Advertisement

ಹೈರಾಣಾಗಿಸಿದ ವರುಣ; ರಾಜ್ಯದಲ್ಲಿ ಮೂವರ ಸಾವು; ಇಂದು ಭಾರೀ ಮಳೆ ಸಾಧ್ಯತೆ

02:32 AM May 19, 2022 | Team Udayavani |

ಬೆಂಗಳೂರು: ಮುಂಗಾರು ಪ್ರವೇಶಕ್ಕೂ ಮೊದಲೇ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಜನರು ಹೈರಾಣಾಗಿದ್ದಾರೆ. ಕಳೆದ 3-4 ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದ್ದು, ಮೇ 21ರ ವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Advertisement

ಮಳೆಯಬ್ಬರದಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕೃಷಿ ಚಟುವಟಿಕೆಯೂ ಸ್ಥಗಿತಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಸಂಬಂಧಿ ಘಟನೆಗಳಿಂದ ಹಾಸನದ ಹೊಳೆನರಸೀಪುರ ತಾಲೂಕಿನಲ್ಲಿ ಯುವಕನೊಬ್ಬ ಮೃತಪಟ್ಟರೆ, ಬೆಂಗಳೂರಿನಲ್ಲಿ ಇಬ್ಬರು ಕಾರ್ಮಿಕರು ಅಸುನೀಗಿದ್ದಾರೆ.

ಶುಕ್ರವಾರ ಮತ್ತು ಶನಿವಾರವೂ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗ ಮಾತ್ರವಲ್ಲದೆ, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ಚಾಮರಾಜನಗರ ಸಹಿತ ಹಲವು ಜಿಲ್ಲೆಗಳಲ್ಲಿ ಸತತ ಮಳೆಯಾಗುತ್ತಿದೆ.

ಮಂಗಳವಾರ ರಾತ್ರಿಯಿಂದೀಚೆಗೆ ಧಾರಾಕಾರ ಮಳೆ ಯಾದ ಕಾರಣ ಹಾಸನದಲ್ಲಿ ಶಾಲೆಗಳಿಗೆ ರಜೆ ಘೋಷಿಸ ಲಾಗಿದೆ. ಬೇಲೂರು ತಾಲೂಕು ಅರೇಹಳ್ಳಿ ಸಂತೆ ಮೈದಾನದ ಬಳಿ ಇರುವ ಮರದ ಪೀಠೊಪಕರಣಗಳ ಅಂಗಡಿಗೆ ಸಿಡಿಲು ಬಡಿದು ಲಕ್ಷಾಂತರ ರೂ. ಮೌಲ್ಯದ ಮರಮಟ್ಟುಗಳು ಅಗ್ನಿಗಾಹುತಿಯಾಗಿವೆ.

ಚನ್ನರಾಯಪಟ್ಟಣ, ಮೈಸೂರು ಜಿಲ್ಲೆಯ ಹುಣಸೂರು, ಎಚ್‌.ಡಿ. ಕೋಟೆಯಲ್ಲಿ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಂಡ್ಯದಲ್ಲಿ ಬಾಲಕಿ ಯರ ಪ್ರೌಢಶಾಲೆ ಜಲಾವೃತವಾಗಿದೆ. ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲ, ಕೆ.ಆರ್‌.ಪೇಟೆ, ಪಾಂಡವಪುರ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗುತ್ತಿದ್ದು, ಕೆಲವು ಕೆರೆಕಟ್ಟೆಗಳು ಈಗಾಗಲೇ ಕೋಡಿ ಬಿದ್ದಿವೆ.
ರಾಯಚೂರು ಜಿಲ್ಲೆಯಲ್ಲಿ ಗಾಳಿ ಮಳೆಗೆ ಹಲವಾರು ಗುಡಿಸಲುಗಳು ನೆಲಸಮವಾಗಿವೆ. ಚರಂಡಿ ನೀರು ರಸ್ತೆಯಲ್ಲೇ ಹರಿದು ಅವಾಂತರ ಸೃಷ್ಟಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಏರಿಕೆಯಾಗುತ್ತಿದೆ.

