Advertisement

ಮಹಾಮಳೆಗೆ ಮುಂಬೈ ತತ್ತರ

01:25 AM Jul 02, 2019 | mahesh |

ಮುಂಬೈ: ಮುಂಗಾರು ಮಳೆಯ ಅಬ್ಬರಕ್ಕೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿದೆ. ಭಾನುವಾರ ಸ್ವಲ್ಪಮಟ್ಟಿಗೆ ವಿರಮಿಸಿದ್ದ ವರುಣ ಸೋಮವಾರ ಮತ್ತೆ ಬಲಪ್ರದರ್ಶನ ಮಾಡಿದ್ದಾನೆ.

Advertisement

ಸೋಮವಾರ ಬೆಳಗ್ಗಿನಿಂದಲೇ ಮುಂಬೈನಾದ್ಯಂತ ಭಾರೀ ಮಳೆಯಾಗಿದ್ದು, ಜನರು ಮನೆಯಿಂದ ಹೊರಬರಲೂ ಹೆದರುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಗಳೆಲ್ಲ ಜಲಾವೃತವಾಗಿದ್ದು, ರೈಲು ಹಳಿಗಳಲ್ಲೂ ನೀರು ತುಂಬಿದ ಕಾರಣ ಎಲ್ಲ ಮಾರ್ಗಗಳಲ್ಲೂ ರೈಲುಗಳ ಸಂಚಾರ ವಿಳಂಬವಾಯಿತು. ಚೆಂಬೂರ್‌ನ ಕೆಲವು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನರು ಬೃಹನ್ಮುಂಬೈ ಪಾಲಿಕೆಗೆ ಹಿಡಿಶಾಪ ಹಾಕಿದರು. ನಗರದ 12 ಪ್ರದೇಶಗಳಲ್ಲಿ ಗೋಡೆ ಕುಸಿತದ ಪ್ರಕರಣಗಳು ವರದಿಯಾದವು. ಕೇವಲ 2 ದಿನಗಳಲ್ಲಿ ನಗರವು 540 ಮಿ.ಮೀ. ಮಳೆಯನ್ನು ಕಂಡಂತಾಗಿದೆ ಎಂದು ಪಾಲಿಕೆ ಆಯುಕ್ತ ಪ್ರವೀಣ್‌ ಪರ್ದೇಶಿ ತಿಳಿಸಿದ್ದಾರೆ.

ಇದೇ ವೇಳೆ, ಜು.2, 4 ಮತ್ತು 5ರಂದು ಥಾಣೆ ಹಾಗೂ ಪಾಲ್ಗರ್‌ನಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಡಿಶಾದಲ್ಲಿ ಭಾರೀ ಮಳೆ: ಈ ನಡುವೆ, ಬಂಗಾಳಕೊಲ್ಲಿಯ ವಾಯವ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮವಾಗಿ ಮಂಗಳವಾರ ಒಡಿಶಾದ 8 ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್‌ನಲ್ಲಿ ವಿಪರೀತ ಮಾನ್ಸೂನ್‌ ಕೊರತೆ
ನವದೆಹಲಿ: ಜೂನ್‌ನಲ್ಲಿ ಈ ವರ್ಷ ಸುರಿದ ಮಳೆಯು 2015ರಲ್ಲಿ ಸುರಿದ ಮಳೆಗಿಂತ ಕಡಿಮೆಯಾಗಿದ್ದು, ದೇಶದ ಹಲವು ಭಾಗಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಶೇ.33ರಷ್ಟು ಮಳೆ ಕೊರತೆ ಜೂನ್‌ನಲ್ಲಿ ಉಂಟಾಗಿದೆ. ದೇಶದ ಪ್ರಮುಖ 91 ಜಲಾಶಯಗಳ ಪೈಕಿ ಶೇ.80ರಷ್ಟು ಜಲಾಶಯಗಳು ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿವೆ. ಈ ವರ್ಷ ಮಾನ್ಸೂನ್‌ ಕರಾವಳಿಗೆ ಅಪ್ಪಳಿಸುವಲ್ಲಿ ಭಾರಿ ವಿಳಂಬವಾಗಿತ್ತು. ಸಾಮಾನ್ಯವಾಗಿ ಜೂನ್‌ 1 ಕ್ಕೆ ಮಳೆ ಆಗಮಿಸುತ್ತಿತ್ತಾದರೂ, ಈ ಬಾರಿ ಜೂನ್‌ 8ರಂದು ಬಂದಿತ್ತು. ಅಷ್ಟೇ ಅಲ್ಲ, ಮಾನ್ಸೂನ್‌ ಕರಾವಳಿಗೆ ಅಪ್ಪಳಿಸಿದ ನಂತರವೂ ಅದರ ಗತಿ ಅತ್ಯಂತ ಕಡಿಮೆ ಇದ್ದುದರಿಂದ, ದೇಶದ ಬಹುತೇಕ ಭಾಗಗಳಲ್ಲಿ ಮಳೆಯಾಗಲು ವಿಳಂಬವಾಗಿದೆ. ಶೇ. 90ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ಸಾಮಾನ್ಯಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಈ ಬಾರಿ ಜೂನ್‌ನಲ್ಲಿ ಶೇ. 67ರಷ್ಟು ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next