Advertisement
ಶೃಂಗೇರಿ ಮುಳುಗಡೆ ಭೀತಿ ಎದುರಿಸುತ್ತಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಮೂಡಿಗೆರೆ ತಾಲೂಕಿನ ಹೆಬ್ಟಾಳೆ ಸೇತುವೆ ಭದ್ರಾ ನದಿಯಲ್ಲಿ ಮುಳುಗಿ ಹೋಗಿದ್ದು, ಕಳಸ-ಹೊರನಾಡು ಸಂಪರ್ಕ, ನೆಲ್ಲಿಬೀಡಿನಲ್ಲಿ ಸೇತುವೆ ಮುಳುಗಿ ಕಳಸ-ಕುದುರೆಮುಖ ರಸ್ತೆ ಸಂಪರ್ಕ, ಬನ್ನೂರು-ಮಾಲಗೋಡು ಬಳಿ ಸೇತುವೆ ಮುಳುಗಿ ಕಳಸ-ಬಾಳೆಹೊನ್ನೂರು ಸಂಪರ್ಕ ಕಡಿತಗೊಂಡಿದೆ. ಇನ್ನು ಎನ್.ಆರ್.ಪುರ ತಾಲೂಕಿನ ಕೆರೆಕಟ್ಟೆಯಲ್ಲಿ ಬೆ.8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ 375 ಮಿ.ಮೀ. ಮಳೆಯಾಗಿದೆ.
ಶ್ರೀಶಾರದಾಂಬೆ ಸನ್ನಿಧಿ ಶೃಂಗೇರಿಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಹಲವಾರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜೂನ್ ಆರಂಭದಲ್ಲೇ ತುಂಗಾ ತುಂಬಿ ಹರಿಯುತ್ತಿದ್ದಾಳೆ. ಗುರುವಾರ ಮಧ್ಯಾಹ್ನದ ವೇಳೆಗೆ ತುಂಗೆ ಅಪಾಯದ ಮಟ್ಟ ಮೀರಿದ್ದು ಪ್ರವಾಹ ಉಂಟಾಗಿದೆ. ಶ್ರೀಮಠದಿಂದ ಶ್ರೀಗಳು ವಾಸ್ತವ್ಯವಿರುವ ನರಸಿಂಹವನದ ಗುರುಭವನಕ್ಕೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಶ್ರೀಗಳ ಸಂಧ್ಯಾವಂದನಾ ಮಂಟಪ ಸಂಪೂರ್ಣ ಮುಳುಗಿದೆ. ಗುರುಭವನದಲ್ಲಿದ್ದ ಶ್ರೀ ಮಠದ ಸಿಬ್ಬಂದಿ ಹಾಗೂ ಭಕ್ತರು ಪಟ್ಟಣದ ಸಂಪರ್ಕ ಕಳೆದುಕೊಂಡಿದ್ದಾರೆ.ಶೃಂಗೇರಿ- ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಮುರುವಿನಕೊಂಬೆ ಬಳಿ ಗುಡ್ಡ ಕುಸಿದು ಸಂಚಾರ ಬಂದ್ ಆಗಿತ್ತು. ಮಧ್ಯಾಹ್ನ ನಂತರ ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಜೆ ಹಿನ್ನೆಲೆಯಲ್ಲಿ ಶೃಂಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಶುಕ್ರವಾರೂ ರಜೆ ಘೋಷಿಸಲಾಗಿದೆ. ಎಲ್ಲೆಲ್ಲಿ ರಸ್ತೆ ಸಂಚಾರ ಸ್ಥಗಿತ?
ಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಅಲ್ಲಲ್ಲಿ ಸೇತುವೆಗಳು ಮುಳುಗಿವೆ. ಹೀಗಾಗಿ ಕಳಸ-ಹೊರನಾಡು, ಕಳಸ-ಕುದುರೆಮುಖ, ಕಳಸ-ಬಾಳೆಹೊನ್ನೂರು ಸಂಪರ್ಕ ಕಡಿತಗೊಂಡಿತ್ತು. ಅದರಲ್ಲೂ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನೆಲ್ಲಿವೀಡು ಸೇತುವೆ ಮುಳುಗಿ ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿತ್ತು. ಚಾರ್ಮಾಡಿ ಘಾಟ್‌ನಲ್ಲಿ ಮಣ್ಣು ಕುಸಿದಿದ್ದರಿಂದ ವಾಹನಗಳು ಈ ಮಾರ್ಗದಲ್ಲಿ ಮಂಗಳೂರಿಗೆ ಹೋಗುತ್ತಿದ್ದವು. ಹೆಚ್ಚಿನ ವಾಹನ ಸಂಚಾರವಿದ್ದುದರಿಂದ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು. ಸುತ್ತಲ ಗ್ರಾಮಸ್ಥರೇ ಪ್ರಯಾಣಿಕರಿಗೆ ಊಟ-ಉಪಹಾರದ ವ್ಯವಸ್ಥೆ ಮಾಡಿದ್ದರು. ಈ ಮಧ್ಯೆ, ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ತಿತಿಮತಿ ಬಳಿ ಸೇತುವೆ ಕುಸಿತದಿಂದಾಗಿ ಮೈಸೂರು-ತಲಚೇರಿ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಮಾರ್ಪಾಡು ಮಾಡಲಾಗಿದೆ.
Related Articles
ಈ ನಡುವೆ ಗುಡ್ಡ ಕುಸಿತದಿಂದ ಸಂಚಾರ ಸ್ಥಗಿತಗೊಂಡಿದ್ದ ಚಾರ್ಮಾಡಿ ಘಾಟಿಯಲ್ಲಿ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಲಘು ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ. ಅಣ್ಣಾಮಲೈ ತಿಳಿಸಿದ್ದಾರೆ. ಪಶ್ಚಿಮಘಟ್ಟ ಶ್ರೇಣಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಎರಡು ದಿನಗಳ ಹಿಂದೆ ಚಾರ್ಮಡಿ ಘಾಟಿಯಲ್ಲಿ ಗುಡ್ಡ ಕುಸಿದು ರಸ್ತೆ ವಾಹನ ಸಂಚಾರ ನಿಷೇಧಿಸಲಾಗಿತ್ತು.
Advertisement
22 ಕೋಟಿ ಪರಿಹಾರ ಬಿಡುಗಡೆದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನದಿಂದ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಹಾನಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ತುರ್ತಾಗಿ 22 ಕೋ.ರೂ. ಹಣವನ್ನು ಬಿಡುಗಡೆ ಮಾಡಿದೆ ಎಂದು ರಾಜ್ಯ ಕಂದಾಯ ಹಾಗೂ ಕೌಶಲಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು. ಭಾರೀ ಮಳೆಯ ಕಾರಣ ಮನೆ ಹಾನಿಯಾದ ಮಂಗಳೂರಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.