Advertisement
ಕುಮಾರಪರ್ವತದ ತಪ್ಪಲು ಪ್ರದೇಶ ಮತ್ತು ಸ್ಥಳೀಯವಾಗಿ ಸತತ ನಾಲ್ಕು ತಾಸು ಮಳೆ ಸುರಿಯಿತು. ದರ್ಪಣ ತೀರ್ಥ ತುಂಬಿ ಹರಿದ ಪರಿಣಾಮ ಆದಿಸುಬ್ರಹ್ಮಣ್ಯ ದೇಗುಲದ ಹೊರಾಂಗಣಕ್ಕೆ ನೀರು ನುಗ್ಗಿದೆ. ಆದಿ ದೇಗುಲದ ಅಶ್ವತ್ಥಕಟ್ಟೆ ಮುಳುಗಡೆಗೊಂಡಿತ್ತು. ದೇಗುಲದ ಆವರಣದೊಳಕ್ಕೆ ನೆರೆ ನೀರು ಹರಿದಿದೆ. ತೀರ್ಥ ಸ್ನಾನ ನೆರವೇರಿಸುವಲ್ಲಿ ಮೆಟ್ಟಿಲ ತನಕ ನೀರು ಹರಿದಿದೆ. ಪಕ್ಕದಲ್ಲೇ ಇರುವ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಹಿಂಭಾಗದ ಕೆಲವು ಪ್ರದೇಶಗಳು ಮುಳುಗಡೆಗೊಂಡವು.
ಇದೇ ಮೊದಲ ಬಾರಿಗೆ ದೇವರಗದ್ದೆಗೆ ತೆರಳುವ ಕಿರು ಸೇತುವೆ ಪೂರ್ಣ ಪ್ರಮಾಣದಲ್ಲಿ ಮುಳುಗಿತ್ತು. ಪರಿಸರದ ಹಲವು ವಸತಿಗೃಹಗಳಿಗೆ, ಸ್ಥಳೀಯ ನಾರಾಯಣ ಅವರ ಮನೆಗೆ ನೀರು ನುಗ್ಗಿದೆ. ದೇವರಗದ್ದೆ ಭಾಗಕ್ಕೆ ಸಂಪರ್ಕ ಕಡಿತಗೊಂಡಿತು. ದರ್ಪಣ ತೀರ್ಥ ನದಿ ಪಾತ್ರದ ಕೃಷಿ ಭೂಮಿ ಜಲಾವೃತಗೊಂಡವು. ಇಂತಹ ಮಳೆ ಈ ಹಿಂದೆ ಬಂದಿದ್ದರೂ ದರ್ಪಣ ತೀರ್ಥ ನದಿಯಲ್ಲಿ ಈ ಬಾರಿ ಇಷ್ಟೊಂದು ಪ್ರಮಾಣದಲ್ಲಿ ನೆರೆ ಹರಿದಿರುವುದು ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ. ಮಳೆ ನಿಂತ ಅರ್ಧ ತಾಸಿನಲ್ಲಿ ಪ್ರವಾಹ ಕೂಡ ಇಳಿಯಿತು. ಕ್ಷೇತ್ರದಲ್ಲಿ ಹರಿಯುವ ಕುಮಾರಧಾರಾ ನದಿಯಲ್ಲಿ ಅಷ್ಟೇನೂ ಪ್ರವಾಹ ಕಂಡು ಬಂದಿಲ್ಲ. ಗುತ್ತಿಗಾರು, ಪಂಜ, ಬಳ್ಪ ಐನಕಿದು, ಬಾಳುಗೋಡು ಕಲ್ಮಕಾರು, ಯೇನೆಕಲ್ ಕಡೆಗಳಲ್ಲಿ ಸಾಮಾನ್ಯ ಮಳೆಯಾಗಿದೆ.
Related Articles
ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ದರ್ಪಣ ತೀರ್ಥ ನದಿಯಲ್ಲಿ ನೆರೆ ಹರಿದರೂ ಯಾವುದೇ ರೀತಿಯ ಸಮಸ್ಯೆಗಳಾಗಿಲ್ಲ. ಭಕ್ತರಿಗೂ ತೊಂದರೆಯಾಗಿಲ್ಲ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
Advertisement
ಜಲಸ್ಫೋಟ ನೆನಪಿಸಿತುಕುಮಾರಧಾರಾ ನದಿಯಲ್ಲಿ ಅಷ್ಟೇನೂ ಹರಿವಿಲ್ಲದೆ ದರ್ಪಣ ತೀರ್ಥದಲ್ಲಿ ಮಾತ್ರ ಭಾರೀ ಪ್ರಮಾಣದಲ್ಲಿ ಕೆಂಬಣ್ಣದ ನೆರೆ ನೀರು ಹರಿದುಬಂದಿರುವುದು ಅಚ್ಚರಿ ಮತ್ತು ಆತಂಕ ಮೂಡಿಸಿತು. ದರ್ಪಣ ತೀರ್ಥ ಹುಟ್ಟುವ ಕುಮಾರ ಪರ್ವತ, ಪಶ್ಚಿಮ ಘಟ್ಟದ ಭಾಗದಲ್ಲಿ ಭಾರೀ ಮಳೆ ಆಗಿರುವ ಕಾರಣ ಇಷ್ಟು ನೆರೆ ಬಂದಿದೆ ಎನ್ನಲಾಗಿದೆ. ಕೆಲವೇ ತಿಂಗಳುಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಇದೇ ರೀತಿ ಒಮ್ಮೆಲೆ ಹೊಳೆ, ನದಿಗಳಲ್ಲಿ ದಿಢೀರ್ ನೆರೆ ಉಕ್ಕಿಬಂದು ಹಾನಿ ಉಂಟು ಮಾಡಿತ್ತು. ಆದರೆ ಅಲ್ಲಿ ನಡೆದಂತೆ ದರ್ಪಣ ತೀರ್ಥದಲ್ಲಿ ಮರ, ಬಂಡೆ ಇತ್ಯಾದಿಗಳು ಕೊಚ್ಚಿಕೊಂಡು ಬಂದಿಲ್ಲ ಎನ್ನುವುದು ಸಮಾಧಾನದ ಸಂಗತಿ.