. ಮಳೆ
ಸೋಮವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಪುತ್ತೂರು, ಭಾಗಮಂಡಲ ಮತ್ತು ನಾಪೋಕ್ಲುವಿನಲ್ಲಿ 5 ಸೆಂ.ಮೀ.ಗಳ ಗರಿಷ್ಠ ಮಳೆಯಾಗಿದೆ. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಸುರಿದ ಮಳೆ ವಿವರ: ಕೊಟ್ಟೆಗೆಹಾರ, ಜಯಪುರ, ಬಾಳೆಹೊನ್ನೂರು 3 ಸೆಂ.ಮೀ., ಧರ್ಮಸ್ಥಳ, ಬೈಲಹೊಂಗಲ, ಶೃಂಗೇರಿ, ಮಾಗಡಿ 2 ಸೆಂ.ಮೀ. ಮತ್ತು ಸೋಮವಾರಪೇಟೆ, ಕಮ್ಮರಡಿ, ಅಜ್ಜಂಪುರ, ಬಸರಾಳು, ಶಾಂತೆಬೆನ್ನೂರು 1 ಸೆಂ.ಮೀ. ಮಳೆಯಾಗಿದೆ. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 36.6 ಡಿ.ಸೆ. ತಾಪಮಾನ ದಾಖಲಾದರೆ, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರಾಜ್ಯದಲ್ಲಿಯೇ ಕನಿಷ್ಠ 18.8 ಡಿ.ಸೆ. ಉಷ್ಣತೆ ದಾಖಲಾಗಿದೆ. ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ವಿವಿಧೆಡೆ ಮತ್ತು ಕರಾವಳಿಯ ಒಂದೆರಡು ಕಡೆ ಗುಡುಗು ಸಹಿತ ಮಳೆಯಾಗುವ ಸಂಭವ ಇದೆ. ಆ ಬಳಿಕ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.