Advertisement
ಉಪ್ಪಿನಂಗಡಿಯಲ್ಲಿ ಆ. 6ರಿಂದ 24 ತಾಸುಗಳ ಅವಧಿಯಲ್ಲಿ 154.2 ಮಿ.ಮೀ. ಮಳೆಯಾಗಿದ್ದು, ನೇತ್ರಾವತಿ ನದಿಯ ನೀರಿನ ಮಟ್ಟ 24 ಮೀಟರ್‌ಗೇರಿದೆ. ಕುಮಾರಧಾರಾ ನದಿಯಲ್ಲೂ ನೀರು ರಭಸವಾಗಿ ಹರಿಯುತ್ತಿದೆ. ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಹರಿವಿಗೆ ತಡೆಯಾಗುತ್ತಿದೆ. ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ನಸುಕಿನ ಜಾವ ಮೂರು ಗಂಟೆಗೆ 6 ಮೆಟ್ಟಿಲುಗಳು ಮಾತ್ರ ಕಾಣುತ್ತಿದ್ದವು. ಆ ಬಳಿಕ ನೀರಿನ ಮಟ್ಟ ಕಡಿಮೆಯಾಗಿ 14 ಮೆಟ್ಟಿಲು ಗೋಚರಿಸಿದವು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮತ್ತೆ ನೀರಿನ ಮಟ್ಟ ಏರಿ, 7 ಮೆಟ್ಟಿಲುಗಳಷ್ಟೇ ಕಾಣುತ್ತಿದ್ದವು. ಇವು ಮುಳುಗಿದರೆ ನದಿ ನೀರು ದೇವಾಲಯದ ಆವರಣವನ್ನು ಪ್ರವೇಶಿಸುತ್ತದೆ.
ತುರ್ತು ಕಾರ್ಯಾಚರಣೆಗಾಗಿ ತಂಡ ಸನ್ನದ್ಧವಾಗಿದ್ದು, ದೇವಾಲಯದ ಬಳಿ ಬೀಡು ಬಿಟ್ಟಿರುವ ಈ ತಂಡ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಎರಡು ದೋಣಿಗಳು ಇವೆ. ಗೃಹ ರಕ್ಷಕ ದಳದ ಘಟಕಾಧಿಕಾರಿ ದಿನೇಶ್ ನೇತೃತ್ವದಲ್ಲಿ ತಂಡ ಸಿದ್ಧವಿದ್ದು, ಜನಾರ್ದನ್, ನಿಖೀಲ್ ರಾಜ್, ಸೋಮನಾಥ, ಅಣ್ಣು ಬಿ., ವಸಂತ, ಸಮದ್ ಸಹಿತ 7 ಜನರಿದ್ದಾರೆ. ಇಬ್ಬರು ಈಜುಗಾರರು ಹಾಗೂ ಒಬ್ಬರು ಎಲೆಕ್ಟ್ರಿಷಿಯನ್. ಕಂದಾಯ ಇಲಾಖೆಯು ನುರಿತ ಈಜುಗಾರರಾದ ವಿಶ್ವನಾಥ ಶೆಟ್ಟಿಗಾರ್, ಚೆನ್ನಪ್ಪ ಹಾಗೂ ಸುದರ್ಶನ್ ಅವರನ್ನು ನೇಮಿಸಿದೆ. ಅಗತ್ಯವಿದ್ದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಂಜಿ ಕೇಂದ್ರ ತೆರೆಯಲು ಸ್ಥಳ ಕಾಯ್ದಿರಿಸಿದೆ. ನೋಡಲ್ ಅಧಿಕಾರಿಗಳು, ಕಂದಾಯ ಇಲಾಖಾಧಿಕಾರಿಗಳು ಕ್ಷಣ ಕ್ಷಣದ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡುತ್ತಿದ್ದಾರೆ.