ಹೆಬ್ರಿ: ಕರಾವಳಿ, ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸೀತಾನದಿ ನೀರು ರಸ್ತೆಯ ಮೇಲೆ ಹರಿದ ಹಿನ್ನಲೆಯಲ್ಲಿ ಶಿವಮೊಗ್ಗ- ಉಡುಪಿ ರಸ್ತೆ ಸಂಪರ್ಕ ಕಡಿತವಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಉಡುಪಿ ಮತ್ತು ದಕ್ಷಿಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೆಲವೊಂದು ತುತು೯ ವಾಹನಗಳು ಆತಂಕದಲ್ಲಿ ನೀರಿನ ಮೇಲಿಂದ ಪ್ರಯಾಣ ಮುಂದುವರಿಸಿದರೆ, ಹೆಚ್ಚಿನ ಆಗುಂಬೆಗೆ ಹೋಗುವ ವಾಹನಗಳು ಹೆಬ್ರಿ- ಕುಚ್ಚುೂರು – ಮಡಾಮಕ್ಕಿ – ಸೋಮೇಶ್ವರ ಮಾಗ೯ವಾಗಿ ಸಂಚಾರ ಮುಂದುವರಿಸಿದವು.
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಇಡೀ ರಾತ್ರಿ ನಿರಂತರವಾಗಿ ಮಳೆ ಸುರಿದಿದೆ.
ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದಾಗಿ ಕಳಸ-ಹೊರನಾಡು ಸಂಚಾರ ಸ್ಥಗಿತವಾಗಿದೆ.
ಭಾರೀ ಮಳೆಗಾಳಿಗೆ ಜಾವಳಿ ಎಸ್ಟೇಟ್ ಬಳಿ ಗುಡ್ಡ ಕುಸಿತವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸ್ನಾನ ಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಭಾರಿ ಮಳೆಯಿಂದಾಗಿ ಸುಬ್ರಹ್ಮಣ್ಯ- ಮಂಜೇಶ್ವರ ಸಂಪರ್ಕ ರಸ್ತೆಯ ಇನ್ನೊಂದು ಭಾಗದ ಕುಮಾರಧಾರ ಸೇತುವೆಯು ಮುಳುಗಡೆಯಾಗಿದ್ದು, ಸುಬ್ರಹ್ಮಣ್ಯ- ಕಾಣಿಯೂರು ಸಂಪರ್ಕ ಕಡಿತವಾಗಿದೆ. ಕುಮಾರಧಾರ ನದಿ ತಟದ ಹಲವು ಜನವಸತಿ ಪ್ರದೇಶಗಳು ಜಲಾವ್ರತವಾಗಿದೆ. ಕುಮಾರಧಾರ ದ್ವಾರದತ್ತ ನೆರೆ ನೀರು ಹರಿದು ಬರುತ್ತಿದೆ.
ಸುಬ್ರಹ್ಮಣ್ಯ ಕುಮಾರಧಾರ ನದಿ ಪಾತ್ರದ ಕುಲ್ಕುಂದ ಕಾಲನಿಯ ಹಲವು ಮನೆಗಳು ಜಲಾವ್ರತವಾಗಿವೆ. ಕುಟುಂಬಗಳನ್ನು ಪಕ್ಕದ ಸುರಕ್ಷಿತ ಸ್ಥಳಗಳಿಗೆ ಗ್ರಾ.ಪಂ ಅಧಿಕಾರಿ, ಸದಸ್ಯರು ಸ್ಥಳಾಂತರಿಸುತಿದ್ದಾರೆ.ಇನ್ನು ಈ ಭಾಗದಲ್ಲಿ ಗಂಜಿ ಕೇಂದ್ರ ತೆರೆದಿಲ್ಲ ಸಂತ್ರಸ್ಥರನ್ನು ಸಂಬಂಧಿಕರ ನೆರೆಯ ಸುರಕ್ಷಿತ ಮನೆಗಳಿಗೆ ಕಳುಹಿಸಿಕೊಡಲಾಗುತ್ತಿದೆ.