Advertisement

ದ.ಕ.ದಲ್ಲಿ ಉತ್ತಮ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಮತ್ತೆ ಬಿರುಸು ಪಡೆದಿದ್ದು, ಬುಧವಾರ ದಿನವಿಡೀ ಹಲವು ಕಡೆ ಗಳಲ್ಲಿ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಅರಂತೋಡಿನ ಸೇವಾಜೆಯಲ್ಲಿ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದೆ. ವೇಣೂರು ಚರ್ಚ್‌ ಬಳಿ ರಾಜ್ಯ ಹೆದ್ದಾರಿ ಯಲ್ಲಿ ಬೃಹದಾಕಾರದ ಮರ ಬಿದ್ದು ವಿದ್ಯುತ್‌ ತಂತಿ ತುಂಡಾಗಿದೆ. ರಿಯಾದ್‌ನಿಂದ ಕಲ್ಲಿಕೋಟೆಗೆ ತೆರಳುವ ವಿಮಾನ ಪ್ರತಿಕೂಲ ಹವಾಮಾನದಿಂದಾಗಿ ಮಂಗಳೂರಿನಲ್ಲೇ ಇಳಿದಿದೆ.

ಮೇ 27ಕ್ಕೆ ಮುಂಗಾರು ಪ್ರವೇಶ
ಇದೇ 27ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದಲ್ಲಿ ಬುಧವಾರವೂ ಮಳೆ ಮುಂದುವರಿದಿದ್ದು, 4 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.
ತಮಿಳು ನಾಡಿನ 17 ಜಿಲ್ಲೆಗಳಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿವೆ. ಇನ್ನೊಂದೆಡೆ, ಅಸ್ಸಾಂನಲ್ಲಿ ಮಳೆ ಹಾಗೂ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 8ಕ್ಕೇರಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ನಿರ್ವ ಸಿತರಾಗಿದ್ದಾರೆ.

ಇಂದು ಆರೆಂಜ್‌ ಅಲರ್ಟ್‌
ಗುರುವಾರ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗಾಳಿ ಮತ್ತು ಸಿಡಿಲಿನೊಂದಿಗೆ ಭಾರೀ ಮಳೆ ಯಾಗುವ ಸಾಧ್ಯತೆಗಳಿದ್ದು, ಆರೆಂಜ್‌ ಅಲರ್ಟ್‌ ಘೋಷಿಸ  ಲಾಗಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆ ಗಳಲ್ಲಿ ಎಲ್ಲೋ ಮತ್ತು ಆರೆಂಜ್‌ ಅಲರ್ಟ್‌ ಘೋಷಿಸಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ರಾಮನಗರ, ಮೈಸೂರು,
ಮಂಡ್ಯ, ಚಾಮರಾಜ ನಗರ ಜಿಲ್ಲೆಗಳಿಗಳಿಗೂ ಆರೆಂಜ್‌ ಅಲರ್ಟ್‌ ಘೋಷಿಸಿದೆ. ತುಮಕೂರು, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌ ಘೋಷಿಸಿದೆ.

ಬೆಂಗಳೂರಿನಲ್ಲಿ ಶತಮಾನದ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಶತಮಾನದ ಮಳೆ ಸುರಿದಿದೆ. ಮೇ ತಿಂಗಳಿನಲ್ಲಿ ದಿನವೊಂದರ ದಾಖಲೆಯ 114.6 ಮಿ.ಮೀ. ಮಳೆಯಾಗಿದೆ. 1909ರ ಮೇ 6ರಂದು ಬೆಂಗಳೂರಿನಲ್ಲಿ 153.9 ಮಿ.ಮೀ. ಮಳೆಯಾಗಿತ್ತು. ಅನಂತರ ಈ ಮಟ್ಟದ ದಾಖಲೆ ಮಳೆ ಸುರಿದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನುಳಿದಂತೆ ಮೈಸೂರು, ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ 12 ಸೆಂ.ಮೀ. ಮಳೆಯಾಗಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 10 ಸೆಂ.ಮೀ., ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ತುಮಕೂರು, ಕೊಡಗು ಜಿಲ್ಲೆಗಳಲ್ಲಿ 9 ಸೆಂ.ಮೀ. ಮಳೆಯಾಗಿದೆ ಎಂದು ತಿಳಿಸಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next