Advertisement

Heavy Rain ದಿಡುಪೆ, ಮಿತ್ತಬಾಗಿಲು ಪ್ರದೇಶದಲ್ಲಿ ಉಕ್ಕಿ ಹರಿದ ನದಿ: ಜನರ ಸ್ಥಳಾಂತರ

11:52 PM Aug 19, 2024 | Team Udayavani |

ಬೆಳ್ತಂಗಡಿ: ಕೇವಲ ಒಂದು ತಾಸಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ದಿಡುಪೆ, ಮಿತ್ತಬಾಗಿಲು, ಅರ್ಬಿ ಫಾಲ್ಸ್‌, ಕಡಮಗುಂಡಿ ಕಡೆಯಿಂದ ಬಂದ ನೀರಿನ ಪ್ರಮಾಣ ನೇತ್ರಾವತಿ ಉಕ್ಕಿ ಹರಿವಂತೆ ಮಾಡಿದ್ದು ಪ್ರವಾಹದ ಭೀತಿ ಎದುರಾಗಿತ್ತು.

Advertisement

ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೀರು ಏರಿಕೆ ಯಾಗಿದೆ. ನೀರಿನ ಮಟ್ಟ 2019ರಲ್ಲಿ ಬಂದ ಪ್ರವಾಹವನ್ನು ಮೀರಿಸುವಂ ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ನೇತ್ರಾವತಿ ಉಗಮ ಸ್ಥಳ ದಿಂದ ನೀರು ದೊಡ್ಡ ಪ್ರಮಾಣದಲ್ಲಿ ಬಾರದ ಕಾರಣ ಹೆಚ್ಚಿನ ಅನಾಹುತ ಆಗಿಲ್ಲ.

ನೀರಿನ ತೀವ್ರತೆಯಿಂದಾಗಿ ದಿಡುಪೆ ಮಲ್ಲ ಸಾಗುವ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಮಿತ್ತ ಬಾಗಿಲು, ದಿಡುಪೆ, ಬರ್ಕಳೊಟ್ಟು ಬನದಬಾಗಿಲು ಶಶಿಧರ್‌ ಅವರ ಮನೆ ವರೆಗೆ ನೀರು ನುಗ್ಗಿದ್ದು, ತೋಟ, ಗದ್ದೆ ಜಲಾವೃತವಾಗಿದೆ. ಸಮೀಪದ ಬಿರ್ಮನೊಟ್ಟು ರಾಜಪ್ಪ ಗೌಡರ ಮನೆಗೆ ನೀರು ನುಗ್ಗಿದೆ. ದಿಡುಪೆ ಪಂಚಾಯತ್‌ ಕಟ್ಟಡದ ಎದುರು ತಡೆಗೋಡೆಗೆ ಹಾನಿಯಾಗಿದ್ದು, ರಮೇಶ್‌ ಗೌಡರ ಮನೆಗೂ ನೀರು ನುಗ್ಗಿದೆ.

ಕೊಲ್ಲಿ-ಕಲೆಟ್ಟು ಪನಿಕಲ್‌ ಸಾಗುವ ರಸ್ತೆಯ ಮೋರಿ ಕುಸಿದಿದ್ದು, ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಕುಕ್ಕಾವು ಹಾಗೂ ಎರ್ಮಾಲ್‌ ಪಲ್ಕೆ ಭಾಗದಲ್ಲಿ ಅತಿ ಹೆಚ್ಚು ನೀರು ಬಂದಿರುವುದರಿಂದ ನೇತ್ರಾವತಿ ನೀರು ಹರಿವು ಹೆಚ್ಚಳವಾಗಿದೆ. ಮಳೆ ಪ್ರಮಾಣ ಕಂಡಾಗ ಘಾಟಿಯ ಅಲ್ಲಲ್ಲಿ ನೀರಿನ ಝರಿ ಇಳಿಯುವ ದೃಶ್ಯ ಆತಂಕಕ್ಕೆ ಕಾರಣವಾಗಿತ್ತು.

