ಧಾರವಾಡ: ಧೋ ಎಂದು ಸುರಿಯುವ ಮಳೆ.. ಸೋ ಎಂದು ಬೀಸುವ ಬಿರುಗಾಳಿ.. ಸದ್ಯಕ್ಕೆ ಇವರಿಗೆ ತಾಡಪತ್ರಿಗಳೇ ಮನೆಗಳು.. ದುಡಿಯಲು ಗುಳೇ ಬಂದರೂ ತಪ್ಪುತ್ತಿಲ್ಲ ಇವರ ಬಾಳಿನ ಗೋಳು.. ಒಟ್ಟಿನಲ್ಲಿ ಮಳೆರಾಯನಿಗೆ ಹಿಡಿಶಾಪ..ಇವರ ಬದುಕು ಅಯ್ಯೋ ಪಾಪ.
ಹೌದು, ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದು ವರುಣನ ಆರ್ಭಟದಲ್ಲಿ ಸಿಲುಕಿ ಬದುಕುತ್ತಿರುವುದು ಒಂದು ಕಡೆಯಾದರೆ, 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತ ಕಬ್ಬನ್ನು ಕಟಾವು ಮಾಡದ ಸ್ಥಿತಿನಿರ್ಮಾಣವಾಗಿದ್ದು ಕಿತ್ತೂರು ಕರ್ನಾಟಕ ಭಾಗದ ಕಬ್ಬು ಬೆಳೆಗಾರರು ಮಳೆಗೆ ಹಿಡಿಶಾಪ ಹಾಕುವಂತಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಮಹಾರಾಷ್ಟ್ರದ ನಾಗ್ಪುರ, ಔರಂಗಾಬಾದ್, ಸತಾರಾ, ಮರಾಠಾವಾಡ ಪ್ರಾಂತ್ಯಗಳಿಂದ ದಸರಾ-ದೀಪಾವಳಿ ಸಮಯಕ್ಕೆ ಕಬ್ಬು ಕಟಾವು ಗ್ಯಾಂಗ್‌ಗಳು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬಂದು ಬಿಡಾರ ಹೂಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಭಾಗದಲ್ಲಿ ಪ್ರತಿವರ್ಷ ಅಕ್ಟೋಬರ್‌ನಿಂದ ಆರು ತಿಂಗಳ ಕಾಲ ಕಬ್ಬು ಕಟಾವು ಮಾಡುವ ಕೂಲಿ ಅರಸಿ ಇಲ್ಲಿಯೇ ಉಳಿದು ದುಡಿಮೆ ಮಾಡುತ್ತವೆ. ದೊಡ್ಡ ದೊಡ್ಡ ಲಾರಿ ಮತ್ತು ಟ್ರಾಕ್ಟರ್‌ಗಳಲ್ಲಿಯೇಕುಟುಂಬ ಪರಿವಾರದೊಡನೆ ದುಡಿಯಲು ಬರುವ ಇವರಿಗೆ ಈ ವರ್ಷದ ಮಳೆ ಛಡಿ ಏಟು ಕೊಟ್ಟಿದೆ.
ಕೂಲಿ ಮೈಮೇಲೆ: ಅಕಾಲಿಕ ಮಳೆ ಆರ್ಭಟ ಈ ಕೂಲಿ ಕುಟುಂಬಗಳನ್ನುಕಂಗಾಲು ಮಾಡಿದ್ದು, ಸಣ್ಣ ಸಣ್ಣ ಮಕ್ಕಳೊಂದಿಗೆ ಸುರಿಯುವ ಮಳೆಯಲ್ಲಿ ಬದುಕಿದ್ದಾರೆ. ಕೇವಲ ಹತ್ತು ಅಡಿಯಲ್ಲಿ ತಾಡಪತ್ರಿಗಳ ಟೆಂಟ್‌ಗಳನ್ನು ಹಾಕಿಕೊಂಡು ಬದುಕುತ್ತಿರುವ ಈ ಕುಟುಂಬಗಳು ಸದ್ಯಕ್ಕೆ ತಮ್ಮ ಕೈಯಿಂದಲೇ ಹಣ ಹಾಕಿಕೊಂಡು ಇಲ್ಲಿ ಜೀವನ ನಡೆಸುತ್ತಿದ್ದಾರೆ. ಕಬ್ಬು ಕಟಾವು ಆರಂಭಗೊಂಡರೆ ರೈತರು ಲಾರಿಗಳಿಗೆ ಎಂಟ್ರಿ ಹಣ ಕೊಡುತ್ತಾರೆ. ಈ ಹಣದಿಂದಲೇ ಜೀವನಾವಶ್ಯಕ ವಸ್ತುಗಳನ್ನು ಕೊಳ್ಳುತ್ತಾರೆ. ಆದರೆ ಇದೀಗ ಮಳೆಯಿಂದಾಗಿ ಕಬ್ಬು ಕಟಾವು ವಿಳಂಬವಾಗಿದ್ದು, ಕಳೆದ 15 ದಿನಗಳಿಂದ ಕೂಲಿಯೂ ಇಲ್ಲದೇ ಇತ್ತ ಹಣವೂ ಇಲ್ಲದೆಪರದಾಡುತ್ತಿದ್ದಾರೆ.
