ಮುಂಬೈ:ದೇಶದವಾಣಿಜ್ಯ ನಗರಿಯೆಂದೇ ಖ್ಯಾತಿ ಪಡೆದಿರುವ ಮುಂಬೈ ಅಕ್ಷರಶಃ ವರುಣಾಘಾತಕ್ಕೀಡಾಗಿದೆ. ಇಡೀ ವಾಣಿಜ್ಯ ನಗರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಒಂದೇ ದಿನ 280 ಮಿ. ಮೀ.ನಷ್ಟು ಮಳೆಯಾಗಿದೆ. ಹಾಗಾಗಿ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಡೀ ಮುಂಬೈ ಮಹಾನಗರ ಮತ್ತು ಮಹಾರಾಷ್ಟ್ರದ ಕರಾವಳಿ ಭಾಗಕ್ಕೆ “ರೆಡ್ ಅಲರ್ಟ್’ ಘೋಷಿಸಿದೆ.
ಅದರ ಜೊತೆಯಲ್ಲೇ ಮುಂಬೈನ ಉಪನಗರಗಳಾದ ಥಾಣೆ, ರಾಯಗಢದಲ್ಲೂ ರೆಡ್ ಅಲರ್ಟ್ ಹಾಗೂ ಪಾಲ್ಗಾರ್‌ನಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದ್ದು, ಈ ಪ್ರಾಂತ್ಯಗಳಲ್ಲಿ ಭಾರಿಯಿಂದ ಅತಿ ಭಾರಿ ಯಾದ ಮಳೆ ಸುರಿಯಲಿದ್ದು, ಹಲವಾರು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆಯಿದೆ ಐಎಂಡಿ ಎಚ್ಚರಿಸಿದೆ.
ಧಾರಾಕಾರ ಮಳೆ: ಮುಂಬೈನ ದಕ್ಷಿಣ, ಪಶ್ಚಿಮ, ಉತ್ತರ ಭಾಗಗಳು ಹೆಚ್ಚು ತೊಂದರೆಗೆ ಒಳಗಾಗಿವೆ. ಬುಧವಾರ ಬೆಳಗಿನ ಜಾವ 5:30ರ ಹೊತ್ತಿಗೆ, ಕೊಲಾಬದಲ್ಲಿ 122.2 ಮಿ.ಮೀ.ನಷ್ಟು ಮಳೆ ಸುರಿದಿದ್ದು, ಸ್ಯಾಂಟಾಕ್ರೂಸ್‌ನಲ್ಲಿ 273.6 ಮಿ.ಮೀ. ಮಳೆ ಸುರಿದಿದೆ. ಅಂಧೇರಿ, ಜೋಗೇಶ್ವರಿ, ಗುರೇಗಾಂವ್, ಮಲಾದ್ ಹಾಗೂ ಬೊರಿ ವಿಲಿ ಪ್ರಾಂತ್ಯಗಳಲ್ಲಿ ಸುಮಾರು 70 ಮಿ.ಮೀ.ನಷ್ಟು ಮಳೆಯಾಗಿದೆ. ಮಳೆ ಯಿಂದಾಗಿ ಸ್ಥಳೀಯ ರೈಲು ಸಂಚಾರಕ್ಕೆ ಅಡ್ಡಿ ಉಂಟಾಯಿತು.
ರಜೆ ನೀಡಿಕೆ: ಮುಂಬೈನ ಎಲ್ಲಾ ಶಾಲಾ-ಕಾಲೇಜುಗಳು, ಸ್ಥಳೀಯ ಸಂಸ್ಥೆಗಳಿಗೆ ಮುಂಬೈ ಮಹಾ ನಗರ ಪಾಲಿಗೆ ರಜೆ ಘೋಷಿಸಿದೆ.
ಹೈಕೋರ್ಟ್‌ಗೂ ರಜೆ: ಮುಂಬೈ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಹೈಕೋರ್ಟ್‌ನ ಎಲ್ಲಾ ಸಿಬ್ಬಂದಿಗೆ ಬುಧವಾರ ರಜೆ ಘೋಷಿಸಿದ್ದರು. ಹಾಗಾಗಿ, ಬುಧವಾರದಂದು, ನಡೆಯಬೇಕಿದ್ದ ರಿಯಾ ಚಕ್ರವರ್ತಿ ಅವರ ಜಾಮೀನು ಅರ್ಜಿ (ಸುಶಾಂತ್ ಸಿಂಗ್ ರಜಪೂತ್ ಪ್ರಕರಣ) ವಿಚಾರಣೆ ಮುಂದೂಡಲ್ಪಟ್ಟಿದೆ.