ದಿಡುಪೆ ಗಣೇಶನಗರದ ಅಪಾಯ ದಲ್ಲಿರುವ ಮನೆ ಮಂದಿ ಯನ್ನು ಸ್ಥಳಾಂತರಿಸಲಾಗಿದೆ. ವಿಶೇಷವೆಂದರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಸಹಿತ ಬೇರ್ಯಾವ ಪ್ರದೇಶದಲ್ಲಿ ಮಳೆ ಸುರಿದಿಲ್ಲ. ಕೇವಲ ಘಟ್ಟ ಪ್ರದೇಶದಲ್ಲಿ ಬಂದ ಮಳೆಯಿಂದಾಗಿ ನೇತ್ರಾವತಿ ಉಕ್ಕಿ ಹರಿದು ಆತಂಕ ಸೃಷ್ಟಿಸಿತ್ತು.

Advertisement

ಉಡುಪಿಯಲ್ಲಿ
ಉಡುಪಿ: ಜಿಲ್ಲೆಯ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಬಿಸಲು-ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಅನಂತರ ಪದೇಪದೆ ಮಳೆ ಸುರಿದಿದೆ. ಬೈಂದೂರು, ಕುಂದಾಪುರ, ಅಮಾಸೆಬೈಲು, ಬ್ರಹ್ಮಾವರ, ಹೆಬ್ರಿ, ಕಾರ್ಕಳ, ಪಡುಬಿದ್ರಿ, ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ರವಿವಾರ ತಡರಾತ್ರಿಯೂ ಹಲವೆಡೆ ಕೆಲಕಾಲ ಮಳೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ಬಿಸಿಲು, ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಹಗಲು ವೇಳೆಯಲ್ಲಿ ಬಿಸಿಲ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ಗ್ರಾಮಾಂತರ ಪ್ರದೇಶಗಳು ಸಹಿತ ವಿವಿಧೆಡೆ ಮಳೆ ಮಳೆಯಾಗಿದೆ.

ಕೆಲವು ದಿನಗಳಿಂದ ವಾತಾವರಣ ಯಥಾಸ್ಥಿತಿಯಿದ್ದು, ಕ್ಷೀಣವಾಗಿರುವ ಮುಂಗಾರು ಮಳೆ ಬಿರುಸು ಪಡೆದಿಲ್ಲ. ಈ ವಾರಾಂತ್ಯದ ವರೆಗೂ ಮಳೆ ಬಿರುಸಾಗುವ ಸಾಧ್ಯತೆ ಇಲ್ಲ. ಸದ್ಯದ ಮುನ್ಸೂಚನೆಯಂತೆ ಮಂಗಳವಾರಕ್ಕೆ ಕರಾವಳಿಗೆ ಎಲ್ಲೋ ಅಲರ್ಟ್‌ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಬುಧವಾರದಿಂದ ಯಾವುದೇ ಅಲರ್ಟ್‌ ಇಲ್ಲ. ವ್ಯಾಪಕ ಮಳೆಯ ಸಾಧ್ಯತೆ ಸದ್ಯಕ್ಕಿಲ್ಲ.

ಮಂಗಳೂರಿನಲ್ಲಿ ದಿನದ ತಾಪಮಾನ ಗರಿಷ್ಠ 30.8 ಡಿ.ಸೆ. ದಾಖಲಾಗಿದ್ದು, ಕನಿಷ್ಠ 25.1 ಡಿ.ಸೆ.ದಾಖಲಾಗಿದೆ. ಬಿಸಿಲ ಝಳ ಹೆಚ್ಚಾಗುತ್ತಿದ್ದು, ಕೆಲವೊಮ್ಮೆ ಆಕಾಶದಲ್ಲಿ ಮೋಡವೂ ಕಾಣಿಸುವುದರಿಂದ ಉರಿ ಬಿಸಿಲಿನ ಅನುಭವವಾಗುತ್ತಿದ್ದು, ಬೆವರುವಿಕೆಯೂ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next