ಕಬ್ಬು ಬೆಳೆಗಾರರಿಗೂ ನಷ್ಟ: ಕಿತ್ತೂರು ಕರ್ನಾಟಕ ಭಾಗದಲ್ಲಿ ಮಳೆಯಿಂದಾಗಿ ಸದ್ಯಕ್ಕೆ ಇನ್ನೂ 15 ದಿನಗಳ ಕಾಲವಾದರೂ ಕಬ್ಬು ಕಟಾವು ಮಾಡುವಂತಿಲ್ಲ. ಕಬ್ಬಿನ ಗದ್ದೆಗಳಲ್ಲಿ ಒಂದೆರಡು ಅಡಿಯಷ್ಟು ನೀರು ಶೇಖರಣೆಯಾಗಿದ್ದು, ಸತತ ಬಿಸಿಲು ಬಿದ್ದರೂ ಇನ್ನು ಎರಡು ವಾರಗಳ ಕಾಲವಾದರೂ ಭೂಮಿ ಒಣಗದ ಸ್ಥಿತಿ ತಲುಪಿದೆ. ಕಟಾವು ಮಾಡಿದರೂ ಅದನ್ನು ಸಾಗಿಸಲು ರೈತರ ಹೊಲಗಳಲ್ಲಿ ಲಾರಿ ಅಥವಾ ಟ್ರಾಕ್ಟರ್‌ಗಳು ಚಲಿಸದಷ್ಟು ಕೆಸರು ತುಂಬಿಕೊಂಡಿದೆ.
ಹೀಗಾಗಿ ರೈತರು ಕೂಡ ಕೊಂಚ ಕಂಗಾಲಾಗಿದ್ದಾರೆ. ಮಳೆ ಹೀಗೆ ಮುಂದುವರಿದರೆ ಕಬ್ಬಿನ ಕಾರ್ಖಾನೆಗಳಿಗೆ ನಂತರ ಒಮ್ಮೆ ಅಧಿಕ ಕಬ್ಬು ನುರಿಸುವ ಒತ್ತಡ ಬೀಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ದಸರಾ ಮರುದಿನಂದಲೇ ಕಿತ್ತೂರು ಕರ್ನಾಟಕ ಭಾಗದ ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿನ ಕಬ್ಬು ಕಟಾವು ಪ್ರತಿವರ್ಷ ಆರಂಭಗೊಳ್ಳುತ್ತದೆ. ಆದರೆ ಈ ವರ್ಷದ ಅಕಾಲಿಕ ಮಳೆಯು ಭತ್ತ ಮತ್ತು ಕಬ್ಬು ಎರಡನ್ನು ನೆಲಕ್ಕುರುಳಿಸಿದೆ.
ವರ್ಷ ಭತ್ತ, ಸೋಯಾಬಿನ್, ಗೋವಿನಜೋಳವಂತೂ ಮಳೆಯಿಂದಾಗಿ ಹಾಳಾಗಿ ಹೋದವು. ಇದೀಗ ಕಬ್ಬಿನ ಬೆಳೆ ಒಂದಿಷ್ಟು ಉಳಿದಿತ್ತು. ಈ ಮಳೆ ಅದಕ್ಕೂ ಕಲ್ಲು ಹಾಕಿ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಕಬ್ಬು ಬೆಳೆಹಾನಿಗೂ ಸರ್ಕಾರ ಪರಿಹಾರ ಕೊಡಬೇಕು.
-ಶಿವಪ್ಪ ಬಡಿಗೇರ, ರೈತ ಮುಖಂಡ
-ಬಸವರಾಜ ಹೊಂಗಲ್